ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಪರಸ್ಪರ ಆರೋಪಗಳ ಕೆಸರೆರೆಚಿಕೊಂಡ ಯಡಿಯೂರಪ್ಪ - ರೇವಣ್ಣ

ಬೆಂಗಳೂರು: ಪರಸ್ಪರ ಆರೋಪಗಳ ಕೆಸರೆರೆಚಿಕೊಂಡ ಯಡಿಯೂರಪ್ಪ - ರೇವಣ್ಣ

Wed, 03 Mar 2010 17:52:00  Office Staff   S.O. News Service

ಬೆಂಗಳೂರು,ಮಾರ್ಚ್ 3: ಅಧಿಕಾರದಲ್ಲಿದ್ದಾಗ ನೀವು ಸಾವಿರ ಕೋಟಿ ರೂ ಲೂಟಿ ಹೊಡೆದಿರಿ, ನೀವು ಸಾವಿರ ಕೋಟಿ ರೂ ಲೂಟಿ ಹೊಡೆದಿರಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಜೆಡಿ‌ಎಸ್ ಶಾಸಕಾಂಗ ನಾಯಕ ರೇವಣ್ಣ ವಿಧಾನಸಭೆಯಲ್ಲಿಂದು ಪರಸ್ಪರ ಕೆಸರೆರಚಿಕೊಂಡ ಬೆಳವಣಿಗೆ ನಡೆಯಿತು.

 

ನೆನ್ನೆ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಉತ್ತರಿಸುವಾಗ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ವಿರುದ್ಧ ಮಾಡಿದ ಆರೋಪಕ್ಕೆ ಇಂದು ಪ್ರತ್ಯುತ್ತರ ನೀಡುವ ಅವಕಾಶ ಪಡೆದ ರೇವಣ್ಣ ನೇರಾನೇರವಾಗಿ ಯಡಿಯೂರಪ್ಪ ಅವರ ವಿರುದ್ಧ ಹರಿಹಾಯ್ದರು.

 

ರಾಜ್ಯಸಭಾ ಸದಸ್ಯ ಎಂ.ಎಂ.ಎಂ.ರಾಮಸ್ವಾಮಿ ಅವರ ಸಂಸ್ಥೆಗೆ ಕಲ್ಲಿದ್ದಲು ಸರಬರಾಜು ಮಾಡುವ ಟೆಂಡರ್ ನೀಡುವಾಗ ಹಣ ಲೂಟಿ ಹೊಡೆಯಲಾಗಿದೆ ಎಂದು ನೀವು ಆರೋಪಿಸಿದ್ದೀರಿ. ಹಾಗೆಯೇ ನಾನು ಉಪಮುಖ್ಯಮಂತ್ರಿಯಾಗಿದ್ದಾಗ, ಮುಖ್ಯಮಂತ್ರಿಯಾದ ಮೇಲೆ ಯಾವುದೇ ಹಗರಣ ನಡೆಸಿದ್ದರೂ ತನಿಖೆ ಎದುರಿಸುವುದಾಗಿ ಹೇಳಿದ್ದೀರಿ.

ಹಾಗಿದ್ದರೆ ನೀವು ದುಬಾರಿ ಬೆಲೆ ತೆತ್ತು ೨೫೮೭ ಕೋಟಿ ರೂನ ವಿದ್ಯುತ್ತನ್ನು ಖರೀದಿಸಿದಿರಲ್ಲ? ಆ ಹಗರಣ ಮತ್ತು ಕಲ್ಲಿದ್ದಲು ಖರೀದಿ ಹಗರಣವನ್ನು ಸಿಬಿ‌ಐ ತನಿಖೆಗೆ ಒಪ್ಪಿಸಿ ಎಂದು ಒತ್ತಾಯ ಮಾಡಿದರು.

 

ಒಂದು ವೇಳೆ ನಿಮಗೆ ಸಿಬಿ‌ಐ ತನಿಖೆಯ ಬಗ್ಗೆ ನಂಬಿಕೆ ಇಲ್ಲದಿದ್ದರೆ ಲೋಕಾಯುಕ್ತ ತನಿಖೆಯನ್ನಾದರೂ ನಡೆಸಿ. ಇವತ್ತು ಕಲ್ಲಿದ್ದಲು ಹಗರಣದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಮೋಹನ್‌ಕುಮಾರ್ ಅವರನ್ನು ನೇಮಕ ಮಾಡಿದ್ದೀರಲ್ಲ? ಈ ಬಗ್ಗೆ ಹಿಂದೆ ಹಾಲೀ ನ್ಯಾಯಮೂರ್ತಿಗಳೇ ಒಂದು ತೀರ್ಪು ನೀಡಿರುವಾಗ ಅದರ ಮೇಲೆ ತನಿಖೆ ಮಾಡಲು ನಿವೃತ್ತ ನ್ಯಾಯಮೂರ್ತಿಗಳಿಂದ ಸಾಧ್ಯವೇ? ಎಂದು ಪ್ರಶ್ನಿಸಿದರು.

 

ಭಾಟಿಯಾ ಸಂಸ್ಥೆಯಿಂದ ಎರಡು ಸಾವಿರ ರೂ ಹೆಚ್ಚು ದರ ತೆತ್ತು ಕಲ್ಲಿದ್ದಲು ಖರೀದಿ ಮಾಡಿದಿರಲ್ಲ? ಇದೊಂದೇ ಬಾಬ್ತಿನಲ್ಲಿ ನೀವು ಐನೂರು ಕೋಟಿ ರೂ ಹಗರಣ ನಡೆಸಿದ್ದೀರಿ. ನೀವೇ ಇದರಲ್ಲಿ ಷಾಮೀಲಾಗಿದ್ದೀರಿ ಎಂದು ರೇವಣ್ಣ ದೂರಿದರು.ಬೇಕಿದ್ದರೆ ಇದನ್ನು ದಾಖಲೆ ಸಮೇತ ಬಹಿರಂಗಪಡಿಸಲು ಸಿದ್ಧ.ಇದೇ ರೀತಿ ವಿದ್ಯುತ್ ಖರೀದಿಯಲ್ಲೂ ಹಣ ಲೂಟಿ ಹೊಡೆಯಲಾಗಿದೆ.ಅಸಾಂಪ್ರದಾಯಕ ಇಂಧನ ಮೂಲಗಳಿಂದ ವಿದ್ಯುತ್ ಖರೀದಿ ಮಾಡುವ ಪ್ರಕರಣದಲ್ಲೂ ೩೫೦ ಕೋಟಿ ರೂ ಹೊಡೆದು ತಿಂದಿದ್ದೀರಿ ಎಂದು ರೇವಣ್ಣ ಆರೋಪಗಳ ಸುರಿಮಳೆಗೈದರು.

ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಅವರೂ ತಿರುಗಿ ಬಿದ್ದು: ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರಗಳು ಏಳು ವರ್ಷಗಳಿಂದ ಕಲ್ಲಿದ್ದಲು ತೊಳೆಸುವ ಸಲುವಾಗಿಯೇ ವರ್ಷಕ್ಕೆ ಐನೂರು ಕೋಟಿ ರೂ ಕೊಡುತ್ತಿದ್ದವು. ಇದೊಂದು ದೊಡ್ಡ ಕರ್ಮಕಾಂಡ ಎಂದರು.

 

ರೇವಣ್ಣ ಇಂಧನ ಸಚಿವರಾಗಿದ್ದ ಕಾಲದಲ್ಲಿ ವರ್ಷಕ್ಕೆ ಈ ಬಾಬ್ತಿನಲ್ಲಿ ಐನೂರು ಕೋಟಿ ರೂ ಲೂಟಿ ಹೊಡೆಯಲಾಗಿದ್ದರೆ ಎಂ.ಎ.ಎಂ.ರಾಮಸ್ವಾಮಿ ನೇತೃತ್ವದ ಕಂಪನಿ ರೈಲಿನಲ್ಲಿ ಕಲ್ಲಿದ್ದಲು ಸರಬರಾಜು ಮಾಡುವ ಬದಲು ಹಡಗಿನಲ್ಲಿ ಕಲ್ಲಿದ್ದಲು ಸರಬರಾಜು ಮಾಡಲು ಅವಕಾಶ ಕೊಟ್ಟು ೧೮೦ ಕೋಟಿ ರೂ ಲೂಟಿ ಹೊಡೆಯಲಾಗಿದೆ ಎಂದರು.

ಇನ್ನು ರೇವಣ್ಣ ಮಂತ್ರಿಗಳಾಗಿದ್ದ ಅವಧಿಯಲ್ಲಿ ನಡೆದ ಟ್ರಾನ್ಸ್‌ಫಾರ್ಮರ್ ಖರೀದಿ ಹಗರಣದ ಬಗ್ಗೆ ಹೇಳಲು ಹೋದರೆ ಬರೀ ಚರ್ಚೆಗೇ ಎರಡು ದಿನ ಬೇಕು.ಅಗತ್ಯವಿಲ್ಲದಿದ್ದರೂ ಕೋಟಿಗಟ್ಟಲೆ ಹಣ ಹಾಕಿ ಟ್ರಾನ್ಸ್‌ಫಾರ್ಮರ್ ಖರೀದಿ ಮಾಡಿ ತಂದು ಹಾಕಲಾಯಿತು ಎಂದರು.

 

ಈ ಹಂತದಲ್ಲಿ ಯಡಿಯೂರಪ್ಪ ಹಾಗೂ ರೇವಣ್ಣ ಪರಸ್ಪರ ನಿಮ್ಮ ಅವಧಿಯಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದಿರಿ. ನಿಮ್ಮ ಅವಧಿಯಲ್ಲಿ ಸಾವಿರಾರು ಕೋಟಿ ರೂ ಲೂಟಿ ಹೊಡೆದಿರಿ ಎಂದು ಏರಿದ ಧ್ವನಿಯಲ್ಲಿ ಆರೋಪ-ಪ್ರತ್ಯಾರೋಪ ಮಾಡಿದರು.

 

ಹೀಗೆ ಇಬ್ಬರೂ ಪರಸ್ಪರ ಕಚ್ಚಾಡುವ ಸಂಧರ್ಭದಲ್ಲೇ ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಈ ಕುರಿತ ಚರ್ಚೆಗೆ ಅಂತ್ಯ ಹಾಡುವುದಾಗಿ ಪ್ರಕಟಿಸಿದರು.

ಇದಕ್ಕೂ ಮುನ್ನ ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ರೇವಣ್ಣ ಕಲ್ಲಿದ್ದಲು ಹಗರಣದಲ್ಲಿ ಷಾಮೀಲಾಗಿದ್ದಾರೆ ಎಂದು ನಿನ್ನೆ ಯಡಿಯೂರಪ್ಪ ಮಾಡಿದ್ದ ಆರೋಪ ಇಂದು ವಿಧಾನಸಭೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತಲ್ಲದೇ ಸದನ ಕಲಾಪವನ್ನು ಮುಂದೂಡಿದ ಬೆಳವಣಿಗೆಗೂ ಸಾಕ್ಷಿಯಾಯಿತು.

 

 

ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿರುವ ಆರೋಪಕ್ಕೆ ಉತ್ತರ ನೀಡಲು ಅವಕಾಶ ನೀಡುವಂತೆ ಜೆಡಿ‌ಎಸ್ ಸದಸ್ಯರು ಒತ್ತಾಯಿಸಿದ್ದಲ್ಲದೇ ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದಾಗ ಸದನದಲ್ಲಿ ಆಡಳಿತ-ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ನಡೆಯಿತು.

 

 

ಈ ಮಧ್ಯೆಯೇ ಜೆಡಿ‌ಎಸ್ ಸದಸ್ಯರನ್ನು ಸದನ ಕಲಾಪದಿಂದ ಅಮಾನತುಗೊಳಿಸಲು ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮುಂದಾದಾಗ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸಂಧಾನಸೂತ್ರ ರೂಪಿಸುವಂತೆ ಸಲಹೆ ನೀಡಿದರು. ಅದರನುಸಾರ ಸಭಾಧ್ಯಕ್ಷರು ಸದನ ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.

 

ಇದಕ್ಕೂ ಮುನ್ನ ಇಂದು ಬೆಳಿಗ್ಗೆ ಸದನ ಕಲಾಪ ಪ್ರಾರಂಬವಾಗುತ್ತಿದಂತೆಯೇ ಮಾತನಾಡಲು ಎದು ನಿಂತ ಜೆಡಿ‌ಎಸ್ ಶಾಸಕಾಂಗ ನಾಯಕ ಹೆಚ್.ಡಿ.ರೇವಣ್ಣ, ವಿದ್ಯುತ್ ಸಮಸ್ಯೆ ಬಗ್ಗೆ ನಡೆದ ಚರ್ಚೆಗೆ ಉತ್ತರಿಸುವಾಗ ಮುಖ್ಯಮಂತ್ರಿಗಳು ನನ್ನ ಮೇಲೆ ಆರೋಪ ಮಾಡಿದ್ದಾರೆ. ಇದಕ್ಕೆ ಸ್ಪಷ್ಟೀಕರಣ ನೀಡಲು ನನಗೆ ಅವಕಾಶ ಸಿಕ್ಕಿಲ್ಲ ಎಂದರು.

 

ರಾಜ್ಯಸಭಾ ಸದಸ್ಯ ಎಂ.ಎ.ಎಂ.ರಾಮಸ್ವಾಮಿ ಅವರ ಮಾಲೀಕತ್ವದ ಸಂಸ್ಥೆಗೆ ಕಲ್ಲಿದ್ದಲು ಪೂರೈಸಲು ನಾನು ಇಂಧನ ಸಚಿವರಾಗಿದ್ದಾಗ ಅವಕಾಶ ಕೊಡಲಾಯಿತು. ಅದರಲ್ಲೂ ಸರ್ಕಾರಕ್ಕೆ ಬಿಜೆಪಿ ಕೊಟ್ಟ ಬೆಂಬಲ ಹಿಂಪಡೆದ ಕಾಲದಲ್ಲಿ ನಾನು ಇಂತಹ ತೀರ್ಮಾನ ಕೈಗೊಂಡಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದು ಸರಿಯಲ್ಲ ಎಂದರು.

 

ಹಾಗೊಂದು ವೇಳೆ ನಾನು ಈ ರೀತಿ ಮಾಡಿದ್ದೇನೆ ಎಂಬುದನ್ನು ಸಾಬೀತು ಮಾಡಿದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಇಲ್ಲಿಂದ ಹೊರಗೆ ಹೋಗುತ್ತೇನೆ. ಆರೋಪ ಸುಳ್ಳಾದರೆ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ? ಎಂದು ರೇವಣ್ಣ ಸವಾಲೆಸೆದರು.

 

 

ಈ ಹಂತದಲ್ಲಿ ಮಾತನಾಡಿದ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ನೀವು ಈ ಕುರಿತು ಚರ್ಚಿಸಲು ನಿಲುವಳಿ ಸೂಚನೆಗೆ ಅವಕಾಶ ನೀಡುವಂತೆ ಕೇಳಿದ್ದಿರಿ. ಅದು ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ನಾನು ತಿರಸ್ಕರಿಸಿದ್ದೇನೆ. ಹೀಗಾಗಿ ನಾನು ನಿಮ್ಮ ಪ್ರಸ್ತಾಪಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

 

ಇದನ್ನು ವಿರೋಧಿಸಿದ ಜೆಡಿ‌ಎಸ್ ಶಾಸಕರಾದ ಹೆಚ್.ಸಿ.ಬಾಲಕೃಷ್ಣ,ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಹಲವರು, ಮುಖ್ಯಮಂತ್ರಿಗಳು ನೆನ್ನೆ ಆರೋಪ ಮಾಡಿದ್ದಾರೆ. ಇಂದಿನ ಪತ್ರಿಕೆಗಳಲ್ಲಿ ಅದು ಬಂದಿದೆ. ಹೀಗಾಗಿ ನಮ್ಮ ನಾಯಕರು ಏನೋ ತಪ್ಪು ಮಾಡಿದ್ದಾರೆ ಎಂಬ ಭಾವನೆ ಬಂದಿದೆ. ಇದಕ್ಕೆ ಉತ್ತರ ನೀಡಲು ಅವಕಾಶ ನೀಡದೇ ಇದ್ದರೆ ಅವರು ತಪ್ಪು ಮಾಡಿರುವುದು ಹೌದು ಎಂಬಂತಾಗುತ್ತದೆ. ಹೀಗಾಗಿ ಸ್ಪಷ್ಟೀಕರಣ ನೀಡಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.

 

ಜೆಡಿ‌ಎಸ್ ಶಾಸಕರ ಈ ಒತ್ತಾಯವನ್ನು ವಿರೋಧಿಸಿದ ಕಾನೂನು ಸಚಿವ ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್ ಮತ್ತಿತರರು: ಸಬಾಧ್ಯಕ್ಷರು ಅವಕಾಶ ನೀಡುವುದಿಲ್ಲ ಎಂದ ಮೇಲೆ ಅದನ್ನೇ ಒತ್ತಿ ಹೇಳುವುದರಲ್ಲಿ ಅರ್ಥವಿಲ್ಲ ಎಂದರು.

 

 

ಈ ಸನ್ನಿವೇಶದಲ್ಲಿ ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ: ಪ್ರತಿಪಕ್ಷಗಳವರು ಕೇವಲ ವಿದ್ಯುತ್ ಕುರಿತಂತೆ ಅಲ್ಲ, ನಾನು ಹಿಂದೆ ಉಪಮುಖ್ಯಮಂತ್ರಿಯಾಗಿದ್ದಾಗಿನಿಂದ ಹಿಡಿದು ಈಗಿನವರೆಗೆ ಏನೇ ತಪ್ಪು ಮಾಡಿದ್ದೇನೆ ಅಂತ ಹೇಳಲು ಬಯಸಿದರೂ ಅದನ್ನು ಪ್ರಸ್ತಾಪಿಸಲು ಅವರಿಗೆ ಹಕ್ಕು ಇದೆ.ಮತ್ತು ಅದಕ್ಕೆ ತಕ್ಕ ಉತ್ತರ ನೀಡಲು ನಾನೂ ಸಿದ್ಧನಿದ್ದೇನೆ ಎಂದು ಹೇಳಿದರು.

 

ಆದರೆ ಅದಕ್ಕೊಂದು ಕಾಲ ಅಂತ ನಿಗದಿ ಮಾಡಬೇಕು. ಸಭಾಧ್ಯಕ್ಷರು ನಿಗದಿ ಮಾಡಿದ ಕಾಲದಲ್ಲಿ ಆ ಕುರಿತು ಚರ್ಚೆ ಆಗಬೇಕು ಎಂದು ಯಡಿಯೂರಪ್ಪ ಹೇಳಿದಾಗ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ,ಈ ಬಗ್ಗೆ ಪರಿಶೀಲನೆ ನಡೆಸಿ ಮಧ್ಯಾಹ್ನ ನಿರ್ಣಯ ಹೇಳುತ್ತೇನೆ ಎಂದಾಗ ಜೆಡಿ‌ಎಸ್ ಸದಸ್ಯರು ಅದನ್ನು ಒಪ್ಪಲಿಲ್ಲ.

 

ಯಾವುದೇ ಮುನ್ಸೂಚನೆ ಕೊಡದೇ ಮುಖ್ಯಮಂತ್ರಿಗಳು ರೇವಣ್ಣ ಅವರ ಮೇಲೆ ಆರೋಪ ಮಾಡಿದ್ದಾರೆ.ಹೀಗಿರುವಾಗ ಅವರ ಸ್ಪಷ್ಟೀಕರಣ ಕೇಳದಿದ್ದರೆ ಅದು ತಪ್ಪಾಗುತ್ತದೆ ಎಂದರು.

 

ಈ ಸಂಧರ್ಭದಲ್ಲಿ ಕಾನೂನು ಸಚಿವ ಸುರೇಶ್‌ಕುಮಾರ್, ಕಂದಾಯ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ: ಸಭಾಧ್ಯಕ್ಷರು ಹೀಗೇ ಮಾಡಬೇಕು ಎಂದು ನಿರ್ದೇಶನ ನೀಡುವ ಹಕ್ಕು ಯಾರಿಗೂ ಇಲ್ಲ. ಪರಿಶೀಲನೆ ಮಾಡಿ ತೀರ್ಪು ನೀಡುತ್ತೇವೆ ಎಂದು ಅವರು ಹೇಳಿದ ಮೇಲೆ ಅದನ್ನೇ ಹೇಳುತ್ತಾ ಕೂರುವುದರಲ್ಲಿ ಅರ್ಥವಿಲ್ಲ ಎಂದರು.

 

ಇದನ್ನು ಜೆಡಿ‌ಎಸ್ ಸದಸ್ಯರು ವಿರೋಧಿಸಿದಾಗ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು.ಪುನ: ಮಾತನಾಡಿದ ಸುರೇಶ್ ಕುಮಾರ್:ಈ ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯವಾಗಬೇಕಿದೆ.ನಾಳೆ ಸಂಜೆಯವರೆಗೆ ಮಾತ್ರ ಇದಕ್ಕೆ ಅವಕಾಶವಿದೆ.ಹೀಗಿರುವಾಗ ರೇವಣ್ಣ ಮತ್ತಿತರರು ಸದನ ಕಲಾಪವನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ.ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.

 

ಇಷ್ಟಾದರೂ ಪಟ್ಟು ಬಿಡದ ಜೆಡಿ‌ಎಸ್ ಸದಸ್ಯರು ತಮ್ಮ ಮಾತಿಗೆ ಅವಕಾಶ ಸಿಗಲೇಬೇಕೆಂದು ಕೂಗುತ್ತಾ ಸಭಾಧ್ಯಕ್ಷರೆದುರಿನ ಬಾವಿಗೆ ಬಂದು ಧರಣಿ ಆರಂಭಿಸಿದರು.

 

ಕಾನೂನು ಸಚಿವ ಸುರೇಶ್ ಕುಮಾರ್ ಮತ್ತೆ ಮಾತನಾಡಿ:ಸದನ ಕಲಾಪವನ್ನು ಹಾಳು ಮಾಡುವವರನ್ನು ಸದನದಿಂದ ಹೊರಗೆ ಹಾಕಿ ಸದನ ನಡೆಸಲು ಸಭಾಧ್ಯಕ್ಷರು ಕ್ರಮ ಕೈಗೊಳ್ಳಬೇಕು.ಕಲಾಪಕ್ಕೆ ಅಡ್ಡಿ ಮಾಡುವವರ ಹೆಸರನ್ನು ಓದಿ ಹೇಳಿ ಹೊರಗೆ ಹೋಗುವಂತೆ ಅವರು ಸೂಚಿಸಿದರೆ ಅಂತವರು ಸದನದಿಂದ ಹೊರಗೆ ಹೋಗಬೇಕು ಎಂದು ನಿಯಮಾವಳಿ ಹೇಳುತ್ತದೆ.ಹಾಗಾಗಿ ಈ ಕೆಲಸ ಮಾಡಬೇಕು ಎಂದು ಪಟ್ಟು ಹಿಡಿದರು.

 

ಸುರೇಶ್ ಕುಮಾರ್ ಅವರ ಅಭಿಪ್ರಾಯವನ್ನು ಒಪ್ಪಿದಂತೆ ಕಂಡುಬಂದ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ,ಜೆಡಿ‌ಎಸ್ ಸದಸ್ಯರಿಗೆ ತಮ್ಮ ತಮ್ಮ ಸ್ಥಾನಗಳಿಗೆ ಹೋಗದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡತೊಡಗಿದರು.

 

ಇಷ್ಟಾದರೂ ಧರಣಿ ನಿರತ ಜೆಡಿ‌ಎಸ್ ಸದಸ್ಯರು ತಮ್ಮ ಪಟ್ಟನ್ನು ಸಡಿಲಿಸದೇ ಇದ್ದಾಗ,ಇನ್ನು ಮುಂದಿನ ಕ್ರಮ ಕೈಗೊಳ್ಳದೇ ನನಗೆ ಬೇರೆ ದಾರಿಯಿಲ್ಲ ಎಂದು ಅವರು ಹೇಳಿದಾಗ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್ ನಾಯಕ ಟಿ.ಬಿ.ಜಯಚಂದ್ರ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ:ಹೀಗೆ ಸದಸ್ಯರನ್ನು ಹೊರಗಿಟ್ಟು ಕಲಾಪ ನಡೆಸುವುದು ಸರಿಯಲ್ಲ ಎಂದು ಟೀಕಿಸಿದರು.

 

ಮುಖ್ಯಮಂತ್ರಿಗಳು ಒಂದು ಆರೋಪ ಮಾಡಿದ್ದಾರೆ.ಹೀಗಾಗಿ ಅದಕ್ಕೆ ಉತ್ತರ ನೀಡಲು ಅವಕಾಶ ನೀಡಬೇಕಾಗುತ್ತದೆ.ಯಾವಾಗ ಅವಕಾಶ ನೀಡುತ್ತೀರಿ ಎಂದು ಭರವಸೆ ಕೊಡಿ ಅಂತ ಪಟ್ಟು ಹಿಡಿದರು.

 

ಅಂತಿಮವಾಗಿ ಸದಸ್ಯರನ್ನು ಸದನ ಕಲಾಪದಿಂದ ಹೊರಗಿಟ್ಟು ಹೊಸ ಸಂಪ್ರದಾಯ ಹಾಕಬಾರದು.ಹತ್ತು ನಿಮಿಷಗಳ ಕಾಲ ಸದನ ಕಲಾಪವನ್ನು ಮುಂದೂಡಿ ಸಭಾಧ್ಯಕ್ಷರು ಸಂಧಾನ ನಡೆಸಬೇಕು ಎಂದು ಅವರು ಒತ್ತಾಯಿಸಿದಾಗ ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಯಿತು.

 

ಇದಾದ ನಂತರ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರ ಕಛೇರಿಯಲ್ಲಿ ನಡೆದ ಸಂಧಾನ ಸಭೆ ಅಂತಿಮವಾಗಿ ಮುಖ್ಯಮಂತ್ರಿಗಳು ಮಾಡಿದ ಆರೋಪಕ್ಕೆ ಪ್ರತಿಯಾಗಿ ರೇವಣ್ಣ ಮತ್ತಿತರ ಜೆಡಿ‌ಎಸ್ ಸದಸ್ಯರು ಸದನದಲ್ಲಿ ಸ್ಪಷೀಕರಣ ಕೊಡಲು ಅವಕಾಶ ನೀಡಲು ತೀರ್ಮಾನ ತೆಗೆದುಕೊಂಡಿತು.

 

ಈ ನಿರ್ಧಾರದ ಹಿನ್ನೆಲೆಯಲ್ಲಿ ಪುನ: ಸದನ ಕಲಾಪ ಪ್ರಾರಂಭವಾದಾಗ ಜೆಡಿ‌ಎಸ್ ಸದಸ್ಯರು ತಮ್ಮ ಧರಣಿಯನ್ನು ಹಿಂಪಡೆದುಕೊಂಡರು.

 


Share: