ಮಂಗಳೂರು, ಎ.25: ಉದ್ಯಮ ಕ್ಷೇತ್ರದಲ್ಲಿ ಆರ್ಥಿಕ ಚಟುವಟಿಕೆಗಳ ಮೂಲಕ ಭೌತಿಕ ಅಭಿವದ್ಧಿ ನಡೆಯುತ್ತದೆ. ಅಭಿವದ್ಧಿಯೊಂದಿಗೆ ಮಾನಸಿಕ ಶಾಂತಿ ಜನರಿಗೆ ಲಭಿಸಿದಾಗ ಆ ಕೇಂದ್ರ ಶಾಂತಿಯ ತಾಣವಾಗುತ್ತದೆ. ಸಿಟಿ ಸೆಂಟರ್ ಮಾಲ್ ಅಭಿವದ್ಧಿ, ಶಾಂತಿಯ ಕೇಂದ್ರವಾಗಲಿ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವೌಂಟ್ ಅಬು ವಿಶ್ವಕೇಂದ್ರದ ಮುಖ್ಯಸ್ಥೆ ದಾದಿ ಜಾನಕೀಜಿ ಶುಭ ಸಂದೇಶ ನೀಡಿದ್ದಾರೆ.
ನಗರದ ಕೆ.ಎಸ್.ರಾವ್. ರಸ್ತೆಯಲ್ಲಿ ನಿರ್ಮಾಣಗೊಂಡ ಸಿಟಿ ಸೆಂಟರ್‌ಮಾಲ್ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜೆ. ಕಷ್ಣಪಾಲೆಮಾರ್ ಮಾತನಾಡಿ, ಜಿಲ್ಲೆಯ ಅಭಿವದ್ಧಿಗೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಯಾಗಬೇಕಾಗಿದೆ. ಮೂಲ ಭೂತ ಸೌಕರ್ಯಗಳ ಅಭಿವದ್ಧಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಮುತುವರ್ಜಿ ವಹಿಸುತ್ತಿದೆ. ಮುಂದಿನ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಬಹತ್ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಕಟ್ಟಡ ನಿರ್ಮಾಣದಲ್ಲಿ ಕಾನೂನು ಪರಿಪಾಲನೆ ಅಗತ್ಯ. ಈ ನಿಟ್ಟಿನಲ್ಲಿ ಕಟ್ಟಡ ಮಾಲಕರು ಸೂಕ್ತ ದಾರಿಯಲ್ಲಿ ಸಾಗಬೇಕೆಂದು ಸಚಿವ ಪಾಲೆಮಾರ್ ಕರೆ ನೀಡಿದರು.
ಮಂಗಳೂರಿನಲ್ಲಿ ಮೊಹ್ತಿಶಾಮ್ ಸಂಸ್ಥೆಯ ಮೂಲಕ ನಿರ್ಮಾಣಗೊಂಡ ರಾಜ್ಯದ ಎರಡನೆ ಅತ್ಯಂತ ದೊಡ್ಡ ಮಾಲ್ ನಿರ್ಮಾಣಗೊಂಡಿರುವುದು ಹೆಮ್ಮೆಯ ಪ್ರತೀಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ. ಕಷ್ಣಪಾಲೆಮಾರ್ ಶ್ಲಾಘಿಸಿದರು.‘ಸಿಟಿ ಸೆಂಟರ್ ಮಾಲ್ ನಂತಹ ಕಟ್ಟಡ ಗಲ್ಫ್ ರಾಷ್ಟ್ರಗಳಲ್ಲಿ ನೋಡಿ ಬಂದಿದ್ದೆ. ಇದೀಗ ಮಂಗಳೂರಿನಲ್ಲಿ ಅದೇ ರೀತಿಯ ಕಟ್ಟಡ ನಿರ್ಮಾಣಗೊಂಡಿರುವುದು ಸಂತಸವಾಗಿದೆ. ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಪ್ಲಾಟ್‌ಗಳನ್ನು ನಿರ್ಮಿಸಿರುವ ಮೊಹ್ತಿಶಾಮ್ ಸಂಸ್ಥೆ ಇದೀಗ ಬಹತ್ ಮಾಲ್ ನಿರ್ಮಿಸಿ ಇನ್ನೊಂದು ಸಾಧನೆ ಮಾಡಿದೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇರುವ ಲೋಪದೋಷಗಳನ್ನು ಸರಿಪಡಿಸಲು ಅಕ್ರಮ ಸಕ್ರಮ ಯೋಜನೆಗಳನ್ನು ಜಾರಿ ಮಾಡಲಾಗಿದೆ. ವಾಣಿಜ್ಯ ಸಂಕೀರ್ಣದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಲಕ್ಷ ಚದರ ಅಡಿಯವರೆಗೆ ವಿನಾಯಿತಿ ನೀಡಲಾಗಿದೆ. ಹಲವು ನಿಯಮಾವಳಿಗಳನ್ನು ಸರಳಗೊಳಿಸಲಾ ಗಿದೆ ಎಂದು ಪಾಲೆಮಾರ್ ತಿಳಿಸಿದರು.
ಪ್ರಾಸ್ತಾವಿಕ ಮಾತನಾಡಿದ ಮೊಹ್ತಿಶಾಮ್ ಕಾಂಪ್ಲೆಕ್ಸ್ ಲಿ. ಸಂಸ್ಥೆಯ ಆಡಳಿತ ನಿರ್ದೇಶಕ ಎಸ್.ಎಮ್.ಅರ್ಷದ್, ರಾಜ್ಯದ ಎರಡನೆ ಅತಿ ದೊಡ್ಡ ಮಾಲ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಿಟಿ ಸೆಂಟರ್ ಮಾಲ್ ಮೇ ಅಂತ್ಯದೊಳಗೆ ಶೇ.60ರಷ್ಟು ಮಳಿಗೆಗಳು ಆರಂಭಗೊಂಡು ಶೀಘ್ರದಲ್ಲೇ ಜಗತ್ತಿನ ನಾಲ್ಕನೆ ಮಲ್ಟಿಪ್ಲೆಕ್ಸ್ ಆರಂಭಗೊಳ್ಳಲಿದೆ. 2,700 ಜನರಿಗೆ ನೇರ ಹಾಗೂ 11 ಸಾವಿರ ಜನರಿಗೆ ಮಾಲ್ ಮೂಲಕ ಪರೋಕ್ಷ ಉದ್ಯೋಗವಕಾಶ ಲಭಿಸಿದೆ. ಐದು ಹಂತದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಇರುವ ಮಾಲ್‌ನಲ್ಲಿ ನಿರಂತರ ವಿದ್ಯುತ್ ಪೂರೈಕೆ, ಅಗ್ನಿಶಾಮಕ ವ್ಯವಸ್ಥೆ ಹಾಗೂ ಅತ್ಯಾಧುನಿಕ ಸೌಲಭ್ಯ ಒದಗಿಸಲಾಗಿದೆ. ದೇಶ ವಿದೇಶಗಳ ಖ್ಯಾತ ಬ್ರಾಂಡ್ ಸಂಸ್ಥೆಗಳ ಮಳಿಗೆಗಳು ಮಾಲ್‌ನಲ್ಲಿ ಗ್ರಾಹಕರಿಗೆ ಸೇವೆ ನೀಡಲಿದೆ ಎಂದು ತಿಳಿಸಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಬ್ರಹ್ಮಕುಮಾರಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಬಿ.ಕೆ. ನಿರ್ವಾಯರ್, ಸಂಸದರಾದ ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಬಿ.ಎ. ಮೊದಿನ್, ಶಾಸಕರಾದ ಅಭಯಚಂದ್ರ ಜೈನ್, ಯು.ಟಿ. ಖಾದರ್, ತುಂಬೆ ಬಿ.ಎ. ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ಅಹ್ಮದ್ ಹಾಜಿ ಮುಹಿಯ್ಯುದ್ದೀನ್, ಮೇಯರ್ ರಜನಿ ದುಗ್ಗಣ್ಣ, ಉಪಮೇಯರ್ ರಾಜೇಂದ್ರ ಕುಮಾರ್, ಮನಪಾ ನಗರ ಯೋಜನೆ ಮತ್ತು ಅಭಿವದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮಾಲ್ ನಿರ್ಮಾಣದಲ್ಲಿ ಸಹಕಾರ ನೀಡಿದ ಭೂಮಿಯ ಮಾಲಕರಾದ ಉಷಾ ಕೆ. ಶೆಟ್ಟಿ, ಆರ್ಕಿಟೆಕ್ಟ್ ಧರ್ಮರಾಜ್, ಅನಿಲ್ ಪಂಡಿತ್, ನಾರಾಯಣ ಪಂಡಿತ್, ಜೆಸಯೆಲ್ ಮೆಹ್ತಾ, ಕಷ್ಣಮೂರ್ತಿ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಮ್.ಸೌದ್ ವಂದಿಸಿದರು.