ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಜಾಗತಿಕ ಸುದ್ದಿ / ವಾಷಿಂಗ್ಟನ್: ಭಾರತದ ಮೇಲೆ ದಾಳಿ ನಡೆಸಲು ಅಲ್‌ಖೈದಾ ಮತ್ತು ಪಾಕ್ ತಾಲಿಬಾನ್ ಒಗ್ಗಟ್ಟು

ವಾಷಿಂಗ್ಟನ್: ಭಾರತದ ಮೇಲೆ ದಾಳಿ ನಡೆಸಲು ಅಲ್‌ಖೈದಾ ಮತ್ತು ಪಾಕ್ ತಾಲಿಬಾನ್ ಒಗ್ಗಟ್ಟು

Sat, 24 Oct 2009 14:14:00  Office Staff   S.O. News Service
ವಾಷಿಂಗ್ಟನ್, ಅಕ್ಟೋಬರ್ 24: ಎರಡು ವಿನಾಶಕಾರಿ ಉಗ್ರಗಾಮಿ ಶಕ್ತಿಗಳು ಒಗ್ಗೂಡಿದರೆ ಏನಾಗಬಹುದು? ಅದೇ ಈಗ ಪಾಕಿಸ್ತಾನದಲ್ಲಿ ಆಗುತ್ತಿರುವುದು. ಗಗನಚುಂಬಿ ಅವಳಿ ಕಟ್ಟಡಗಳನ್ನು ಧರೆಗುರುಳಿಸಿ ಇಡೀ ಅಮೆರಿಕ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಅಲ್-ಖೈದಾ ಮತ್ತು ಪಾಕಿಸ್ತಾನೀ ತಾಲಿಬಾನ್ ಸಂಘಟನೆಗಳು ಪರಸ್ಪರ ಕೈಜೋಡಿಸಿ ಭಾರತ ಮತ್ತು ಪಾಕಿಸ್ತಾನದಲ್ಲಿ ಕಾರ್ಯಪ್ರವೃತ್ತವಾಗಿವೆ. ಹೀಗೆಂದು ಎಚ್ಚರಿಸಿದವರು ಅಮೆರಿಕದ ಕಾರ್ಯತಂತ್ರ ತಜ್ಞ ರಿಕ್ ಆಸೀ ನೆಲ್ಸನ್. 

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಹಲವು ಕಡೆಗಳಲ್ಲಿ ಭೀಕರ ಉಗ್ರ ದಾಳಿಗಳಾಗಿವೆ. ಭಾರತದಲ್ಲೂ ಕೆಲವು ದಾಳಿಗಳಾಗಿವೆ. ಈ ಎಲ್ಲಾ ಕೃತ್ಯಗಳನ್ನು ಇಷ್ಟು ಸಲೀಸಾಗಿ ಮಾಡಲು ಒಂದು ಸಣ್ಣ ಶಕ್ತಿಯಿಂದ ಸಾಧ್ಯವಿಲ್ಲವೆಂಬುದು ಎಲ್ಲರಿಗೂ ಗೊತ್ತಾಗುವಂಥ ಸಂಗತಿಯೇ. ಅಲ್‌ಖೈದಾ ಮತ್ತು ಪಾಕಿಸ್ತಾನೀ ತಾಲಿಬಾನ್‌ಗಳು ಜಂಟಿಯಾಗಿ ಈ ಪಾತಕಗಳನ್ನು ಎಸಗಿವೆ. ಪಾಕಿಸ್ತಾನವನ್ನು ದುರ್ಬಲಗೊಳಿಸಿ ಆ ಮೂಲಕ ಭಾರತದ ಮೇಲೆ ಸಂಪೂರ್ಣ  ಮನಸೋಯಿಚ್ಛೆ ದಾಳಿ ನಡೆಸುವುದು ಈ ಉಗ್ರರ ಉದ್ದೇಶವೆನ್ನಲಾಗುತ್ತಿದೆ. 

ಅಲ್‌ಖೈದಾದ ಕಬಂಧ ಬಾಹುಗಳು ವಿಶ್ವಾದ್ಯಂತ ಇವೆ. ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆಸುವುದು ಆ ಭಯೋತ್ಪಾದಕರ ಪ್ರಮುಖ ಗುರಿಯಾಗಿದೆ. ಪಾಕಿಸ್ತಾನೀ ತಾಲಿಬಾನ್ ಸಂಘಟನೆಯ ಶಕ್ತಿ ಅಡಗಿರುವುದು ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿ. ಈ ಸ್ಥಳಗಳು ಸ್ವತಃ ಪಾಕಿಸ್ತಾನ ಸರ್ಕಾರದ ಹಿಡಿತಕ್ಕೆ ಸಂಪೂರ್ಣವಾಗಿ ಇನ್ನೂ ಒಳಪಟ್ಟಿಲ್ಲ. ಹೀಗಾಗಿ ಇಲ್ಲಿ ಉಗ್ರರ ಅಟ್ಟಹಾಸ ಮತ್ತು ಬೆಳವಣಿಗೆ ಮಿತಿಮೀರಿದೆ. ಆಫ್ಘಾನಿಸ್ತಾನಕ್ಕೆ ಅಂಟಿಕೊಂಡಂತಿರುವ ಈ ಅಪಾಯಕಾರಿ ಪ್ರದೇಶಗಳಲ್ಲಿ ತಾಲಿಬಾನ್ ಮತ್ತಿತರ ಭಯೋತ್ಪಾದಕ ಸಂಘಟನೆಗಳೊಂದಿಗೆ ಅಲ್‌ಖೈದಾ ಸುಲಭವಾಗಿ ಕೈಜೋಡಿಸಲು ಸಾಧ್ಯವಾಗಿದೆ ಎಂದನ್ನುತ್ತಾರೆ ನೆಲ್ಸನ್. 

ಆಫ್ಘಾನಿಸ್ತಾನದ ಮೇಲೆ ದಾಳಿ ಮಾಡಿ ಅಲ್ಲಿ ತಾಲಿಬಾನೀಗಳನ್ನು ಸದೆಬಡಿದು ಪ್ರಜಾತಂತ್ರ ವ್ಯವಸ್ಥೆ ಸ್ಥಾಪಿಸಿದ ಅಮೆರಿಕ ದೇಶಕ್ಕೆ ಮುಂದಿನ ಗುರಿ ಇರಬೇಕಾದುದು ಅಲ್‌ಖೈದಾವನ್ನು ಮಟ್ಟಹಾಕುವುದು. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹೆಜ್ಜೆ ಇರಿಸಬೇಕೆಂದು ನೆಲ್ಸನ್ ಅಭಿಪ್ರಾಯಪಡುತ್ತಾರೆ.

ಸೌಜನ್ಯ: ಕನ್ನಡಪ್ರಭ, ಅಕ್ಟೋಬರ್ ೨೪


Share: