ಬೆಂಗಳೂರು, ಏಪ್ರಿಲ್ ೧೪: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.
ಇಂದು ಬೆಳಿಗ್ಗೆ ನಗರದ ಮಾಗಡಿ ರಸ್ತೆಯ ಶ್ರೀಗಂಧದ ಕಾವಲು ನಲ್ಲಿ ರೂ. ೭.೫೦ ಕೋಟಿ ವೆಚ್ಚದ ಡಾ|| ಬಾಬು ಜಗಜೀವನ್ ರಾಂ ಭವನ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದ ಅವರು ಮುಂಬರುವ ಅಧಿವೇಶನದಲ್ಲಿ ಒಳಮೀಸಲಾತಿ ಮಸೂದೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಮಾದಿಗರ ಸಮಾವೇಶದಲ್ಲಿ ಒಳಮೀಸಲಾತಿ ಕುರಿತಂತೆ ಚರ್ಚಿಸಲಾಗಿದೆ. ಈ ಸಂಬಂಧ ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ರಾಜ್ಯದಲ್ಲಿ ಒಳಮೀಸಲಾತಿ ತರಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದರು.
ರಾಜ್ಯದ ಒಟ್ಟು ೧೦ ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಜಿಲ್ಲೆಗೆ ರೂ. ೨.೦೦ ಕೋಟಿ ವೆಚ್ಚದಲ್ಲಿ ಡಾ|| ಬಾಬು ಜಗಜೀವನ್ ರಾಂ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯ ಇಂದೇ ಪ್ರಾರಂಭಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.