ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ದೇವಾಡಿಗ ವಕಾಲತ್ತು

ಭಟ್ಕಳ: ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ದೇವಾಡಿಗ ವಕಾಲತ್ತು

Sun, 07 Feb 2010 18:53:00  Office Staff   S.O. News Service

ಭಟ್ಕಳ, ಫೆಬ್ರವರಿ 7:ಉತ್ತರಕನ್ನಡ ಜಿಲ್ಲೆಯ ಮೊಗೇರರು ಪರಿಶಿಷ್ಟ ಜಾತಿಗೆ ಸೇರುತ್ತಿದ್ದು, ವಿನಾ ಕಾರಣ ಜಾತಿ ಪ್ರಮಾಣ ನೀಡದೇ ಅಧಿಕಾರಿಗಳು ಅನ್ಯಾಯವೆಸಗುತ್ತಿದ್ದಾರೆ ಎಂದು ತಾಲೂಕು ಪಂಚಾಯತ ಸದಸ್ಯ ಪರಮೇಶ್ವರ ದೇವಾಡಿಗ ಮತ್ತೊಮ್ಮೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

 

2005ರಲ್ಲಿ ಸರಕಾರವೇ ಈ ಕುರಿತು ಸ್ಪಷ್ಟ ಆದೇಶ ನೀಡಿದೆ. ಸಚಿವ ಸಂಪುಟದಲ್ಲಿಯೂ ಈ ಕುರಿತು ಅಧಿಕೃತ ನಿರ್ಣಯ ಹೊರ ಬಂದಿದೆ ಎಂದ ಅವರು ಶಿಕ್ಷಣ ಇಲಾಖೆಯ ಪ್ರಯೋಜನ ಪಡೆಯಲು ಮೊಗೇರರನ್ನು ಪರಿಶಿಷ್ಟ ಜಾತಿಯವರನ್ನಾಗಿ ಪರಿಗಣಿಸಲಾಗುತ್ತಿದೆ. ಆದರೆ ಸಮಾಜ ಕಲ್ಯಾಣ ಇಲಾಖೆಯು ಕಾನೂನನ್ನು ಗಾಳಿಗೆ ತೂರುತ್ತಿದ್ದು, ಒಂದು ವಾರದ ಒಳಗಾಗಿ ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆ ಅವರು ಆಗ್ರಹಿಸಿದರು. ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಈ ಕುರಿತಂತೆ ನಿರ್ಣಯ ತೆಗೆದುಕೊಳ್ಳಲು ಯಾವುದೇ ಅಧಿಕಾರವಿಲ್ಲ. ನಿಮಗೂ ಆ ಕುರಿತು ನಿರ್ಣಯವನ್ನು ಅಂಗೀಕರಿಸುವ ಹಕ್ಕು ಇಲ್ಲ. ನಿಮಗೆ ಜಾತಿ ಪ್ರಮಾಣದ ಕುರಿತಂತೆ ಆದೇಶ ನೀಡಲು ನಿಮ್ಮ ಮೇಲಾಧಿಕಾರಿಗಳಿಗೂ ಅವಕಾಶವಿಲ್ಲ. ಕೇಂದ್ರ ಸರಕಾರವೇ ಈ ಕುರಿತು ಆದೇಶ ಹೊರಡಿಸಬೇಕಿದೆ ಎಂದ ಅವರು ಸಮಸ್ಯೆ ಹಾಗೆಯೇ ಮುಂದುವರೆದರೆ ಉಗ್ರ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದಕ್ಕೆ ಸದಸ್ಯರುಗಳಾದ ಜಯಲಕ್ಷ್ಮಿ ಗೊಂಡ, ವಿಠ್ಠಲ್ ನಾಯ್ಕ, ಲಕ್ಷ್ಮಿ ನಾಯ್ಕ ಬೆಂಬಲವನ್ನು ಸೂಚಿಸಿದರು.

 


Share: