ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ:ತಾಲೂಕು ಪಂಚಾಯತ ಸಭೆಯಲ್ಲಿ ಮತ್ತೆ ಪಡಿತರ ಗೋಳು

ಭಟ್ಕಳ:ತಾಲೂಕು ಪಂಚಾಯತ ಸಭೆಯಲ್ಲಿ ಮತ್ತೆ ಪಡಿತರ ಗೋಳು

Thu, 21 Jan 2010 14:37:00  Office Staff   S.O. News Service
ಭಟ್ಕಳ, ಜನವರಿ 21: ಪಡಿತರ ಚೀಟಿ ಗೊಂದಲ ಮತ್ತೊಮ್ಮೆ ತಾಲೂಕು ಪಂಚಾಯತ ಸಭೆಯಲ್ಲಿ ಪ್ರತಿಧ್ವನಿಸಿದ್ದು, ಬಿಪಿ‌ಎಲ್ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಗ್ರಾಮಸಭೆಯಲ್ಲಿ ಅನುಮೋದನೆ ಪಡೆದ ನಂತರವಷ್ಟೇ ಖಾಯಂ ಗೊಳಿಸುವಂತೆ ಗುರುವಾರ ನಡೆದ ತಾಲೂಕು ಪಂಚಾಯತ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲರೂ ಪಕ್ಷ ಭೇದ ಮರೆತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
 
ಸಭೆಯ ಮಧ್ಯೆ ವಿಷಯವನ್ನು ಪ್ರಸ್ತಾಪಿಸಿದ ಸದಸ್ಯ ಪರಮೇಶ್ವರ ದೇವಾಡಿಗ, ಪ್ರತಿ ಸಭೆಯಲ್ಲಿಯೂ ಏನಾದರೊಂದು ಹೇಳಿಕೊಂಡು ನಮ್ಮನ್ನೆಲ್ಲ ಸಾಗ ಹಾಕುತ್ತಿದ್ದೀರಿ. ಆದರೆ ಸಮಸ್ಯೆಗೆ ಪರಿಹಾರ ಎಂಬುದು ಇನ್ನೂ ಕಂಡುಬರುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೇಲೆ ಈ ಕುರಿತಂತೆ ಸಮಾನ ಜವಾಬ್ದಾರಿ ಅಡಗಿದೆ. ಜನರಿಗೆ ಈ ಕುರಿತು ಯಾವುದೇ ಉತ್ತರವನ್ನು ನೀಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಇಂದೇ ಪರಿಹಾರ ಘೋಷಿಸುವಂತೆ ಅವರು ಪಟ್ಟು ಹಿಡಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ವಿಠ್ಠಲ್ ನಾಯ್ಕ, ಮನಸ್ಸಿಗೆ ಬಂದಂತೆ ಪಡಿತರ ಸಾಮಾನುಗಳನ್ನು ನ್ಯಾಯಬೆಲೆ ಅಂಗಡಿಗಳಿಗೆ ಸಾಗಿಸಲಾಗುತ್ತಿದೆ. ಪಡಿತರ ಚೀಟಿಯ ಕಾರಣ ಹೇಳಿ ಜನರಿಗೂ ನೀಡದೇ ಸಾಮಾನುಗಳನ್ನು ಮಾರಿ ತಿನ್ನಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. ವಿಷಯದ ಗಂಭೀರತೆಯನ್ನು ಅರಿತ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ, ಒಂದು ವಾರದೊಳಗೆ ತಹಸೀಲ್ದಾರರು, ಆಹಾರ ನಿರೀಕ್ಷಕರು ಹಾಗೂ ಸರ್ವೇ ಕಾರ್ಯ ನಡೆಸಿದವರ ವಿಶೇಷ ಸಭೆ ಕರೆದು ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂಬ ಭರವಸೆ ನೀಡಿದರು. ಕಳೆದ ಆರು ತಿಂಗಳುಗಳಿಂದ ಹೆರಿಗೆ ಭತ್ಯೆ ಹಾಗೂ ಮಡಿಲು ಕಿಟ್ಟನ್ನು ನೀಡದಿರುವ ಬಗ್ಗೆ ಕಾಯ್ಕಿಣಿ ಗ್ರಾಮಪಂಚಾಯತ ಅಧ್ಯಕ್ಷೆ ದೇವಿ ನಾಯ್ಕ ಸಭೆಯ ಗಮನಕ್ಕೆ ತಂದರು. ಹೃದಯ ಚಿಕಿತ್ಸೆಗಾಗಿ ತಾಲೂಕಿನ ೧೮ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಮೂವರ ಪಾಲಕರು ಚಿಕಿತ್ಸೆಯನ್ನು ನಿರಾಕರಿಸಿದ್ದಾರೆ. ಉಳಿದ ೧೫ ವಿದ್ಯಾರ್ಥಿಗಳಲ್ಲಿ ೬ ವಿದ್ಯಾರ್ಥಿಗಳು ಚಿಕಿತ್ಸೆಯಿಂದಾಗಿ ಗುಣಮುಖ ಹೊಂದಿದ್ದಾರೆ. ಉಳಿದವರಿಗೆ ಔಷಧಿಯನ್ನು ನೀಡಲು ವೈದ್ಯರು ಸೂಚಿಸಿದ್ದಾರೆ ಎಂದು ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿ ಎನ್.ಜೆ.ಗೌಡ ವಿವರಿಸಿದರು.
 
ಅಕ್ರಮ ಸಕ್ರಮದ ಕುರಿತಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತಿಮ್ಮಣ್ಣ ನಾಯ್ಕ ನೀಡಿದ ಉತ್ತರ ಕೆಲ ಹೊತ್ತು ಬಿಸಿಬಿಸಿ ಚರ್ಚೆಗೆ ಕಾರಣವಾಯಿತು. ಅಕ್ರಮ ಸಕ್ರಮ ಕುರಿತಂತೆ ತಾಲೂಕಿನಲ್ಲಿ ೬೫೪೭ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಯಾರೂ ಫಲಾನುಭವಿಗಳಾಗಲು ಅರ್ಹರಾಗಿರುವುದಿಲ್ಲ ಎಂದು ಅವರು ಮಾಹಿತಿಯನ್ನು ನೀಡುತ್ತಿದ್ದಂತೆಯೇ ಆಕ್ರೋಶಗೊಂಡ ತಾಲೂಕು ಪಂಚಾಯತ ಉಪಾಧ್ಯಕ್ಷ ಮಾದೇವ ನಾಯ್ಕ, ಈ ಕುರಿತು ಗ್ರಾಮ ಪಂಚಾಯತ ಮಟ್ಟದಲ್ಲಿ ಕರೆದ ಸಭೆಗೆ ನೀವು ಗೈರು ಹಾಜರಾಗುತ್ತಿದ್ದೀರಿ. ಇದೀಗ ಯಾರೂ ಅರ್ಹರಲ್ಲ ಎಂದರೆ ಹೇಗೆ ಎಂದು ಆರೋಪಗಳ ಸುರಿಮಳೆಗರೆದರು. ಹೊಟೆಲ್ಲುಗಳ ಪರವಾನಿಗೆ ಕುರಿತಂತೆ ಭಟ್ಕಳ ಉಪವಿಭಾಗಾಧಿಕಾರಿಗಳು ನೀಡಿದ ನೋಟಿಸ್ ಬಗ್ಗೆಯೂ ಚರ್ಚೆ ನಡೆಯಿತು. ಒಂದು ವಾರದ ಕಾಲಾವಕಾಶ ಕಡಿಮೆಯಾಗಿದ್ದು, ಅದನ್ನು ವಿಸ್ತರಿಸುವಂತೆ ಭಟ್ಕಳ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸದಸ್ಯರೆಲ್ಲರೂ ಒಮ್ಮತದ ತೀರ್ಮಾನ ಕೈಗೊಂಡರು. ಹಾಡುವಳ್ಳಿಯಲ್ಲಿ ಅಳವಡಿಸಲಾಗಿರುವ ನೂತನ ಬಿ‌ಎಸ್ಸೆನ್ನೆಲ್ ಟೋವರಿನಿಂದ ಕನಿಷ್ಠ ಒಂದು ಕಿಲೋಮೀಟರು ದೂರದ ಜನರಿಗೂ ಪ್ರಯೋಜನವಾಗುತ್ತಿಲ್ಲ. ಈ ಕುರಿತು ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು. ತಾಲೂಕು ಪಂಚಾಯತ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸಿಂಧು ಭಾಸ್ಕರ ನಾಯ್ಕ ಸಭೆಯಲ್ಲಿ ಉಪಸ್ಥಿತರಿದ್ದರು. ಎಮ್.ಎಮ್.ಹೆಗಡೆ ಎಲ್ಲರನ್ನೂ ಸ್ವಾಗತಿಸಿದರು. ವ್ಯವಸ್ಥಾಪಕ ವಿನೋದ ಗಾಂವಕರ ವಂದಿಸಿದರು. 


Share: