ಭಟ್ಕಳ, ನವೆಂಬರ್ 18:ಬಕ್ರಿದ್ ಹಬ್ಬದ ಪ್ರಯುಕ್ತ ಮಂಗಳವಾರ ಭಟ್ಕಳ ಉಪವಿಭಾಗಾಧಿಕಾರಿ ತ್ರಿಲೋಕಚಂದ್ ನೇತೃತ್ವದಲ್ಲಿ ನಡೆದ ಶಾಂತಿ ಸಭೆಗೆ ಹಿಂದೂ ಸಂಘಟನೆಗಳು ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಶಾಂತಿ ಸಭೆಯಲ್ಲಿ ಎರಡೂ ಕೋಮಿನ ಮುಖಂಡರು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ, ಯಾವುದೇ ಸಾಫಲ್ಯತೆ ಕಂಡು ಬರಲಿಲ್ಲ. ಸಭೆಯ ಬಹಿಷ್ಕಾರದ ಕುರಿತಂತೆ ಪತ್ರಿಕೆಯೊಂದಿಗೆ ಮಾತನಾಡಿರುವ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರು, ಗೋಹತ್ಯೆಗೆ ನಮ್ಮ ವಿರೋಧವಿದೆ. ಯಾವುದೇ ಕಾರಣಕ್ಕೂ ಗೋಹತ್ಯೆ ತಡೆಗಟ್ಟುವ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ಸಭೆಯಲ್ಲಿ ಭಾಗವಹಿಸುವುದರಿಂದ ಗೋವುಗಳನ್ನು ಕರೆ ತರುವ ಒಪ್ಪಿಗೆಯ ಪಾಲುದಾರರಾಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಪಾಲ್ಗೊಂಡ ತಂಜೀಮ್ ಮುಖಂಡರುಗಳಾದ ಸೈಯದ್ ಬದ್ರುಲ್ಲಾ ಹಸನ್, ಇನಾಯಿತುಲ್ಲಾ ಶಾಬಂದ್ರಿ, ಸೈಯದ್ ಹಸನ್ ಬರ್ಮಾವರ್, ಎಸ್.ಜೆ.ಖಾಲೀದ್, ಅಬ್ದುಲ್ ರಕೀಬ್ ಎಮ್.ಜೆ., ಸನಾವುಲ್ಲಾ ಮುಂತಾದವರು ಮಾತನಾಡಿ, ಜಾನುವಾರುಗಳ ಸಾಗಾಟಕ್ಕೆ ಕಾನೂನು ಕ್ರಮಗಳನ್ನು ಅನುಸರಿಸಿದರೂ ವಿವಿಧ ಸಂಘಟನೆಗಳ ಹೆಸರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ತಡೆಯೊಡ್ಡಲಾಗುತ್ತಿದೆ. ರಾಜಸ್ತಾನ, ಮಹಾರಾಷ್ಟ್ರ ಕಡೆಗಳಿಂದ ಜಾನುವಾರುಗಳು ಯಾವುದೇ ಅಡೆತಡೆಯಿಲ್ಲದೆ ಜಿಲ್ಲೆಯನ್ನು ಪ್ರವೇಶಿಸುತ್ತಿವೆ. ಆದರೆ ಕುಮಾಟಾದ ಈಚೆಗೆ ತಡೆಯುವ ಕ್ರಮ ಪ್ರಾರಂಭವಾಗುತ್ತಿದೆ. ಇದು ಅಪ್ಪಟ ದ್ವೇಷದ ಪರಮಾವಧಿ ಎಂದು ಕಿಡಿಕಾರಿದರು.ಕೆಲವು ಕಡೆ ಅಕ್ರಮವಾಗಿ ಹಣವನ್ನು ಕೇಳಲಾಗುತ್ತದೆ. ಪೊಲೀಸರೂ ಕೆಲವು ಕಡೆ ಇದರ ಪಾಲುದಾರರಾಗಿದ್ದಾರೆ. ನಮಗೆ ನ್ಯಾಯವೆಂಬುದೇ ದೊರೆಯುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡರು.
ಇದಕ್ಕುತ್ತರಿಸಿದ ಸಭೆಯ ಅಧ್ಯಕ್ಷ ಹಾಗೂ ಭಟ್ಕಳ ಉಪವಿಭಾಗಾಧಿಕಾರಿ ತ್ರಿಲೋಕ ಚಂದ್, ಅದಕ್ಕೆ ಇನ್ನು ಮುಂದೆ ಅವಕಾಶ ನೀಡುವುದಿಲ್ಲ. ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಎಲ್ಲದಕ್ಕೂ ಕಾನೂನು ಪಾಲನೆ ಮುಖ್ಯವಾಗುತ್ತದೆ ಎಂದ ಅವರು ಶಾಂತಿ ಪಾಲನೆಗೆ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು. ಸಭೆಯಲ್ಲಿ ಡಿವಾಯ್‌ಎಸ್ಪಿ ವೇದಮೂರ್ತಿ, ಪ್ರೋಬೆಷನರಿ ಡಿವಾಯ್‌ಎಸ್ಪಿ ಕುಮಾರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.