ಸಕಲೇಶಪುರ, ಡಿಸೆಂಬರ್ 19: ನಮ್ಮ ಊರಿನ ಹಿರಿಯರ ಆದರ್ಶ ಬದುಕನ್ನು ದಾಖಲಿಸಿರುವ ಸಾಹಿತಿ ಚಂದ್ರಶೇಖರ್ ದೂಳೇಕರ್ ರಚಿಸಿರುವ ಮಂಜರಾಬಾದ್ ತಾಲೂಕಿನ ಮಹಾನುಭಾವರು ಕೃತಿಯ ಬಿಡುಗಡೆ ಡಿಸಂಬರ್ 20 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಗುರುವೇಗೌಡ ಕಲ್ಯಾಣಮಂಟಪದಲ್ಲಿ ನಡೆಯಲಿದೆ ಎಂದು ಸಮಾಜ ಸೇವಕ ಬ್ಯಾಕರವಳ್ಳಿ ಜಯರಾಜ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಂದಿನ ತಲೆಮಾರಿಗೆ ನಮ್ಮೂರಿನ ಹಿರಿಯರು ಮಾಡಿರುವ ಉತ್ತಮ ಕಾರ್ಯಗಳ ಬಗ್ಗೆ ತಿಳಿದಿರುವುದಿಲ್ಲ ಈ ಕೃತಿ ಯುವ ಜನಾಂಗಕ್ಕೆ ಅಮೂಲ್ಯ ಸಾಕ್ಷಿಭೂತವಾಗಿದೆ ಎಂದು ಹೇಳಿದರು.ಕೃತಿಯಲ್ಲಿರುವ 63 ಮಹಾನುಭಾವರ ಸಮಾಜ ಸೇವೆಗಳು ಸಮಾಜಕ್ಕೆ ಆದರ್ಶಪ್ರಾಯವಾಗಿವೆ. ಕಲೆ, ಸಾಹಿತ್ಯ, ಶೈಕ್ಷಣಿಕ, ಆರೋಗ್ಯ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಜಾನಪದ ಸಂಸ್ಕ್ರತಿಯನ್ನ ಉಳಿಸಲು ಶ್ರಮಿಸಿದ್ದರು. ಇಂತಹ ಅಭೂತಪೂರ್ವ ಹಿರಿಯ ಜೀವಗಳನ್ನ ಕಂಡಂತಹ ಊರಿದು, ಹಿಂದಿನ ಹಿರಿಯರ ಆದರ್ಶಗಳು ಇಂದಿನ ತಲೆಮಾರುಗಳಿಗೆ ಬೆಳಕು ನೀಡಲಿ ಎಂಬ ಕಾರಣದಿಂದ ಈ ಕೃತಿಯನ್ನು ಅಧ್ದೂರಿಯಾಗಿ ಬಿಡುಗಡೆಗೊಳಿಸಲು ಈ ತಾಲ್ಲೂಕಿ ಪ್ರಮುಖರೆಲ್ಲ ಸೇರಿದ್ದೇವೆ ಎಂದರು. ಈ ಕಾರ್ಯಕ್ರಮಕ್ಕೆ ಎಲ್ಲಾ ಸಾಹಿತಿಗಳು, ಸಂಘ-ಸಂಸ್ಥೆಗಳು, ಹಿರಿಯರು, ಹಾಗೂ ಯುವಜನಾಂಗ ಬಾಗವಹಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಲೇಖಕರಾದ ಚಂದ್ರಶೇಖರ್ ದೂಳೇಕರ್ ಮಂಜರಾಬಾದ್ ತಾಲೂಕಿನ ಮಹಾನುಭಾವರು ಕೃತಿಯ ಬಿಡುಗಡೆ ಸಮಾರಂಭ ಸಮಿತಿಯ ಉಪಾಧ್ಯಕ್ಷರುಗಳಾದ, ಚನ್ನವೇಣಿ ಎಮ್ ಶೆಟ್ಟಿ, ಪ್ರಕಾಶ್ ಧನಾವತ್, ಖಜಾಂಚಿ ಶಾರದಾ ಗುರುಮೂರ್ತಿ, ಸದಸ್ಯರಾದ ಗೀತಾಂಜಲಿ, ಲಕ್ಷ್ಮಣ್ ಕೀರ್ತಿ ಇದ್ದರು.
ಇಂದಿನ ಆಧುನಿಕ ವೇಗದ ಜೀವನ ಶೈಲಿ ಮತ್ತು ಸಂಸ್ಕ್ರತಿ ದಾರಿಯಲ್ಲಿ ಸಾಗುತ್ತಿರುವ ಯುವ ಜನಾಂಗ ನಮ್ಮ ಗುರಿ ಮತ್ತು ಬದುಕಿಗೆ ಯಾರನ್ನು ಆದರ್ಶವಾಗಿಟ್ಟುಕೊಳ್ಳಬೇಕು, ಎಂಬುದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಕ್ಷಣಿಕ ಮನರಂಜನೆ ನೀಡುವವರನ್ನೇ ಅನುಸರಿಸಿಸುತ್ತಾ, ನಮಗೆ, ನಮ್ಮ ಊರಿಗೆ, ನಾವು ಜೀವಿಸುತ್ತಿರುವ ಸಮಾಜಕ್ಕೆ ತಮ್ಮ ತನು-ಮನ, ಧನ ಸರ್ವಸ್ವವನ್ನು ನೀಡಿದ ನಮ್ಮ ಹಿರಿಯರನ್ನೆ ಮರೆತು ಹೋಗುತ್ತಿರುವುದನ್ನು ಕಂಡ ನನಗೆ ಈ ಪುಸ್ತಕ ಬರೆಯಲು ಪ್ರೇರಣೆಯಾಯಿತು ಎಂದು ಮಂಜರಾಬಾದ್ ತಾಲೂಕಿನ ಮಹಾನುಭಾವರು ಕೃತಿಯ ಲೇಖಕರಾದ ಚಂದ್ರಶೇಖರ್ ದೂಳೇಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಕೃತಿಯ ಬಗ್ಗೆ ಮಾತನಾಡಿದ ಅವರು, ಈ ತಾಲ್ಲೂಕಿನಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ ನೂರರು ಮಹಾನುಭಾವರು ಇದ್ದಾರೆ. ನಾನು ಈ ಪುಸ್ತಕದಲ್ಲಿ 63 ಮಹಾನುಭಾವರ ಮಾಹಿತಿ ಸಂಗ್ರಹಿಸಿ ಪರಿಚಯಿಸಿದ್ದೇನೆ. ಇನ್ನೂ ಮುಂದೆ ಹೀಗೆ ಊರಿನ ಪ್ರಮುಖರ ಸಹಕಾರ ದೊರೆತಲ್ಲಿ ಮುಂದೆ ಉಳಿದ ಹಿರಿಯರ ಪರಿಚಯ ಮಾಡಿಕೊಡುತ್ತೇನೆ ಎಂದ ಅವರು ಈ ಪುಸ್ತಕವನ್ನು ನಮ್ಮ ಯುವಜನಾಂಗ ಹೆಚ್ಚು ಓದುವ ಮೂಲಕ ನಮ್ಮ ಹಿರಿಯರನ್ನು ನಮ್ಮ ಜೀನವದ ಆದರ್ಶವನ್ನಾಗಿ ಇಟ್ಟುಕೊಂಡು ಅವರ ಹಾದಿಯಲ್ಲಿ ನಡೆಯುವ ಮೂಲಕ ಬದುಕನ್ನು ರೂಪಿಸಿಕೊಳ್ಳಬೇಕಿದೆ ಎಂದರು.