ಮಂಗಳೂರು, ಅ.೧೨: ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಕರಾವಳಿ ಪ್ರದೇಶಗಳ ಭದ್ರತೆ ರಕ್ಷಣೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿವೆ. ಈ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಪಶ್ಚಿಮ ವಲಯ ಐಜಿಪಿ ಗೋಪಾಲ ಹೊಸೂರು ತಿಳಿಸಿದ್ದಾರೆ.
ಅವರು ಸೋಮವಾರ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಮಾಲ್ಡೀವ್ ಪೊಲೀಸ್ ಅಧಿಕಾರಿಗಳ 3 ದಿನಗಳ ತರಬೇತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕರಾವಳಿ ತೀರದಲ್ಲಿ ಭದ್ರತೆಯನ್ನು ಬಿಗಿ ಗೊಳಿಸುವ ನಿಟ್ಟಿನಲ್ಲಿ ದೇಶದ ಕರಾವಳಿ ಯಾದ್ಯಂತ ೭೪ ಕರಾವಳಿ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ಯೋಜನೆ ಕೈಗೊಂಡಿದೆ. ಅಲ್ಲದೆ ಕರಾವಳಿ ಕಾವಲು ಪಡೆಯ ಕಾರ್ಯಾಚರಣೆಗಾಗಿ ಕರ್ನಾಟಕಕ್ಕೆ ೧೨ ಸ್ಪೀಡ್ ಬೋಟ್ಗಳನ್ನು ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದರು.
ತರಬೇತಿಯಲ್ಲಿ ನಾಲ್ಕು ಮಂದಿ ಚೀಫ್ ಸಬ್ ಇನ್ಸ್ಪೆಕ್ಟರ್ಗಳು ಹಾಗೂ ಆರು ಮಂದಿ ಸಬ್ಇನ್ಸ್ಪೆಕ್ಟರ್ಗಳಿಗೆ ಕರಾವಳಿ ರಕ್ಷಣೆಯ ಕುರಿತು ತರಬೇತಿ ನೀಡಲಾಗು ತ್ತದೆ. ಈ ಪೊಲೀಸ್ ಅಧಿಕಾರಿಗಳಿಗೆ ಕಳೆದ ವರ್ಷ ನವೆಂಬರ್ನಲ್ಲಿ ಮೈಸೂರಿನಲ್ಲಿ ತರಬೇತಿ ಆರಂಭಿಸಲಾಗಿದ್ದು, ಇದೀಗ ಮೂರು ದಿನಗಳ ತರಬೇತಿ ಮಂಗಳೂರಿನ ಕರಾವಳಿ ತೀರದಲ್ಲಿ ಆರಂಭಗೊಂಡಿದೆ.
ಕಾರ್ಯಕ್ರಮದಲ್ಲಿ ಕರಾವಳಿ ಕಾವಲು ಪೊಲೀಸ್ ಕಮಾಂಡೆಂಟ್ ಪಿ.ಎಸ್. ಝಾ, ಎಸ್ಪಿ ಭಗವಾನ್ದಾಸ್, ಡಿವೈಎಸ್ಪಿ ಸದಾನಂದ, ಸಿಐಎಸ್ಎಫ್ನ ಡೆಪ್ಯುಟಿ ಕಮಾಂಡೆಂಟ್ ವಶಿಷ್ಠ ಮೊದಲಾದವರು ಉಪಸ್ಥಿತರಿದ್ದರು.
ವರದಿ ವಿವರ:
ಕರಾವಳಿ ಭದ್ರತೆಗೆ 74 ಪೊಲೀಸ್ ಠಾಣೆ: ಹೊಸೂರು ಕರ್ನಾಟಕಕ್ಕೆ 12 ಸ್ಪೀಡ್ ಬೋಟ್ ಮಂಜೂರು
ಮಂಗಳೂರು, ಅ. ೧೨: ಕಳೆದ ನವೆಂಬರ್ ೨೬ರ ಮುಂಬೈ ಮೇಲಿನ ದಾಳಿ ಘಟನೆಯ ಬಳಿಕ ಭಾರತದ ಕರಾವಳಿ ರಕ್ಷಣೆಗೆ ಹೊಸ ಆಯಾಮ ನೀಡಲಾಗಿದೆ. ನೌಕಾ ಮತ್ತು ವಾಯು ದಳ, ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸ್, ಮೀನುಗಾರರು, ಸ್ಥಳೀಯ ಪೊಲೀಸರು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಈ ಉದ್ದೇಶಕ್ಕೆ ಬಳಸಿ ಕೊಂಡು ಭದ್ರತೆಯ ವಿಚಾರದಲ್ಲಿ ಸಂಯುಕ್ತ ಪ್ರಯತ್ನ ನಡೆದಿದೆ. ಈ ಮೂಲಕ ಕರಾವಳಿ ತೀರ ರಕ್ಷಣೆಗೆ ಹೊಸ ಸ್ವರೂಪ ಸಿಕ್ಕಿದೆ ಎಂದು ಪಶ್ಚಿಮ ವಲಯದ ಐಜಿಪಿ ಗೋಪಾಲ ಹೊಸೂರು ಅವರಿಲ್ಲಿ ಹೇಳಿದರು.
ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಮತ್ತು ಕರಾವಳಿ ಕಾವಲು ಪೊಲೀಸ್ ಪಡೆ, ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಮಾಲ್ದೀವ್ಸ್ನ ಪೊಲೀಸ್ ಅಧಿಕಾರಿಗಳಿಗೆ ಕರಾವಳಿ ಭದ್ರತೆ ಕುರಿತಂತೆ ಮಂಗಳೂರಿನ ತಣ್ಣೀರುಬಾವಿಯಲ್ಲಿರುವ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿರುವ ೩ ದಿನಗಳ ತರಬೇತಿ ಶಿಬಿರವನ್ನು ಅವರು ಸೋಮವಾರ ಉದ್ಘಾಟಿಸಿದರು.
ಕೇಂದ್ರ ಸರಕಾರವು ದೇಶದ ಕರಾವಳಿಯಾದ್ಯಂತ ೭೪ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದ್ದು, ಅಗತ್ಯ ಸಿಬಂದಿಗಳ ನೇಮಕ ಹಾಗೂ ಸ್ಪೀಡ್ ಬೋಟ್ಗಳ ವ್ಯವಸ್ಥೆ ಮಾಡಿದೆ. ಈ ಪೈಕಿ ಕರ್ನಾಟಕಕ್ಕೆ ೧೨ ಸ್ಪೀಡ್ ಬೋಟ್ಗಳು ಮಂಜೂರಾಗಿವೆ. ಮುಂದಿನ ದಿನಗಳಲ್ಲಿ ಕರಾವಳಿಯ ಭದ್ರತೆ ಹೆಚ್ಚು ವೃತ್ತಿಪರ ಹಾಗೂ ದಕ್ಷತೆಯನ್ನು ಹೊಂದಲಿದೆ ಎಂದು ಐಜಿಪಿ ವಿವರಿಸಿದರು.
ಭಯೋತ್ಪಾದಕರು ಮತ್ತು ಬಾಡಿಗೆ ಸಿಪಾಯಿಗಳು ದಾಳಿ ಮಾಡಲು ಸಾಂಪ್ರದಾಯಿಕ ಮಾರ್ಗವನ್ನು ಬಿಟ್ಟು ಜಲ ಮಾರ್ಗವನ್ನು ಆಯ್ದುಕೊಂಡಿರುವುದು ಮುಂಬೈ ದಾಳಿಯ ಬಳಿಕ ನಡೆದ ತನಿಖೆಯಿಂದ ವ್ಯಕ್ತವಾಗಿದೆ. ಹಾಗಾಗಿ ಕರಾವಳಿ ಭದ್ರತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು.
ಭಾರತ ಮತ್ತು ಮಾಲ್ದೀವ್ಸ್ಗೆ ಹಲವು ವಿಷಯಗಳಲ್ಲಿ ಸಾಮ್ಯತೆ ಇದೆ. ಎರಡೂ ದೇಶಗಳಿಗೆ ಕರಾವಳಿ ತೀರ ಇದೆ. ಬೆದರಿಕೆ, ಸಮಸ್ಯೆಗಳು ಮತ್ತು ಸವಾಲುಗಳು ಬಹುತೇಕ ಸಮಾನವಾಗಿವೆ. ದ್ವೀಪ ರಾಷ್ಟ್ರ ಆಗಿರುವ ಮಾಲ್ದೀವ್ಸ್ ಮೇಲೆ ಹಲವಾರು ಮಂದಿಗೆ ಕಣ್ಣಿದೆ. ಹಾಗಾಗಿ ಅಲ್ಲಿನ ಪೊಲೀಸರಿಗೆ ಕರಾವಳಿ ರಕ್ಷಣೆಯ ಬಗ್ಗೆ ತರಬೇತಿ ಅಗತ್ಯ ಎಂದರು.
ಕೋಸ್ಟ್ಗಾರ್ಡ್ ಕಮಾಂಡೆಂಟ್ ಪಿ.ಎಸ್. ಝಾ ಮಾತನಾಡಿ ಕರಾವಳಿ ಕಡೆಯಿಂದ ಬರುವ ಯಾವುದೇ ರೀತಿಯ ಬೆದರಿಕೆಗಳನ್ನು ಎದುರಿಸಲು ಕರಾವಳಿ ತಟ ರಕ್ಷಣಾ ಪಡೆಯು ವಿವಿಧ ಭದ್ರತಾ ಸಂಸ್ಥೆಗಳ ಸಹಕಾರದಲ್ಲಿ ಸದಾ ಸನ್ನದ್ಧವಾಗಿದೆ ಎಂದರು.
ಕರಾವಳಿ ಕಾವಲು ಪೊಲೀಸ್ ಪಡೆಯ ಎಸ್ಪಿ ಭಗವಾನ್ದಾಸ್ ಸ್ವಾಗತಿಸಿ ಡಿವೈಎಸ್ಪಿ ಎಸ್.ಬಿ. ನಾಯಕ್ ವಂದಿಸಿದರು. ಇನ್ಸ್ಪೆಕ್ಟರ್ ಮುಕುಂದ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಸಿ.ಐ.ಎಸ್.ಎಫ್. ಡೆಪ್ಯುಟಿ ಕಮಾಂಡೆಂಟ್ ವಸಿಷ್ಟ್, ಪಣಂಬೂರು ಡಿವೈಎಸ್ಪಿ ಗಿರೀಶ್, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಸುರೇಶ್ ಕುಮಾರ್ ಉಪಸ್ಥಿತರಿದ್ದರು.
10 ಮಂದಿಗೆ ತರಬೇತಿ
ಮಾಲ್ದೀವ್ಸ್ನಿಂದ ೪ ಮಂದಿ ಚೀಫ್ ಇನ್ಸ್ಪೆಕ್ಟರ್ಗಳು (ಇಲ್ಲಿನ ಡಿವೈಎಸ್ಪಿ ಹುದ್ದೆಗೆ ಸಮಾನ) ಮತ್ತು ೬ ಮಂದಿ ಸಬ್ ಇನ್ಸ್ಪೆಕ್ಟರ್ ಸಹಿತ ೧೦ ಮಂದಿ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ತರಬೇತಿ ೧ ವರ್ಷದ ಅವಧಿಯದ್ದಾಗಿದ್ದು, ಚೀಫ್ ಇನ್ಸ್ಪೆಕ್ಟರ್ಗಳು ೧೧ ತಿಂಗಳ ತರಬೇತಿಯನ್ನು ಈಗಾಗಲೇ ಪೂರ್ತಿಗೊಳಿಸಿದ್ದಾರೆ. ೬ ಮಂದಿ ಎಸ್ಐಗಳು ತರಬೇತಿಗೆ ಸೇರಿ ೪ ತಿಂಗಳು ಮಾತ್ರ ಕಳೆದಿವೆ.
ಈ ಹಿಂದೆ ಇಂಡಿಯನ್ ಪೊಲೀಸ್ ಅಕಾಡೆಮಿಯಲ್ಲಿ ಮತ್ತು ಪಂಜಾಬ್ ಪೊಲೀಸ್ ಅಕಾಡೆಮಿಯಲ್ಲಿ ಮಾಲ್ದೀವ್ಸ್ ಪೊಲೀಸರು ತರಬೇತಿ ಪಡೆದಿದ್ದಾರೆ. ಮೂರನೇ ತಂಡ ತರಬೇತಿಗಾಗಿ ಕರ್ನಾಟಕಕ್ಕೆ ಬಂದಿದೆ ಎಂದು ತರಬೇತಿ ಪಡೆಯುತ್ತಿರುವ ಚೀಫ್ ಇನ್ಸ್ಪೆಕ್ಟರ್ ಮಹಮದ್ ನದೀಮ್ ಪತ್ರಕರ್ತರಿಗೆ ತಿಳಿಸಿದರು.
ಪೊಲೀಸ್ ಸಂವಿಧಾನ, ಶಸ್ತ್ರಾಸ್ತ್ರ ತರಬೇತಿ
ಮಾಲ್ದೀವ್ಸ್ನಲ್ಲಿ ಪೊಲೀಸರು ಸೈನ್ಯದ (ಆರ್ಮಿ) ಒಂದು ಭಾಗವಾಗಿದ್ದಾರೆ. ಅಲ್ಲಿ ಪೊಲೀಸರಿಗೆ ಶಸ್ತ್ರಾಸ್ತ್ರ ತರಬೇತಿ ಇರಲಿಲ್ಲ. ಇದೀಗ ಭಾರತಕ್ಕೆ ತರಬೇತಿಗೆ ಬಂದ ಬಳಿಕ ಪೊಲೀಸ್ ವ್ಯವಸ್ಥೆಗೆ ಪ್ರತ್ಯೇಕ ಸಂವಿಧಾನವನ್ನು ರಚಿಸಲಾಗಿದೆ. ಶಸ್ತ್ರಾಸ್ತ್ರ ತರಬೇತಿಯೂ ಅದರಲ್ಲಿ ಸೇರಿದೆ ಎಂದು ಮಹಮದ್ ನದೀಮ್ ವಿವರಿಸಿದರು.
ಮಾಲ್ದೀವ್ಸ್ನಲ್ಲಿ ಪೊಲೀಸರಿಗೆ ೬ ತಿಂಗಳ ಪ್ರಾಥಮಿಕ ತರಬೇತಿಯನ್ನು ಮಾತ್ರ ನೀಡಲಾಗುತ್ತದೆ ಎಂದರು.
೧೯೮೦ರಲ್ಲಿ ಮಾಲ್ದೀವ್ಸ್ಗೆ ಶ್ರೀಲಂಕಾ ದಾಳಿ ಮಾಡಿದಾಗ ಭಾರತ ರಕ್ಷಣೆ ಒದಗಿಸಿತ್ತು. ಆ ಬಳಿಕ ಭಾರತ- ಮಾಲ್ದೀವ್ಸ್ ಸಂಬಂಧ ಬೆಳೆದಿದೆ. ಪೊಲೀಸ್ ತರಬೇತಿಗೆ ಸಂಬಂಧಿಸಿ ೨ ತಿಂಗಳ ಹಿಂದೆ ಭಾರತ ಮಾಲ್ದೀವ್ಸ್ ಜತೆ ಒಪ್ಪಂದ ಮಾಡಿಕೊಂಡಿದೆ ಎಂದರು.
ಭಯೋತ್ಪಾದನೆ, ಮಾದಕ ದ್ರವ್ಯ, ನಕ್ಸಲಿಸಂ ಮುಂತಾದ ಸಮಸ್ಯೆಗಳು ಮಾಲ್ದೀವ್ಸ್ ಪೊಲೀಸರು ಎದುರಿಸುವ ಸವಾಲುಗಳಾಗಿವೆ ಎಂದು ಹೇಳಿದರು.