ಬೆಂಗಳೂರು,ಏ,20:ರಾಜ್ಯದ ಎಲ್ಲಾ ಜಿಲ್ಲೆಗಳ ಬಸ್ ನಿಲ್ದಾಣಗಳಲ್ಲಿ ಅಧಿಕಾರಿಗಳ ಜತೆ ಷಾಮೀಲಾಗಿ ಆಕ್ರಮವಾಗಿ ಮಳಿಗೆಗಳನ್ನು ನಿರ್ಮಿಸುವ,ಅನೈತಿಕ ಚಟುವಟಿಕೆಗಳಿಗೆ ಅಡ್ಡೆಗಳನ್ನು ಸ್ಧಾಪಿಸುವ ಸಮಾಜ ಘಾತಕ ಶಕ್ತಿಗಳನ್ನು ಮಟ್ಟ ಹಾಕಲು ಸರ್ಕಾರ ಮುಂದಾಗಿದೆ.
ರಾಜ್ಯದ ಎಲ್ಲಾ ಭಾಗಗಳಿಂದ ಬೆಂಗಳೂರಿಗೆ ಬರುವ ಜನಸಾಮಾನ್ಯರನ್ನು ವಂಚಿಸುವ ಮೆಜೆಸ್ಟಿಕ್ ಮಾಫಿಯಾ ವಿರುದ್ಧ ಇಂದಿಲ್ಲಿ ಮುಗಿಬಿದ್ದಿರುವ ಸರ್ಕಾರ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸುವುದರೊಂದಿಗೆ ಈ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಮಹಾನಗರ ಪಾಲಿಕೆ ಅಧಿಕಾರಿಗಳ ಜತೆ ಷಾಮೀಲಾಗಿ ಮೆಜೆಸ್ಟಿಕ್ ಪ್ರದೇಶದಲ್ಲಿರುವ ಅಂಡರ್‌ಪಾಸ್, ಪುಟ್‌ಪಾತ್ ಸೇರಿದಂತೆ ಎಲ್ಲಾ ಕಡೆ ಆಕ್ರಮವಾಗಿ ಮಳಿಗೆಗಳನ್ನು ನಿರ್ಮಿಸಿಕೊಂಡ ಈ ಮಾಫಿಯಾದ ಕಾರ್ಯಾಚರಣೆಯ ಬಗ್ಗೆ ಹಿಂದಿನಿಂದಲೂ ಹಲವು ದೂರುಗಳು ಕೇಳಿ ಬಂದಿದ್ದವು.
ಈ ಹಿನ್ನೆಲೆಯಲ್ಲಿಯೇ ಇಂದು ಸಾರಿಗೆ, ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಮೆಜೆಸ್ಟಿಕ್ ಮಾಫಿಯಾ ವಿರುದ್ಧ ಸಾರಿಗೆ ಸಚಿವ ಆರ್.ಅಶೋಕ್ ದಾಳಿ ನಡೆಸಿದಾಗ ಆಘಾತಕಾರಿ ಅಂಶಗಳು ಬಹಿರಂಗವಾದವು.
ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಬಿಎಂಟಿಸಿ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳನ್ನು ಸಂಪರ್ಕಿಸುವ ಅಂಡರ್‌ಪಾಸ್‌ಗೆ ನುಗ್ಗಿದ ಅಶೋಕ್ ಅಲ್ಲಿ ನೂರಾರು ಮಂದಿ ವ್ಯಾಪಾರ ವ್ಯವಹಾರ ನಡೆಸುತ್ತಿದ್ದುದನ್ನು ಕಂಡು ದಂಗು ಬಡಿದು ಹೋದರು.
ಈ ಹಿನ್ನೆಲೆಯಲ್ಲಿ ತಕ್ಷಣವೇ ಆ ಪ್ರದೇಶದ ಜವಾಬ್ದಾರಿ ವಹಿಸಿರುವ ಬಿಬಿಎಂಪಿ ಇಂಜಿನಿಯರ್ ಒಬ್ಬರನ್ನು ಕರೆಸಿ ವಿಚಾರಿಸಿದರೆ ವರ್ಷಕ್ಕೆ ಎರಡು ಲಕ್ಷ ರೂ ಪಡೆದು ಐವತ್ತಾರು ಮಳಿಗೆಗಳನ್ನು ನಿರ್ಮಿಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದಾಗ ಅಶೋಕ್ ಕೆಂಡಾಮಂಡಲಗೊಂಡರು.
ಇಡೀ ವರ್ಷಕ್ಕೆ ಎರಡು ಲಕ್ಷ ರೂಪಾಯಿ ಯಾವ ಜುಜುಬಿ ಅಮೌಂಟು ಕಣ್ರೀ. ಮೂರು ಸಾವಿರ ಕೋಟಿ ರೂಗಳ ವಹಿವಾಟು ಹೊಂದಿರುವ ಬೆಂಗಳೂರು ಮಹಾನಗರ ಪಾಲಿಕೆಗೆ ಎರಡು ಲಕ್ಷ ರೂಪಾಯಿಗಳ ಅಗತ್ಯವಿದೆಯೇನ್ರೀ? ಎಂದು ಗುಡುಗಿದರು.
ಕೊನೆಗೆ ಅಲ್ಲಿದ್ದ ವ್ಯಾಪಾರಿಗಳನ್ನು ವಿಚಾರಣೆಗೊಳಪಡಿಸಿದಾಗ ಅಲ್ಲಿರುವ ನೂರಾರು ವ್ಯಾಪಾರಿಗಳು ದಿನನಿತ್ಯ ಮುನ್ನೂರು ರೂಪಾಯಿಗಳನ್ನು ಮಾಫಿಯಾಗೆ ನೀಡುವ ಸಂಗತಿ ಬೆಳಕಿಗೆ ಬಂತು.
ಈ ಪೈಕಿ ಒಬ್ಬಳೇ ಹೆಂಗಸು ಐವತ್ತು ಅಂಗಡಿಗಳವರ ಬಳಿ ಇಪ್ಪತ್ತು ಸಾವಿರ ರೂಗಳಂತೆ ತಿಂಗಳಿಗೆ ಆರು ಲಕ್ಷ ರೂ ಹಫ್ತಾ ಪಡೆಯುವ ಸುದ್ಧಿ ಬಹಿರಂಗವಾದಾಗ ಇನ್ನಷ್ಟು ಕೆಂಡಾಮಂಡಲಗೊಂಡ ಅಶೋಕ್ ಸದರಿ ಇಂಜಿನಿಯರ್ ಅವರನ್ನು ತಾರಾಮಾರಾ ಬೈದಾಡಿದ್ದಲ್ಲದೇ ಸ್ಥಳದಲ್ಲೇ ಇದ್ದ ಬಿಬಿಎಂಪಿ ಕಮೀಷನರ್ ಭರತ್‌ಲಾಲ್ ಮೀನಾ ಅವರಿಗೆ ಸೂಚನೆ ನೀಡಿ ಈ ಇಂಜಿನಿಯರ್ ಅವರನ್ನು ಅಮಾನತು ಮಾಡುವಂತೆ ಆದೇಶಿಸಿದರು.
ನಂತರ ಮೆಜೆಸ್ಟಿಕ್ ಫ್ಲೈ ಓವರ್ ಮೂಲಕ ನಡೆದಾಡಿದ ಅಶೋಕ್‌ಗೆ ನೂರಾರು ಚಪ್ಪಲಿ ಅಂಗಡಿಗಳು ಮತ್ತಿತರ ಅಂಗಡಿಗಳನ್ನು ಕಂಡು ಷಾಕ್ ಆಯಿತು. ಅಲ್ಲೂ ಕೋರ್ಟ್ ಆದೇಶದ ನೆಪದಲ್ಲಿ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಿ ಅಧಿಕಾರಿಗಳು ಗುಳುಂ ಮಾಡುತ್ತಿರುವುದು ಸ್ಪಷ್ಟವಾದ ಕೂಡಲೇ ಸಂಬಂಧಪಟ್ಟ ಇನ್ನಿಬ್ಬರು ಇಂಜಿನಿಯರ್‌ಗಳನ್ನು ಅಮಾನತು ಮಾಡಲು ಆದೇಶ ನೀಡಿದರು.
ಇದಾದ ನಂತರ ಸುದ್ಧಿಗಾರರ ಜತೆ ಮಾತನಾಡಿದ ಆರ್.ಅಶೋಕ್, ಅಧಿಕಾರಿಗಳ ಜತೆ ಷಾಮೀಲಾಗಿ ರೌಡಿಗಳು ಮೆಜೆಸ್ಟಿಕ್ ಪ್ರದೇಶದಲ್ಲಿ ಆಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದು ಇದಕ್ಕೆ ಇಂದಿನಿಂದಲೇ ಬ್ರೇಕ್ ಹಾಕಲಾಗಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲೆಗಳ ಬಸ್ ನಿಲ್ದಾಣಗಳಲ್ಲಿ ಇನ್ನು ಮುಂದೆ ಇಂತಹ ಯಾವುದೇ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳುವುದಾಗಿ ನುಡಿದ ಅವರು, ಈ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡುವುದಾಗಿ ವಿವರ ನೀಡಿದರು.