ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ನವದೆಹಲಿ: ಕಾಂಗ್ರೆಸ್-ಜೆ.ಡಿ.ಎಸ್. ಮೈತ್ರಿ ಬಹುತೇಕ ಖಚಿತ - ಎರೆಡು ದಿನಗಳಲ್ಲಿ ಅಂತಿಮ ಪ್ರಕಟಣೆ

ನವದೆಹಲಿ: ಕಾಂಗ್ರೆಸ್-ಜೆ.ಡಿ.ಎಸ್. ಮೈತ್ರಿ ಬಹುತೇಕ ಖಚಿತ - ಎರೆಡು ದಿನಗಳಲ್ಲಿ ಅಂತಿಮ ಪ್ರಕಟಣೆ

Fri, 27 Nov 2009 09:04:00  Office Staff   S.O. News Service
ನವದೆಹಲಿ, ನ. 26: ರಾಜ್ಯ ವಿಧಾನಪರಿಷತ್ತಿನ 25 ಸ್ಥಾನಕ್ಕೆ ಸ್ಥಳೀ ಯ ಸಂಸ್ಥೆಗಳಿಂದ ನಡೆಯಲಿರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ನಡುವೆ ಸೀಟು ಹೊಂದಾಣಿಕೆ ಬಹುತೇಕ ಅಂತಿಮಗೊಂಡಿದೆ. 

ಎಂಟು ಸ್ಥಾನಗಳನ್ನು ಜಾತ್ಯತೀತ ದಳಕ್ಕೆ ಬಿಟ್ಟು ಕೊಡಲು ಕಾಂಗ್ರೆಸ್ ಪಕ್ಷ ಒಪ್ಪಿದ್ದು ಒಂದೆರಡು ದಿನಗಳ ಒಳಗಾಗಿ ಅಂತಿಮ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ. 
ಜಾತ್ಯತೀತ ಜನತಾದಳ ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್ ನೇತೃತ್ವದ ದೋಸ್ತಿ ಸರ್ಕಾರದಿಂದ ಹೊರಬಿದ್ದು ಬಿಜೆಪಿ ಸಖ್ಯ ಬೆಳೆಸಿ ಸರ್ಕಾರ ರಚಿಸಿದ ನಂತರ ಹಳಸಿದ್ದ ಕಾಂಗ್ರೆಸ್- ದಳ ಸಂಬಂಧ ಇದೀಗ ಮತ್ತೆ ಚಿಗುರೊಡೆಯುವ ಆರಂಭಿಕ ಸೂಚನೆ ಇದು. ಇಬ್ಬರು ಸದಸ್ಯರನ್ನು ಹೊಂದಿರುವ ಮೂರು- ನಾಲ್ಕು ಕ್ಷೇತ್ರಗಳು ಮತ್ತು ಏಕಸದಸ್ಯ ಕ್ಷೇತ್ರಗಳ ಪೈಕಿ ಮೂರು- ನಾಲ್ಕನ್ನು ಜಾತ್ಯತೀತ ದಳದ ಜೊತೆಗೆ ಹಂಚಿಕೊಳ್ಳುವ ಪ್ರಸ್ತಾವಕ್ಕೆ ಕಾಂಗ್ರೆಸ್ ವರಿಷ್ಠರು ಹಸಿರು ನಿಶಾನೆ ತೋರಿದ್ದಾರೆ. 
 
ಕಳೆದ ಕೆಲ ದಿನಗಳಿಂದ ಜಾತ್ಯತೀತ ಜನತಾದಳದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ವರಿಷ್ಠರಾದ ಆಸ್ಕರ್ ಫರ್ನಾಂಡಿಸ್ ಮತ್ತು ಗುಲಾಮ್‌ನಬಿ ಆಜಾದ್ ಜೊತೆಗೆ ಸೀಟು ಹೊಂದಾಣಿಕೆ ಕುರಿತು ಇಲ್ಲಿ ಮಾತುಕತೆ ನಡೆಸಿದ್ದರು. ಮೈಸೂರು, ಮಂಡ್ಯ, ಹಾಸನ ಹಾಗೂ ಬೆಂಗಳೂರು ಗ್ರಾಮಾಂತರ ನಿಶ್ಚಿತವಾಗಿ ಜಾತ್ಯತೀತ ದಳದ ಪಾಲಿಗೆ ಬರಲಿವೆ. ರಾಯಚೂರು, ಚಿತ್ರದುರ್ಗ, ಬೆಂಗಳೂರು ನಗರ ಹಾಗೂ ತುಮಕೂರಿನ ಮೇಲೆ ಜಾತ್ಯತೀತ ದಳದ ಕಣ್ಣಿದೆ. ತುಮಕೂರಿನ ಬದಲು ಕೋಲಾರವನ್ನು ಬಿಟ್ಟುಕೊಡುವುದಾಗಿ ಕಾಂಗ್ರೆಸ್ ಕಡೆಯಿಂದ ಚೌಕಾಶಿ ನಡೆದಿದೆ. ಹೀಗಾಗಿ ತುಮಕೂರು ಯಾವ ಪಕ್ಷದ ಪಾಲಿಗೆ ಒದಗಲಿದೆ ಎಂಬುದನ್ನು ನೋಡಬೇಕಿದೆ. 

‘ಹಾಲಿ’ಗಳಿಗೆ ವಿರೋಧ?: ಹುರಿಯಾಳುಗಳ ಆಯ್ಕೆ ಸಂಬಂಧ ರಾಜ್ಯ ಕಾಂಗ್ರೆಸ್ ಧುರೀಣರು ವರಿಷ್ಠರ ಸಮ್ಮುಖದಲ್ಲಿ ಗುರುವಾರ ಇಲ್ಲಿ ಎರಡನೆಯ ಸಭೆ ನಡೆಸಿದರು. ಕೆಲವು ಹಾಲಿ ಸದಸ್ಯರಿಗೆ ಮತ್ತೆ ಟಿಕೆಟ್ ನೀಡುವ ಕುರಿತು ಮಾಜಿ ಮುಖ್ಯಮಂತ್ರಿ ಧರಮ್‌ಸಿಂಗ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಂದ ತೀವ್ರ ವಿರೋಧ ವ್ಯಕ್ತವಾಯಿತು ಎನ್ನಲಾಗಿದೆ. ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ರಾಜ್ಯ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳುವ ವರಿಷ್ಠ ಗುಲಾಮ್‌ನಬಿ ಆಜಾದ್, ಆಸ್ಕರ್ ಫರ್ನಾಂಡಿಸ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ವಿ.ಎಸ್. ಉಗ್ರಪ್ಪ ಅವರು ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು.


ಸೌಜನ್ಯ: ಕನ್ನಡಪ್ರಭ  


Share: