ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ನವದೆಹಲಿ: ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಶಮನಗೊಳಿಸಲು ಸುಶ್ಮಾ ಸ್ವರಾಜ್ ಕಣಕ್ಕೆ

ನವದೆಹಲಿ: ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಶಮನಗೊಳಿಸಲು ಸುಶ್ಮಾ ಸ್ವರಾಜ್ ಕಣಕ್ಕೆ

Tue, 03 Nov 2009 02:52:00  Office Staff   S.O. News Service
-ನಾಯಕತ್ವ ಬದಲಾವಣೆ ಇಲ್ಲ: ಪಕ್ಷಾಧ್ಯಕ್ಷ ರಾಜ್‌ನಾಥ್ 
-ಬದಲಾಗಲೇಬೇಕು: ರೆಡ್ಡಿಗಳ ಪಟ್ಟು  
-ಕಡೆಗೂ ಬೆಂಕಿ ಆರಿಸುವ ಹೊಣೆ ಸುಷ್ಮಾ ಸ್ವರಾಜ್ ಹೆಗಲಿಗೆ 
-ಗಣಿಧಣಿಗಳ ಬೆಂಬಲಿಗರು ದಿಲ್ಲಿಗೆ 

ನವದೆಹಲಿ/ಬೆಂಗಳೂರು, ನ.2 : ರಾಜ್ಯ ಬಿಜೆಪಿಯಲ್ಲಿನ ಬಂಡಾಯ ಶಮನಗೊಳಿಸುವ ಗುರುತರ ಜವಾಬ್ದಾರಿ ಇದೀಗ ಅಂತಿಮವಾಗಿ ‘ತಾಯಿಯ ಮಡಿಲು’ ಸೇರಿದೆ.

ಬಂಡಾಯದ ಸಾರಥ್ಯ ವಹಿಸಿರುವ ಬಳ್ಳಾರಿ ಗಣಿ ಧಣಿಗಳೊಂದಿಗೆ ಮಾತುಕತೆ ನಡೆಸಿ ಸಂಧಾನ ಸೂತ್ರದ ಮೂಲಕ ಭಿನ್ನಮತ ಶಮನಗೊಳಿಸಿ ಎಂದು ಅವರ ಮಾತೃ ಸ್ವರೂಪಿ ಸುಷ್ಮಾ ಸ್ವರಾಜ್ ಅವರಿಗೆ ಬಿಜೆಪಿ ವರಿಷ್ಠರ ತಂಡ ಹೊಣೆ ಹೊರಿಸಿದೆ.

ಇದೇ ವೇಳೆ ಗಣಿ ಧಣಿಗಳ ಪಟ್ಟಿನ ನಡುವೆಯೂ ಬಿಜೆಪಿ ರಾಷ್ಟ್ರ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ನಾಯಕತ್ವದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂಬ ಬಹಿರಂಗ ಫರ್ಮಾನು ಹೊರಡಿಸಿರುವುದರಿಂದ ಬಿಕ್ಕಟ್ಟು ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಂತಾಗಿದೆ. 
ತಾವು ಆರಂಭಿಸಿರುವ ರಾಜಕೀಯ ಸಮರದಿಂದ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂಬ ಧೋರಣೆಯೊಂದಿಗೆ ದೆಹಲಿಗೆ ಆಗಮಿಸಿರುವ ಬಂಡಾಯದ ಸೂತ್ರಧಾರ ಗಾಲಿ ಜನಾರ್ದನರೆಡ್ಡಿ ಅವರು ಸುಷ್ಮಾ ಸ್ವರಾಜ್ ಅವರ ಮಾತಿಗೆ ಮಣಿದು ಪಟ್ಟು ಸಡಿಲಿಸುತ್ತಾರೋ ಅಥವಾ ನಿರಾಕರಿಸಿ ಅಪಾಯಕಾರಿ ಅಸ್ತ್ರವನ್ನು ಪ್ರಯೋಗಿಸುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.

ಜನಾರ್ದನರೆಡ್ಡಿ ಆಪ್ತರ ಪ್ರಕಾರ, ನಾಯಕತ್ವ ಬದಲಾವಣೆ ಪಟ್ಟಿನಿಂದ ಹಿಂದೆ ಸರಿಯುವ ಯಾವ ಸಾಧ್ಯತೆಯೂ ಇಲ್ಲ.

ಸೋಮವಾರ ಸಂಜೆ ಇಲ್ಲಿನ ಪೃಥ್ವಿರಾಜ್ ರಸ್ತೆಯಲ್ಲಿರುವ ಹಿರಿಯ ನಾಯಕ ಲಾಲ್‌ಕೃಷ್ಣ ಆಡ್ವಾಣಿ ಅವರ ನಿವಾಸದಲ್ಲಿ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಅನಂತಕುಮಾರ್, ರಾಮ್‌ಲಾಲ್ ಅವರನ್ನು ಒಳಗೊಂಡಂತೆ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಬಿಜೆಪಿ ವರಿಷ್ಠರ ಸಭೆಯಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮುಂದುವರೆಸುವುದರ ಜತೆಗೆ ಯಾವುದೇ ಕಾರಣಕ್ಕೂ ಸರ್ಕಾರವನ್ನು ಉರುಳಿಸಲು ಬಿಡಬಾರದು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಧ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿನ ನಾಯಕತ್ವ ಬದಲಾವಣೆಯೊಂದನ್ನು ಬಿಟ್ಟು ಇತರೆ ಬೇಡಿಕೆಗಳನ್ನು ಪರಾಮರ್ಶಿಸಿ ಈಡೇರಿಸಲು ಸಕಾರಾತ್ಮಕವಾಗಿ ಸ್ಪಂದಿಸಿದೆ. 

ಹೀಗಾಗಿ ಸುಷ್ಮಾ ಸ್ವರಾಜ್ ಮತ್ತು ಜನಾರ್ದನರೆಡ್ಡಿ ನಡುವೆ ನಡೆಯುವ ಮಾತುಕತೆ ಪರಿಣಾಮ ಅಂತಿಮವಾಗಿ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಚಟುವಟಿಕೆ ಶಮನಗೊಂಡು ಯಡಿಯೂರಪ್ಪ ಕುರ್ಚಿ ಸುಭದ್ರವಾಗಲಿದೆ ಎಂಬ ಆಶಯ ಸದ್ಯಕ್ಕೆ ಹೊರಹೊಮ್ಮಿದೆ. 

ಸಿ‌ಎಂ ಬದಲಾವಣೆ ಇಲ್ಲದಿದ್ದರೆ ಗೃಹ ಖಾತೆಗೆ ರೆಡ್ಡಿ ಪಟ್ಟು?: ನಾಯಕತ್ವ ಬದಲಾವಣೆ ಜತೆಗೆ ಗಣಿ ಧಣಿಗಳು ಇನ್ನೂ ಅನೇಕ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಆ ಪೈಕಿ ಪ್ರಮುಖವಾದದ್ದು ಗೃಹ ಖಾತೆಯನ್ನು ತಮ್ಮ ಸುಪರ್ದಿಗೆ ವಹಿಸಬೇಕು ಎಂಬುದು.                

ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಗೃಹ ಖಾತೆಯನ್ನು ನೀಡುವ ಬಗ್ಗೆ ಹೈಕಮಾಂಡ್ ಒಪ್ಪಿಕೊಳ್ಳುವ ಸಾಧ್ಯತೆ ಕಡಮೆ. ಆದರೆ, ನಾಯಕತ್ವ ಬದಲಾವಣೆ ಬೇಡಿಕೆಯಿಂದ ಹಿಂದೆ ಸರಿಯಬೇಕಾದರೆ ಗಣಿ ಧಣಿಗಳು ಗೃಹ ಖಾತೆಗೆ ಪಟ್ಟು ಹಿಡಿಯುವ ಸಂಭವ ಹೆಚ್ಚಾಗಿದೆ. ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರುವ ಬೆದರಿಕೆ ಮುಂದೊಡ್ಡಿದಲ್ಲಿ ಅನಿವಾರ್ಯವಾಗಿ ಒಪ್ಪಿಕೊಳ್ಳಬಹುದು ಎನ್ನಲಾಗಿದೆ. 

ನಾಯಕತ್ವ ಬದಲಾವಣೆಯಿಲ್ಲ- ರಾಜನಾಥ್: ಆಡ್ವಾಣಿ ನಿವಾಸದಲ್ಲಿ ನಡೆದ ಸಭೆಯ ನಂತರ ತಮ್ಮನ್ನು ಅಡ್ಡಗಟ್ಟಿದ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಕರ್ನಾಟಕದಲ್ಲಿ ಈಗಿರುವ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು. 
ಮಾತುಕತೆ ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಮುಂದುವರೆಯಲಿದೆ. ಸರ್ಕಾರಕ್ಕೆ ಯಾವ ಅಪಾಯವೂ ಇಲ್ಲ. ಈಗಿರುವ ನಾಯಕತ್ವ ಮುಂದುವರೆಯಲಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಒಮ್ಮತದಿಂದ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು. 
ಇದಕ್ಕೂ ಮುನ್ನ ಬೆಳಗ್ಗೆ ದೆಹಲಿಗೆ ಬಂದಿಳಿದ ಜನಾರ್ದನರೆಡ್ಡಿ ಅವರು ಪಕ್ಷದ ನಾಯಕರಾದ ಅರುಣ್ ಜೇಟ್ಲಿ ಹಾಗೂ ಅನಂತಕುಮಾರ್ ಅವರೊಂದಿಗೆ ಮಧ್ಯಾಹ್ನ ೧೨ರಿಂದ ಸಂಜೆ ೪ಗಂಟೆವರೆಗೆ ಸುದೀರ್ಘ ಸಮಾಲೋಚನೆ ನಡೆಸಿದರು. 
  ಮಾತುಕತೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ರಾಜ್ಯಕ್ಕೆ ಒಳ್ಳೆಯ ನಾಯಕತ್ವ ದೊರಕುವ ವಿಶ್ವಾಸವಿದೆ. ಹೇಳಬೇಕಾದುದನ್ನು ಹೇಳಿದ್ದೇನೆ ಎಂದಷ್ಟೇ ಹೇಳಿದರು. 

ಮಂಗಳವಾರವೂ ವರಿಷ್ಠರ ಸಭೆ?: ಮಂಗಳವಾರವೂ ಬಿಜೆಪಿ ವರಿಷ್ಠರ ಸಭೆ ಮುಂದುವರೆಯುವ ಸಾಧ್ಯತೆಯಿದೆ. ಜಾರ್ಖಂಡ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸುವ ಸಂಬಂಧ ಬೆಳಗ್ಗೆ ೧೧ ಗಂಟೆಗೆ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಈ ಸಮಿತಿಯಲ್ಲಿರುವ ಮೂರ್ನಾಲ್ಕು ಮಂದಿ ನಾಯಕರನ್ನು ಹೊರತುಪಡಿಸಿದರೆ ಪಕ್ಷದ ಸಂಸದೀಯ ಮಂಡಳಿಯಂತೆಯೇ ಸಭೆ ನಡೆಯಲಿದೆ. 
 ಈ ಮಧ್ಯೆ ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ದೆಹಲಿಗೆ ಬರುವಂತೆ ಬಿಜೆಪಿ ವರಿಷ್ಠರು ಸೂಚಿಸಿದ್ದಾರೆ. 


ನಿನ್ನೆ ನಡೆದಿದ್ದು... 

- ಬೆಳಗ್ಗೆ ೧೧: ಬಂಡಾಯದ ರೂವಾರಿ ಜನಾರ್ದನರೆಡ್ಡಿ ಆಗಮನ 
-ಮಧ್ಯಾಹ್ನ ೧೨: ಜೇಟ್ಲಿ, ಅನಂತಕುಮಾರ್ ಜತೆ ರೆಡ್ಡಿ ಚರ್ಚೆ 
-ಸಂಜೆ ೫: ಆಡ್ವಾಣಿ ನಿವಾಸದಲ್ಲಿ ಬಿಜೆಪಿ ವರಿಷ್ಠರ ಮಹತ್ವದ ಸಭೆ 
- ರಾತ್ರಿ ೯: ಸುಷ್ಮಾ ಸ್ವರಾಜ್ ನಿವಾಸದಲ್ಲಿ ರೆಡ್ಡಿ ಜತೆ ಸಂಧಾನ ಮಾತುಕತೆ 

ಇಂದಿನ ಕಾರ್ಯಕ್ರಮ 

-ಬೆಳಗ್ಗೆ ೧೧: ಅರುಣ್ ಜೇಟ್ಲಿ, ಜನಾರ್ದನ ರೆಡ್ಡಿ ಮಾತುಕತೆ 
-ಮಧ್ಯಾಹ್ನ ೧೨: ರಾಜನಾಥ್ ಸಿಂಗ್, ರೆಡ್ಡಿ ಮಾತುಕತೆ 
-ಸಂಜೆ ೫: ರೆಡ್ಡಿ ಬೆಂಬಲಿಗರಾದ ಬೆಳ್ಳುಬ್ಬಿ, ಜಾರಕಿಹೊಳಿ ಸೇರಿ ೧೫ ಶಾಸಕರು ದೆಹಲಿಗೆ, ಒತ್ತಡ ಹೇರಲು ಈ ತಂತ್ರ 

ಹೈಕಮಾಂಡ್ ಸಂಧಾನ ಸೂತ್ರ 

೧      ಸಚಿವೆ ಶೋಭಾ ಕರಂದ್ಲಾಜೆಗೆ ಕೊಕ್ 
೨      ಸಿ‌ಎಂ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ವರ್ಗ. 
೩      ಸರ್ಕಾರದ ಪ್ರಮುಖ ನೀತಿ ನಿರ್ಧಾರ ರೂಪಿಸಲು ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಹಾಗೂ ಹಿರಿಯ ಸಚಿವರನ್ನು ಒಳಗೊಂಡ ಸಮನ್ವಯ ಸಮಿತಿ ರಚನೆ 
೪      ಕಳೆದ ವಾರ ಮಾಡಿರುವ ಬಳ್ಳಾರಿ ಹಾಗೂ ಗದಗ ಜಿಲ್ಲೆಯ ಅಧಿಕಾರಿಗಳ ವರ್ಗಾವಣೆ ವಾಪಸ್ 
೫      ಜಗದೀಶ್ ಶೆಟ್ಟರ್‌ಗೆ ಸಚಿವ ಸ್ಥಾನ 
೬      ಅದಿರು ಲಾರಿಗಳ ಮೇಲೆ ವಿಧಿಸಿರುವ ಸುಂಕದ ಮೊತ್ತ ಇಳಿಕೆ 
೭      ಜಿಲ್ಲಾ ಉಸ್ತುವಾರಿ ಸಚಿವರನ್ನು ಪುನಾರಚಿಸಿ ರೆಡ್ಡಿ ಬೆಂಬಲಿಗರಿಗೆ ಹೊಣೆ 



ಪ್ರತಿಕ್ರಿಯೆಗಳು.. 

-ಸರ್ಕಾರಕ್ಕೆ ಯಾವ ಅಪಾಯವೂ ಇಲ್ಲ. ಈಗಿರುವ ನಾಯಕತ್ವ ಮುಂದುವರೆಯಲಿದೆ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ. ಭಿನ್ನಮತ ನಿವಾರಣೆಗೆ ಸದ್ಯದಲ್ಲೇ ಒಮ್ಮತದ ಪರಿಹಾರವನ್ನು ಕಂಡುಕೊಳ್ಳಲಾಗುವುದು. 

-ರಾಜನಾಥ್ ಸಿಂಗ್ 

-ರೆಡ್ಡಿ ಸಹೋದರರು ಅನಿವಾರ್ಯ ಕಾರಣಗಳಿಂದ ಗೊಂದಲದಲ್ಲಿದ್ದಾರೆ. ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ. ಮಿತ್ರರಾಗಿರುವ ಸಚಿವ ಶ್ರೀರಾಮುಲು ಅವರು ಆವೇಶದಲ್ಲಿ ಕೆಲ ಮಾತುಗಳನ್ನು ಆಡಿದ್ದಾರೆ. ಅವರ ಭಾವನೆಗಳು ನನಗೆ ಅರ್ಥವಾಗುತ್ತಿವೆ. 

-ಬಿ.ಎಸ್. ಯಡಿಯೂರಪ್ಪ 

-ಕರ್ನಾಟಕಕ್ಕೆ ಉತ್ತಮ ನಾಯಕತ್ವ ನೀಡಿರೆಂದು ಪಕ್ಷದ ಕೇಂದ್ರ ನಾಯಕರಲ್ಲಿ ಕೇಳಿದ್ದೇವೆ. ರಾಜ್ಯದ ಜನತೆ ಹಾಗೂ ಪ್ರತಿಯೊಬ್ಬ ಬಿಜೆಪಿ ಸದಸ್ಯನ ಹಿತಾಸಕ್ತಿ ಕಾಪಾಡುವಂತಹ ನಾಯಕರೊಬ್ಬರನ್ನು ಹೈಕಮಾಂಡ್ ಒದಗಿಸುವ ಬಗ್ಗೆ ಶೇ.೧೦೦ ವಿಶ್ವಾಸವಿದೆ. 

-ಜನಾರ್ದನ ರೆಡ್ಡಿ 

ಸೌಜನ್ಯ: ಕನ್ನಡಪ್ರಭ


Share: