ಭಟ್ಕಳ, ಫೆಬ್ರವರಿ 3: ಕರ್ನಾಟಕ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಡಿ.ವಿ. ಗುರುಪ್ರಸಾದ ಮಂಗಳವಾರ ಭಟ್ಕಳಕ್ಕೆ ಭೇಟಿ ನೀಡಿ ಕೆಲ ಕಾಲ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ.
ಮಂಗಳವಾರ ಮಧ್ಯಾಹ್ನವೇ ಭಟ್ಕಳವನ್ನು ತಲುಪಿರುವ ಅವರು ಇಲ್ಲಿಯ ಜಾಲಿಯ ಸಮುದ್ರ ತೀರದಲ್ಲಿರುವ ವಸತಿ ಗೃಹವೊಂದರಲ್ಲಿ ತಂಗಿದ್ದರು ಎಂದು ತಿಳಿದು ಬಂದಿದೆ. ಇದೊಂದು ಖಾಸಗಿ ಭೇಟಿ ಎಂದು ಹೇಳಲಾಗುತ್ತಿದೆಯಾದರೂ, ಇತ್ತೀಚಿನ ಕ್ರೈಸ್ತರ ಪವಿತ್ರ ಕ್ಷೇತ್ರಗಳ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಪೊಲೀಸ್ ವೈಫಲ್ಯದ ಆರೋಪದ ಕುರಿತಂತೆ ಮಾಹಿತಿಯನ್ನು ಕೇಳಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿಗಳ ಭೇಟಿಯನ್ನು ಗೌಪ್ಯವಾಗಿಡಲಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿ ನೀಡಲು ಸ್ಥಳೀಯ ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.