ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚಿಕ್ಕಮಗಳೂರು: ಶಾಸಕರಿಂದ ದುಡುಕುತನದ ವರ್ತನೆ: ಸಚಿನ್ ಮೀಗಾ ಆರೋಪ

ಚಿಕ್ಕಮಗಳೂರು: ಶಾಸಕರಿಂದ ದುಡುಕುತನದ ವರ್ತನೆ: ಸಚಿನ್ ಮೀಗಾ ಆರೋಪ

Fri, 20 Nov 2009 03:58:00  Office Staff   S.O. News Service
ಚಿಕ್ಕಮಗಳೂರು, ನ.19- ಕಳೆದ ಕೆಲ ದಿನಗಳ ಹಿಂದೆ ಕೊಪ್ಪದಲ್ಲಿ ಅಂಗವಿಕಲರಿಗೆ ಉಚಿತವಾಗಿ ವಿತರಿಸಲು ಸಂಗ್ರಹಿಸಿದ್ದ ಪರಿಕರಗಳನ್ನು ರಾಜಕೀಯ ದುರುದ್ದೇಶದಿಂದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಗುಡುಗಿದ್ದಾರೆ. 

ಗುರುವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರಕಾರದ ಮುಖ್ಯ ಸಚೇತಕ ಡಿ.ಎನ್. ಜೀವರಾಜ್ ಕುಮ್ಮಕ್ಕಿನಿಂದ ಅಧಿಕಾರಿಗಳು ಪರಿಕರಗಳನ್ನು ವಶಪಡಿಸಿಕೊಂಡಿದ್ದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ತಿಳುವಳಿಕೆಯಿದ್ದರೂ ದುಡುಕುತನದಿಂದ ವರ್ತಿಸಿದ್ದು, ಯುವ ಕಾಂಗ್ರೆಸ್ ಘನತೆಗೆ ಮಸಿ ಬಳಿಯಲು ಷಡ್ಯಂತ್ರ ನಡೆಸಿದ್ದರು. ಇಂತಹ ನಡವಳಿಕೆಯು ಶಾಸಕರ ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ ಎಂದು ಟೀಕಿಸಿದರು. 
 
ಕೊಪ್ಪ ಪಟ್ಟಣದ ಹೆಸರಾಂತ ಸಹಕಾರ ಸಾರಿಗೆ ಆವರಣದೊಳಗೆ ಅಧಿಕಾರಿಗಳ ಜತೆಗೆ ದಾಳಿ ನಡೆಸುವ ಮುಂಚೆ ಶಾಸಕರು ಅದರ ಪೂರ್ವಾಪರವನ್ನು ಯೋಚಿಸಿ ಹಿನ್ನೆಲೆಯನ್ನು ತಿಳಿಯಲು ಮುಂದಾಗಬೇಕಿತ್ತು. ಆದರೆ ಶಾಸಕರ ದಾರಿ ಬೇರೆ ರೀತಿ ಇದ್ದಿದ್ದರಿಂದ ಅದು ಸಾಧ್ಯವಾಗಿರಲಿಕ್ಕಿಲ್ಲ ಎಂದು ವ್ಯಂಗ್ಯವಾಡಿದರು. 
 
ಸುಮಾರು ಒಂದು ವರ್ಷಗಳ ಕಾಲ ಸತತ ಪರಿಶ್ರಮದಿಂದ ಕೇಂದ್ರ ಸರ್ಕಾರದ ಗಮನ ಸೆಳೆದು ಜಿಲ್ಲೆಯ ಸುಮಾರು 2300 ಕ್ಕೂ ಅಧಿಕ ವಿಕಲಚೇತನರಿಗೆ ಉಚಿತವಾಗಿ ವಿತರಿಸಲು ಅಗತ್ಯ ಪರಿಕರಗಳನ್ನು ಜಿಲ್ಲಾ ಯುವ ಕಾಂಗ್ರೆಸ್ ತರಿಸಿಕೊಂಡಿತ್ತು.  ಕೇಂದ್ರ ಸಮಾಜ ಕಲ್ಯಾಣ ಸಚಿವೆ ಮೀರಾ ಕುಮಾರಿ ಪರಿಕರಗಳನ್ನು ಸಂದರ್ಭೋಚಿತವಾಗಿ ಕಳುಹಿಸಿಕೊಟ್ಟಿದ್ದರು. ಇದನ್ನು  ರಾಹುಲ್ ಗಾಂಧಿ ಕೊಪ್ಪಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
 
ಪರಿಕರಗಳನ್ನು ಸಂಗ್ರಹಿಸಿಟ್ಟಿದ್ದರಲ್ಲಿ ಯಾವುದೇ ತರಹದ ದುರುದ್ದೇಶವಿರಲಿಲ್ಲ.  ಇದರಲ್ಲಿ ಅಕ್ರಮ ಅಥವಾ ದುರುಪಯೋಗ ನಡೆದಿಲ್ಲ. ಪರಿಕರಕ್ಕೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳು ತಮ್ಮ ಬಳಿ ಇತ್ತು. ಮುಟ್ಟುಗೋಲು ಹಾಕಿಕೊಂಡ ಬಳಿಕ ಅದನ್ನು ಆಡಳಿತ ಇಲಾಖೆಗೆ ಸಲ್ಲಿಸಿದ್ದರಿಂದ ಜಿಲ್ಲಾಡಳಿತವು ಬಿಡುಗಡೆಗೆ ಸೂಚನೆ ನೀಡಿದೆ. ಇದರಿಂದ ರಾಜಕೀಯ ಷಡ್ಯಂತ್ರ ನಡೆಸಿದ ಶಾಸಕರಿಗೆ ಮುಖಭಂಗವಾಗಿರುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ ಎಂದು ಹೇಳಿದರು. 



Share: