ಭಟ್ಕಳ: ಮಾರ್ಚ್ 1: ಭಟ್ಕಳ ತಾಲೂಕಿನ ಮುಂಡಳ್ಳಿ, ನೆಸ್ತಾರ್ ಗುಡ್ಡ ಪ್ರದೇಶದಲ್ಲಿ ಕಳೆದ ಹಲವಾರು ದಿನಗಳಿಂದ ಚಿರತೆಯೊಂದು ಮನೆಮಾಡಿಕೊಂಡಿದ್ದು ಈ ಬಗ್ಗೆ ಸಾರ್ವಜನಿಕರು ಆತಂಕಿತರಾಗಿದ್ದಾರೆ. ಈಗಾಗಲೆ ಒಂದು ಜಾನುವಾರು ಇದಕ್ಕೆ ಬಲಿಯಾಗಿದ್ದು, ಇಂದು ಸಂಜೆ ವೇಳೆ ಸಗಣಿ ಸಂಗ್ರಹಿಸಲು ತೆರಳಿದ್ದ ಮಹಿಳೆಯರಿಬ್ಬರನ್ನು ಚಿರತೆಯು ಅಟ್ಟಿಸಿಕೊಂಡು ಬಂದ ಪರಿಣಾಮ ಜೀವ ರಕ್ಷಣೆಗಾಗಿ ಮಹಿಳೆಯರು ಓಡಿದ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಿನ್ನೆ ಸಂಜೆ ನಡೆದಿದೆ.
ಗಾಯಗೊಂಡ ಮಹಿಳೆಯರನ್ನು ಮುಂಡಳ್ಳಿಯ ಜೋಗಿಮನೆ ಪ್ರದೇಶದ ಲಕ್ಷ್ಮೀ ಸೋಮಯ್ಯ ದೇವಾಡಿಗ ಹಾಗೂ ಸುಶೀಲಾ ಮಂಜಯ್ಯ ದೇವಾಡಿಗ ಎಂದು ಗುರುತಿಸಲಾಗಿದೆ. ಇವರು ರವಿವಾರ ಸಂಜೆ ಬೆರಣಿಗಾಗಿ ಸಗಣಿ ಸಂಗ್ರಹಿಸಲು ಮುಂಡಳ್ಳಿ ಗುಡ್ಡಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಗುಡ್ಡದಲ್ಲಿದ್ದ ಒಂದು ಸಣ್ಣ ಹಾಗೂ ಒಂದು ದೊಡ್ಡ ಚಿರತೆ ಇವರನ್ನು ನೋಡಿ ಅಟ್ಟಿಸಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಮಹಿಳೆಯರು ಭಯಬೀತರಾಗಿ ಧಿಕ್ಕಾಪಾಲಾಗಿ ಓಡುವ ಬರದಲ್ಲಿ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಲಕ್ಷ್ಮೀ ದೇವಾಡಿಗ ಐದು ತಿಂಗಳ ಬಸುರಿ ಎಂದು ಹೇಳಲಾಗಿದ್ದು, ಬಿದ್ದಿದ್ದರಿಂದ ಈಕೆ ತಲೆ ಮುಂತಾದ ಕಡೆ ಗಾಯವಾಗಿದೆ. ಅದರಂತೆ ಸುಶೀಲಾ ದೇವಾಡಿಗರಿಗೆ ಕಾಲಿಗೆ ಸ್ವಲ್ಪ ಮಟ್ಟಿಗೆ ಗಾಯವಾಗಿದ್ದು ಕಂಡು ಬಂದಿದೆ. ಇಬ್ಬರನ್ನೂ ಸಹ ನಗರದ ಸರಕಾರಿ ಆಸ್ಪತ್ರೆಗೆ ಆರೋಗ್ಯ ರಕ್ಷಾ ವಾಹನದಲ್ಲಿ(108) ಕರೆತಂದು ಚಿಕಿತ್ಸೆ ನೀಡಲಾಗಿದೆ.
ಚಿರತೆ ಓಡಾಟದಿಂದ ಭಯಗೊಂಡ ಜನರು.............
ಕಳೆದ ಒಂದೂವರೆ ತಿಂಗಳಿನಿಂದ ಹುಯ್ಯಲಮಡಿ, ಮುಂಡಳ್ಳಿ ಗುಡ್ಡದಲ್ಲಿ ಹುಲಿ ತಿರುಗಾಡುತ್ತಿದ್ದು, ಇದನ್ನು ನೋಡಿದ ಜನರು ಕಂಗಾಲಾಗಿದ್ದರು. ಈಗಾಗಲೇ ಈ ಭಾಗದ ಹತ್ತಕ್ಕೂ ಅಧಿಕ ದನಕರುಗಳನ್ನು ಹುಲಿ ತಿಂದಿದೆ ಎನ್ನಲಾಗಿದೆ. ಹುಲಿ ಓಡಾಟದಿಂದ ಭಯಗೊಂಡಿರುವ ಜನರು ಇಲ್ಲಿಗೆ ಹೋಗಲು ಸಹ ಹಿಂಜರಿಯುವಂತಾಗಿದೆ. ಹುಯ್ಯಲಮಡಿ ಮತ್ತು ಮುಂಡಳ್ಳಿ ಗುಡ್ಡದಲ್ಲಿ ಓಡಾಡುತ್ತಿರುವ ಚಿರತೆ ಗಳ ಬಗ್ಗೆ ಅರಣ್ಯ ಇಲಾಖೆಯವರಿಗೂ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಚಿರತೆ ಕಾಣಿಸಲು ಸಿಗದೇ ಇರುವುದರಿಂದ ಅಧಿಕಾರಿಗಳು ಮತ್ತೆ ಅತ್ತ ಕಡೆ ತಲೆ ಹಾಕಲೇ ಇಲ್ಲ. ಇದೀಗ ನಿನ್ನೆ ಮುಂಡಳ್ಳಿ ಗುಡ್ಡದಲ್ಲಿ ಮಹಿಳೆಯರಿಬ್ಬರನ್ನು ಚಿರತೆಯೊಂದು ಅಟ್ಟಿಸಿಕೊಂಡು ಬಂದಿದ್ದರಿಂದ ಈ ಭಾಗದ ಜನರು ಮತ್ತಷ್ಟು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯುವರು ಮತ್ತೊಮ್ಮೆ ಈ ಭಾಗದಲ್ಲಿ ಚಿರತೆಯ ಬಗ್ಗೆ ಪರಿಶೀಲನೆ ನಡೆಸಬೇಕಿದೆ.