ಖಾಟ್ಮಂಡು, ನೇಪಾಳ: ಗೋಹತ್ಯೆಯನ್ನು ಕುರಿತಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದೂಪರ ಸಂಘಟನೆಗಳು ವ್ಯಾಪಕ ಚಳುವಳಿ ಸಡೆಸುತ್ತಿದೆ. ಆದರೆ ಜಗತ್ತಿನ ಏಕಮಾತ್ರ ಅಪ್ಪಟ ಹಿಂದೂ ರಾಷ್ಟ್ರವಾದ ನೇಪಾಳದಲ್ಲಿ ಗೋವುಗಳ ಸಹಿತ ಇನ್ನಿತರ ಸಹಸ್ರಾರು ಜಾನಿವಾರುಗಳನ್ನು ಒಂದೇ ದಿನದಲ್ಲಿ ಬಲಿ ನೀಡಲಾಗುತ್ತಿದೆ.
ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಸಂಪ್ರದಾಯದಲ್ಲಿ ಹಸ್ತಕ್ಷೇಪಮಾಡಲು ನೇಪಾಳ ಸರ್ಕಾರವೂ ಸಿದ್ಧವಿಲ್ಲ.

ಮಾಧ್ಯಮಗಳ ವರದಿಯ ಪ್ರಕಾರ ಕಾಠ್ಮಂಡುವಿನಿಂದ ದಕ್ಷಿಣ ದಿಕ್ಕಿನಲ್ಲಿ ಸುಮಾರು ಇನ್ನೂರು ಕಿ.ಮೀ. ದೂರವಿರುವ ಬಾರಾ ಜಿಲ್ಲೆಯ ಗಧಿಮಾಯಿ ದೇವಸ್ಥಾನದಲ್ಲಿ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಈ ಬಲಿ ನೀಡಲಾಗುತ್ತಿದೆ. ಈ ವರ್ಷ ಈ ಉತ್ಸವ ನವೆಂಬರ್ ೨೪ ರಂದು ಪ್ರಾರಂಭವಾಗಿದೆ.
ಈ ಉತ್ಸವದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಹಿಂದೂ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದು ಅವರಲ್ಲಿ ಬಹುತೇಕರು ಭಾರತೀಯರೇ ಆಗಿದ್ದಾರೆ. ಈ ಉತ್ಸವ ಪ್ರತಿವರ್ಷ ನಡೆದರೂ ಐದು ವರ್ಷಕ್ಕೊಮ್ಮೆ ವಿಶೇಷ ಪೂಜೆ ನಡೆಯುವ ಕಾರಣ ಆ ವರ್ಷ ಜನಜಂಗುಳಿ ಬಹಳ ಹೆಚ್ಚಿರುತ್ತದೆ. ಕಳೆದ ವರ್ಷವಷ್ಟೇ ಈ ಪಂಚವಾರ್ಷಿಕ ಉತ್ಸವ ಜರುಗಿದೆ. ಭಾರತದಿಂದ ಆಗಮಿಸುವ ಭಕ್ತರಲ್ಲಿ ಹೆಚ್ಚಿನವರು ಕಾಶಿ, ಪಟ್ನಾ, ಬಿಹಾರ, ಸೀತಾಮಾಧಿ, ಜಾರ್ಖಂಡ್, ಸಮಶ್ಟಿಪುರ ಮೊದಲಾದೆಡೆಯಿಂದ ಆಗಮಿಸುತ್ತಾರೆ.
ಪ್ರತಿವರ್ಷ ಒಂದೇ ದಿನದಲ್ಲಿ ನೀಡಲಾಗುವ ಪ್ರಾಣಿಬಲಿಗಳ ಸಂಖ್ಯೆಯನ್ನು ಪರಿಗಣಿಸಿದರೆ ಇದು ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ದೇವತೆಗಳನ್ನು ಸಂತುಷ್ಥಿಗೊಳಿಸಲು ನೀಡಲಾಗುವ ಈ ಬಲಿಗೆ ಬಲಿಯಾಗುವ ಪ್ರಾಣಿಗಳ ಒಟ್ಟು ಸಂಖ್ಯೆ ಮೂರು ಲಕ್ಷದಿಂದ ಐದು ಲಕ್ಷ!
ಇದರಲ್ಲಿ ಸುಮಾರು ಇಪ್ಪತ್ತು ಸಾವಿರ ಎಮ್ಮೆ, ಮೂವತ್ತರಿಂದ ಮೂವತ್ತೈದು ಸಾವಿರ ಕುರಿಗಳು, ಅಸಂಖ್ಯ ಸಂಖ್ಯೆಯ ಪಕ್ಷಿಗಳನ್ನು ಬಲಿ ನೀಡಲಾಗುತ್ತದೆ ಎಂದು ದೇವಸ್ಥಾನದ ಅರ್ಚಕರಾದ ಮಹೇಶ್ ಝಾ ತಿಳಿಸುತ್ತಾರೆ.
"ಇಂದು ನಮಗೆ ಸಂದಿರುವ ಸಕಲವೂ ದೇವಿ ಗಧಿಮಾಯಿಗೆ ಸೇರಿದ್ದು. ಅದರಲ್ಲಿ ಕೆಲವನ್ನಾದರೂ ನಾವು ಹಿಂದಿರುಗಿಸುವುದು ಆಕೆಯ ಕಟಾಕ್ಷ ಪಡೆಯಲು. ನೂರಾರು ವರ್ಷಗಳಿಂದ ಈ ವಿಧಿ ನಡೆಯುತ್ತಾ ಬಂದಿದ್ದು ದೇವಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆ ನಮಗಿದೆ, ಮುಂದೆಯೂ ಇದೇ ರೀತಿ ಮುಂದುವರೆಯುತ್ತದೆ’ ಎಂದು ಅನಕ್ಷರಸ್ತೆಯಾದ ಸ್ಥಳೀಯ ಭಕ್ತೆ ಚಂಪಾದೇವಿ ತಿಳಿಸುತ್ತಾರೆ.
ಆದರೆ ಅಹಿಂಸೆಯ ಪ್ರತೀಕವಾದ ಬುದ್ಧನ ಅನುಯಾಯಿಯಲ್ಲೊಬ್ಬರಾದ ರಾಮ್ ಬಹಾದುರ್ ಬೋಮ್ಜಾನ್ ಹಾಗೂ ಕೆಲವು ಸಹವರ್ತಿಗಳು ಸರ್ಕಾರವನ್ನು ಸಂಪರ್ಕಿಸಿ ಈ ಬಲಿಯನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ನೇಪಾಳ ಸರ್ಕಾರ ಈ ವಿಧಿಯಲ್ಲಿ ಹಸ್ತಕ್ಷೇಪ ನಡೆಸಲು ತಯಾರಿಲ್ಲ.
ಬಲಿಯ ಬಳಿಕ ಸಂಗ್ರಹವಾಗುವ ಮಾಂಸ, ಮೂಳೆ, ಚರ್ಮ ಮೊದಲಾದವು ರವಾನೆಯಾಗುವುದು ನೇಪಾಳದ ಹಾಗೂ ಭಾರತದ ಟ್ಯಾನರಿಗಳಿಗೆ. ಸಂಗ್ರಹದ ಸಿಂಹಪಾಲು ಬರುವುದು ಭಾರತಕ್ಕೇ.

ಈ ಬಗ್ಗೆ ಸಿದ್ಧಪಡಿಸಲಾಗಿರುವ ಸಾಕ್ಷ್ಯಚಿತ್ರವನ್ನು ಈ ಕೆಳಕಂಡ ವಿಡಿಯೋ ಕೊಂಡಿಯ ಮೂಲಕ ವೀಕ್ಷಿಸಬಹುದು.