ಮಂಗಳೂರು, ಡಿ.೧೬:ದೇಶದ ಮಾನವ ಸಂಪನ್ಮೂಲವನ್ನು ಆರ್ಥಿಕವಾಗಿ ಸದೃಢಗೊಳಿಸಲು ವಿಜ್ಞಾನ ಹಾಗು ವೈಜ್ಞಾನಿಕ ವ್ಯವಸ್ಥೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ದೇಶದ ಮೂಲಭೂತ ಅಗತ್ಯಗಳಿಂದ ಹಿಡಿದು ರಕ್ಷಣೆಯವರೆಗೆ ವಿಜ್ಞಾನ ಕ್ಷೇತ್ರದ ಅಭಿವೃದ್ಧಿ ಅಗತ್ಯವಾಗಿದ್ದು, ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಲು ವಿದ್ಯಾರ್ಥಿಗಳಿಗೆ ವಿಜ್ಞಾನದ ಅರಿವು ಬೇಕಾಗಿದೆ ಎಂದು ಯೆನಪೋಯ ವಿವಿ ಉಪಕುಲಪತಿ ಪ್ರೊ. ಸಯ್ಯಿದ್ ಅಖೀಲ್ ಅಹ್ಮದ್ ಹೇಳಿದರು.
ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಇಂದು ಸುರತ್ಕಲ್ನ ಎನ್ಐಟಿಕೆಯಲ್ಲಿ ನಡೆದ ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಅದರಲ್ಲೂ ಮುಖ್ಯವಾಗಿ ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿ ವಿಜ್ಞಾನದಿಂದ ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಸರಕಾರ ಕೈಗೊಂಡಿರುವ ಕ್ರಮವನ್ನು ಪ್ರೊ.ಸಯ್ಯಿದ್ ಅಖೀಲ್ ಅಹ್ಮದ್ ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎನ್ಐಟಿಕೆ ನಿರ್ದೇಶಕ ಪ್ರೊ. ಸಂದೀಪ್ ಸಂಚೇತಿ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಸ್ವಾಗತಿಸಿದರು. ಎನ್ಐಟಿಕೆ ಡೀನ್ ಪ್ರೊ. ಶ್ರೀನಿಕೇತನ್, ಸಂಯೋಜಕ ಡಾ. ಕೆ.ವಿ. ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.