ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆಯ ಅಧಿಕಾರ ಸೂತ್ರ ಬಿಜೆಪಿಯ ಕೈ ಸೇರದಂತೆ ನೋಡಿಕೊಳ್ಳಲು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಯಶಸ್ವಿಯಾಗುತ್ತಾರೆಯೇ?

ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆಯ ಅಧಿಕಾರ ಸೂತ್ರ ಬಿಜೆಪಿಯ ಕೈ ಸೇರದಂತೆ ನೋಡಿಕೊಳ್ಳಲು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಯಶಸ್ವಿಯಾಗುತ್ತಾರೆಯೇ?

Sun, 18 Apr 2010 16:06:00  Office Staff   S.O. News Service

ಬೆಂಗಳೂರು,ಏ,೧೮-ಹಾಗೆಂಬ ಪ್ರಶ್ನೆಗಳು ಇದೀಗ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.ಏಪ್ರಿಲ್ ೨೨ ರಂದು ನಡೆಯಲಿರುವ ಮೈಸೂರು ಮಹಾನಗರ ಪಾಲಿಕೆಯ ಮೇಯರ್,ಉಪಮೇಯರ್ ಚುನಾವಣೆಯ ಬೆನ್ನಲ್ಲೇ ಈ ಚರ್ಚೆ ನಡೆಯುತ್ತಿದೆ.

 

 

ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ೩೧ ಸದಸ್ಯರ ಬೆಂಬಲವನ್ನು ಹೊಂದಿದ್ದು ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ೨೮ ಹಾಗೂ ಜೆಡಿ‌ಎಸ್ ೧೯ ಮಂದಿ ಸದಸ್ಯ ಬಲವನ್ನು ಹೊಂದಿದೆ.

 

ನ್ಯಾಯಾಲಯದ ಆದೇಶದ ಪ್ರಕಾರ ಚುನಾವಣಾ ಪ್ರಕ್ರಿಯೆ ಸ್ಥಗಿತವಾದ ಹಂತದಲ್ಲಿದ್ದಂತೆಯೇ ಮುಂದುವರಿಯಬೇಕಿದ್ದು ಈಗಿನ ಸನ್ನಿವೇಶದಲ್ಲಿ ಕಾಂಗ್ರೆಸ್-ಜೆಡಿ‌ಎಸ್ ಪರಸ್ಪರ ಒಂದಾದರೆ ಬಿಜೆಪಿಯ ಕೈಗೆ ಅಧಿಕಾರ ಸೂತ್ರ ಹೋಗದಂತೆ ನೋಡಿಕೊಳ್ಳುವುದು ಸುಲಭ.

 

 

ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿ‌ಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಅದರನುಸಾರವೇ ಚುನಾವಣೆ ನಡೆದರೆ ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಿತ.

 

ಈಗಾಗಲೇ ಬಿಬಿ‌ಎಂಪಿ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್‌ನ ಸ್ಥೈರ್ಯವನ್ನೇ ಕುಗ್ಗಿಸಿರುವ ಬಿಜೆಪಿ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರ ಸೂತ್ರವನ್ನು ಹಿಡಿಯುವಲ್ಲಿ ಯಶಸ್ವಿಯಾದರೆ ಬಿಜೆಪಿ ವಿರೋಧಿ ಶಕ್ತಿಗಳಿಗೆ ದೊಡ್ಡ ಮಟ್ಟದ ಆಘಾತವಾಗಲಿದೆ.

 

 

ಇಂತಹ ಆಘಾತವಾಗದಂತೆ ನೋಡಿಕೊಂಡು,ಅದೇ ಕಾಲಕ್ಕೆ ಕಾಂಗ್ರೆಸ್‌ನ ಸ್ಥೈರ್ಯ ಹೆಚ್ಚಾಗುವಂತೆ ಮಾಡುವ ಗುರುತರ ಜವಾಬ್ದಾರಿ ಸಿದ್ಧರಾಮಯ್ಯ ಅವರ ಮೇಲಿದ್ದು ಇದಕ್ಕಾಗಿ ಅವರು ರೂಪಿಸುವ ರಣತಂತ್ರ ಜಾತ್ಯಾತೀತ ಶಕ್ತಿಗಳನ್ನು ಒಂದು ಮಾಡುವಲ್ಲೂ ಯಶಸ್ವಿಯಾಗಲಿ ಎಂಬ ಅಭಿಪ್ರಾಯ ಬಿಜೆಪಿ ವಿರೋಧಿ ಪಾಳೆಯದಿಂದ ಕೇಳಿ ಬರುತ್ತಿದೆ.

 

ವೈಯಕ್ತಿಕವಾಗಿ ಸಿದ್ಧರಾಮಯ್ಯ ಅವರಿಗೆ ಜಾತ್ಯಾತೀತ ಜನತಾದಳದ ಜತೆಗಿನ ಸಂಬಂಧ ಇಷ್ಟವಿಲ್ಲದಿದ್ದರೂ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರ ಸೂತ್ರ ಕೋಮುವಾದಿ ಬಿಜೆಪಿಯ ಕೈಗೆ ಹೋಗದಂತೆ ನೋಡಿಕೊಳ್ಳಲು ಜೆಡಿ‌ಎಸ್ ಜತೆ ತತ್ಕಾಲದ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಬೇಕು ಎಂಬ ಅಭಿಪ್ರಾಯ ರಾಜ್ಯ ಕಾಂಗ್ರೆಸ್‌ನ ಬಹುತೇಕ ನಾಯಕರಲ್ಲಿದೆ.

 

ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್-ಜೆಡಿ‌ಎಸ್ ಮಧ್ಯೆ ಕಚ್ಚಾಟ ನಡೆಯುತ್ತಿದ್ದರೂ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಹಲವು ಕಡೆ ಉಭಯ ಪಕ್ಷಗಳು ಬಿಜೆಪಿ ವಿರುದ್ಧ ಒಂದಾಗಿರುವ ಉದಾಹರಣೆ ಇರುವಾಗ ಮೈಸೂರಿನಲ್ಲೂ ಇಂತಹ ತಾತ್ಕಾಲಿಕ ಮೈತ್ರಿ ಏರ್ಪಟ್ಟರೆ ತಪ್ಪೇನಲ್ಲ.

 

 

ಹೀಗೆ ಸಿದ್ಧರಾಮಯ್ಯ ತಮ್ಮ ನಿಲುವನ್ನು ಕೊಂಚ ಮಟ್ಟಗೆ ಸಡಿಲಗೊಳಿಸಿ ಕೋಮುವಾದಿ ಬಿಜೆಪಿಯನ್ನು ಮೈಸೂರು ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯದಂತೆ ಮಾಡಲಿ ಎಂಬುದು ಕಾಂಗ್ರೆಸ್‌ನ ಬಹುತೇಕ ನಾಯಕರ ಅಭಿಪ್ರಾಯ.

 

 

ಎಲ್ಲದರಷ್ಟೇ ಮುಖ್ಯವಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿಪಕ್ಷ ನಾಯಕರಾಗಿ ಸಿದ್ಧರಾಮಯ್ಯ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರೂ,ಅವರ ವಿರುದ್ಧ ನಿರಂತರವಾಗಿ ಪಿತೂರಿ ನಡೆಸುತ್ತಿರುವ ಒಂದು ಗುಂಪು ಕಾಂಗ್ರೆಸ್‌ನಲ್ಲೇ ಸಕ್ರಿಯವಾಗಿ ಇದೆ.

 

 

ಈ ಗುಂಪು ಸಾಧ್ಯವಿದ್ದಾಗಲೆಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಸಿದ್ಧರಾಮಯ್ಯ ಉತ್ತಮ ಭಾಂಧವ್ಯ ಹೊಂದಿದ್ದಾರೆ ಎಂದು ಅಪಪ್ರಚಾರ ಮಾಡುತ್ತಲೇ ಇದೆ.

 

ಸಿದ್ಧರಾಮಯ್ಯ ಅವರ ವಿರುದ್ಧ ಇಂತಹ ಅಪಪ್ರಚಾರ ನಡೆಸುತ್ತಿರುವ ಗುಂಪಿಗೆ ತಕ್ಕ ಉತ್ತರ ನೀಡಬೇಕೆಂದರೆ ಸಿದ್ದರಾಮಯ್ಯ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರ ಸೂತ್ರವನ್ನು ಬಿಜೆಪಿ ಹಿಡಿಯದಂತೆ ನೋಡಿಕೊಳ್ಳಬೇಕು ಎಂಬುದು ಈ ನಾಯಕರ ವಾದ.

 

 

 


Share: