ನವದೆಹಲಿ/ಕಾರವಾರ: ಕೈಗಾ ಅಣು ಸ್ಥಾವರದ ವಾಟರ್ ಕೂಲರ್‌ನಲ್ಲಿ ಟ್ರೀಶಿಯಂ ಮಿಶ್ರಣವಾದ ಘಟನೆಯಿಂದ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಇದೀಗ ಕೈಗಾ ಸೇರಿದಂತೆ ಎಲ್ಲ ಅಣು ಸ್ಥಾವರಗಳಿಗೆ ಇನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಕಣ್ಗಾವಲು ಸೇರಿದಂತೆ ಸೇನಾ ಪಡೆಯ ರಕ್ಷೆಯೂ ದೊರೆಯಲಿದೆ. ವರ್ಷದ ಹಿಂದೆಯೂ ಕೇವಲ ೪ ದಿನಕ್ಕಾಗಿ ರಕ್ಷಣೆಗಾಗಿ ಸೇನೆ ಕೈಗಾಕ್ಕೆ ಆಗಮಿಸಿತ್ತು.
ಇನ್ನೊಂದೆಡೆ, ಕೇಂದ್ರ ಗುಪ್ತಚರ ದಳ (ಐಬಿ) ತನಿಖೆ ಮುಂದುವರಿಸಿದೆ. ಇನ್ನೊಂದು ಬೆಳವಣಿಗೆಯಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಣು ತಪ್ಪಿಸಿ ಘಟನೆ ನಡೆದದ್ದು ಬೆಳಕಿಗೆ ಬಂದಿದೆ.
ಸೇನಾ ಭದ್ರತೆಯೂ ಲಭ್ಯ:ಕೈಗಾ ಸ್ಥಾವರದಲ್ಲಿ ನ.೨೬ರಂದು ನಡೆದ ಘಟನೆ ಬಗ್ಗೆ ಲೋಕಸಭೆಯಲ್ಲಿ ಮಂಗಳವಾರ ಪ್ರಸ್ತಾಪವಾಯಿತು. ಇದಲ್ಲದೆ, ದೇಶದ ಪರಮಾಣು ಸ್ಥಾವರಗಳ ಮೇಲೆ ಉಗ್ರರ ಕಣ್ಣು ಬಿದ್ದಿರುವ ಬಗ್ಗೆ ಕಳವಳ ವ್ಯಕ್ತವಾಯಿತು. ಈಗಲೂ ಉಗ್ರರ ಕಣ್ಣು ಅಣು ಸ್ಥಾವರದ ಮೇಲೆ ಬಿದ್ದಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಮುಲ್ಲಪಲ್ಲಿ ರಾಮಚಂದ್ರನ್ ಕಳವಳ ವ್ಯಕ್ತಪಡಿಸಿದರು.ಹೀಗಾಗಿ, ಸಿಐಎಸ್‌ಎಫ್‌ನೊಂದಿಗೆ ಸೇನಾ ರಕ್ಷಣೆಯೂ ಕೈಗಾ ಸೇರಿದಂತೆ ಎಲ್ಲ ಅಣು ಸ್ಥಾವರಗಳಿಗೆ ಒದಗಿಸಲಾಗಿದೆ ಎಂದರು.
ಇದಲ್ಲದೆ, ಅತ್ಯಂತ ಪ್ರಮುಖ ಎಂದು ಬಿಂಬಿತವಾಗಿರುವ ಅಣು ಸ್ಥಾವರಗಳಿಗೆ ಕಾಪ್ಟರ್ ಮೂಲಕವೂ ರಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಸಿಐಎಸ್‌ಎಫ್ ಜೊತೆಗೆ ಸೇನೆಯೂ ನೆರವು ನೀಡಲಿದೆ ಎಂದು ರಾಮಚಂದ್ರನ್ ವಿವರಿಸಿದರು.
ತನಿಖೆ ಚುರುಕು: ಈ ಮಧ್ಯೆ ಕೈಗಾದಲ್ಲಿ ಟ್ರೀಶಿಯಂ ಪತ್ತೆಯಾಗಿದ್ದ ಘಟನೆ ಬಗ್ಗೆ ಕೇಂದ್ರ ಗುಪ್ತಚರ ದಳ (ಐಬಿ) ತನಿಖೆ ಮುಂದುವರಿಸಿದೆ. ನ.೨೪ರಂದು ೧ನೇ ರಿಯಾಕ್ಟರ್‌ನ ನಿರ್ವಹಣಾ ಕಾಮಗಾರಿಯಲ್ಲಿದ್ದ ಸಿಬ್ಬಂದಿ, ಕಾರ್ಮಿಕರ ವಿಚಾರಣೆ ಮುಂದುವರಿದಿದೆ. ಅಚ್ಚರಿ ಬೆಳವಣಿಗೆಯಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಣಿಗೆ ಬೀಳದಂತೆ ಟ್ರೀಶಿಯಂ ಮಿಶ್ರಣ ಮಾಡಿದ್ದು ಬೆಳಕಿಗೆ ಬಂದಿದೆ. ನಿರ್ವಹಣೆಗಾಗಿ ರಿಯಾಕ್ಟರ್ ಸ್ಥಗಿತಗೊಳಿಸಿದಾಗ ಇವರು ಕಾಮಗಾರಿ ನಡೆಸಬೇಕಾಗುತ್ತದೆ. ಈ ವಿಕಿರಣ ಕೆಲಸಗಾರರೇ ಕೃತ್ಯ ಎಸಗಿರಬೇಕೆಂಬ ಶಂಕೆ ಗುಪ್ತಚರ ದಳದ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಮಾಹಿತಿ ಕೇಳಿದ ಪೊಲೀಸರು:ಈ ನಡುವೆ ಜಿಲ್ಲಾ ಪೊಲೀಸ್ ವರಿಷ್ಠ ರಮಣಗುಪ್ತ ಅಂದು ಕಾಮಗಾರಿಯಲ್ಲಿ ನಿರತರಾಗಿದ್ದ ಎಲ್ಲ ಸಿಬ್ಬಂದಿ ಹೆಸರು, ವಿಳಾಸ ಕೊಡಿ ಎಂದು ಕೈಗಾ ಅಧಿಕಾರಿಗಳನ್ನು ಕೇಳಿದ್ದಾರೆ.ಆದರೆ, ಪೊಲೀಸರಿಗೆ ತಾಂತ್ರಿಕ ಜ್ಞಾನ ಇಲ್ಲದೆ ಇರುವುದರಿಂದ ಕೈಗಾ ಅಧಿಕಾರಿಗಳು ನಡೆಸಿದ ತನಿಖೆ ವರದಿ ಆಧಾರದ ಮೇಲೆ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಇದುವರೆಗೆ ಯಾವುದೆ ಪೊಲೀಸ್ ಪ್ರಕರಣ ದಾಖಲಾಗಿಲ್ಲ. ಕೈಗಾ ಅಧಿಕಾರಿಗಳು ತಮಗೆ ಕೇವಲ ಮಾಹಿತಿಯನ್ನಷ್ಟೇ ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠರು ತಿಳಿಸಿದ್ದಾರೆ.
ಪ್ರತ್ಯೇಕ ಕೆಲಸಗಾರರು
ರಿಯಾಕ್ಟರ್ ನಿರ್ವಹಣೆ ಮಾಡುವ ಕೆಲಸಗಾರರು ಪ್ರತ್ಯೇಕವಾಗಿರುತ್ತಾರೆ. ಅವರನ್ನು ‘ವಿಕಿರಣ ಕೆಲಸಗಾರರು’ (ರೇಡಿಯೇಶನ್ ವರ್ಕರ್ಸ್)ಎಂದೇ ಕರೆಯುತ್ತಾರೆ. ಇವರಿಗೆ ಉಳಿದ ಕೆಲಸಗಾರರಿಗಿಂತ ಹೆಚ್ಚಿನ ಸೌಲಭ್ಯ, ಸಂಬಳ ನೀಡಲಾಗುತ್ತದೆ. ವಿಕಿರಣ ಕೆಲಸಗಾರರಿಗೆ ಟ್ರೀಶಿಯಂ ನೀರಿನಲ್ಲಿ ಮಿಶ್ರಣವಾದರೆ ಏನಾಗುತ್ತದೆ ಎಂಬ ಬಗ್ಗೆ ಅರಿವು ಇರುತ್ತದೆ. ಆದರೆ ವಾಟರ್ ಕೂಲರ್‌ನಲ್ಲಿ ಅಲ್ಪಪ್ರಮಾಣದ ಟ್ರೀಶಿಯಂ ಮಿಶ್ರಣ ಮಾಡಿರುವುದರಿಂದ ಸದ್ಯಕ್ಕೆ ಜೀವಹಾನಿ ಆಗಿಲ್ಲ. ಇದನ್ನು ಮಿಶ್ರಣ ಮಾಡಿದವರು ಯಾರು? ಯಾಕೆ ಮಾಡಲಾಗಿತ್ತು? ಎನ್ನುವುದು ಸದ್ಯ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.
ಸೌಜನ್ಯ: ಕನ್ನಡಪ್ರಭ