ಭಟ್ಕಳ, ಡಿಸೆಂಬರ್ 15: ಕಳೆದ ಒಂದೂವರೆ ವರ್ಷದ ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯ ಹಣಕಾಸು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ನೌಕರರ ಸಂಬಳಕ್ಕಾಗಿ ರಿಸರ್ವ ಬ್ಯಾಂಕಿನಿಂದ ಕೋಟ್ಯಾಂತರ ರೂಪಾಯಿ ಸಾಲ ಪಡೆಯಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ಅಧ್ಯಕ್ಷ ಆರ್.ವಿ.ದೇಶಪಾಂಡೆ ಆರೋಪಿಸಿದ್ದಾರೆ.
ಅವರು ಉತ್ತರಕನ್ನಡ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ ಪರ ಇಲ್ಲಿಯ ರಬಿತಾ ಹಾಲಿನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಬಿಜೆಪಿ ಆಡಳಿತಕ್ಕೆ ಬಂದಾಗಿನಿಂದ ಕೋಮುಗಲಭೆಗಳು ತಾಂಡವವಾಡುತ್ತಿವೆ. ಅಮಾಯಕರು, ಪೂಜಾಸ್ಥಳಗಳ ಮೇಲಿನ ದಾಳಿಗಳು ಮುಂದುವರೆದಿವೆ ಎಂದ ಅವರು ರಾಜ್ಯದೆಲ್ಲೆಡೆ ಭಯದ ವಾತಾವರಣ ನಿರ್ಮಾಣವಾಗಿವೆ ಎಂದು ಟೀಕಿಸಿದರು. ಅತಿವೃಷ್ಟಿ, ಅನಾವೃಷ್ಟಿಯ ಸಮಯದಲ್ಲಿ ಸರಕಾರ ನಡೆದುಕೊಂಡ ರೀತಿ ನಾಚಿಕೆಗೇಡಿನದ್ದು ಎಂದ ಅಧ್ಯಕ್ಷರು ನ್ಯಾಯದ ಬೇಡಿಕೆಗಾಗಿ ಧರಣಿ ನಿರತ ರೈತರ ಮೇಲೆ ಲಾಠಿ ಚಾರ್ಜ ನಡೆಸಲಾಗಿದೆ. ರೈತರ ಮೇಲೆ ಆಣೆ ಮಾಡಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪನವರೇ ರೈತ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯ ಆಡಳಿತ ಪಂಚಾಯತ ವ್ಯವಸ್ಥೆಗೆ ಗಂಡಾಂತರ ಎಂದ ಅವರು ಸಾಮಾಜಿಕ ನ್ಯಾಯದ ವಿರೋಧಿಯಾಗಿ ಆ ಪಕ್ಷದ ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್ ಮೀಸಲಾತಿ ವಿರೋಧಿಸಿ ಸುಪ್ರಿಮ್ ಕೋರ್ಟನಲ್ಲಿ ವಾದ ಹೂಡಿದ್ದಾರೆ. ಇದು ಬಿಜೆಪಿ ಬಂಡವಾಳವನ್ನು ಬಯಲು ಮಾಡಿದೆ ಎಂದು ವಿವರಿಸಿದರು. ಈ ಹಿಂದೆ ಕಾಂಗ್ರೆಸ್ ಆಡಳಿತ ಜಾರಿಗೆ ತಂದ ಆಶ್ರಯ, ಇಂದಿರಾ ಆವಾಜ್ ಮನೆ ಹಂಚಿಕೆ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಈ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಜರಿದ ದೇಶಪಾಂಡೆ, ಅರಣ್ಯ ಸಂಪತ್ತನ್ನು ಕೊಳ್ಳೆ ಹೊಡೆದ ರೆಡ್ಡಿ ಸಹೋದರರೇ ರಾಜ್ಯ ಸರಕಾರವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಭಟ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಡಿ.ನಾಯ್ಕ, ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಾಂತಾರಾಮ ಹೆಗಡೆ, ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಪುಷ್ಪಾ ನಾಯ್ಕ, ಸದಸ್ಯರಾದ ದಾಮೋದರ ಗರ್ಡೀಕರ, ಭೀಮಣ್ಣ ನಾಯ್ಕ, ಮಂಕಾಳು ವೈದ್ಯ, ಪಕ್ಷದ ಮುಖಂಡರುಗಳಾದ ಸಾಯಿ ಗಾಂವಕರ್, ಷಣ್ಮುಗ ಗೌಡ, ಎಮ್.ಎಸ್.ನಾಯ್ಕ, ರಾಮಾ ಮೊಗೇರ, ಎಲ್.ಎಸ್.ನಾಯ್ಕ, ವನಿತಾ ನಾಯ್ಕ, ಭಾಗ್ವತ, ಕೆಪಿಸಿಸಿ ಸದಸ್ಯ ಗಜಾನನ ಆಚಾರ್ಯ, ಭಟ್ಕಳ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶೀಮ್‌ಜಿ, ಬದ್ರಲ್ಲಾ ಹಸನ್, ಅಜೀಮ್ ಅಂಬಾರಿ, ಜ್ಯಾತ್ಯಾತೀತ ಜನತಾದಳದ ತಾಲೂಕಾಧ್ಯಕ್ಷ ಎಮ್.ಡಿ.ನಾಯ್ಕ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಬ್ರಾಯ ನಾಯ್ಕ ಎಲ್ಲರನ್ನೂ ಸ್ವಾಗತಿಸಿದರು. ಹಿರಿಯ ಕಾಂಗ್ರೆಸ್ ಧುರೀಣ ರಾಜು ಹೆಬ್ಬಾರ ವಂದಿಸಿದರು.
ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಬರುವುದರೊಳಗಾಗಿ ಬಿಜೆಪಿ ಸರಕಾರ ಪತನಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಭವಿಷ್ಯ ನುಡಿದಿದ್ದಾರೆ.
ಅವರು ಚುನಾವಣಾ ಪ್ರಚಾರಾರ್ಥ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಿನ ಮಧ್ಯೆ ಮುಂದಿನ ರಾಜಕೀಯ ಚಿತ್ರಣದ ಸಾಧ್ಯತೆಯನ್ನು ಹೊರಗೆಡುಹಿದರು. ಸರಕಾರ ಪತನಕ್ಕೆ ಕಾಂಗ್ರೆಸ್ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು ಬಿಜೆಪಿ ರಾಷ್ಟ್ರ ಮಟ್ಟದಲ್ಲಿಯೇ ಸೂಕ್ತ ನಾಯಕತ್ವದ ಕೊರತೆಯನ್ನು ಅನುಭವಿಸುತ್ತಿದೆ. ಇಲ್ಲಿಯ ರೆಡ್ಡಿಗಳು ಸರಕಾರವನ್ನು ಅಲುಗಾಡಿಸುವ ತಂತ್ರಗಾರಿಕೆಯ ಫಲವಾಗಿ ಭ್ರಷ್ಟ ಅಧಿಕಾರಿಗಳು ವರ್ಗಾವಣೆಗೊಂಡ ಇಪ್ಪತ್ನಾಲ್ಕು ಗಂಟೆಯೊಳಗಾಗಿ ತಾವಿದ್ದ ಜಾಗಕ್ಕೆ ವಾಪಸ್ಸಾಗುತ್ತಿದ್ದಾರೆ. ಒಂದು ಕಡೆ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರೆ ಇನ್ನೊಂದೆಡೆ ಆ ಪಕ್ಷದ ಶಾಸಕರು ರೆಸಾರ್ಟನಲ್ಲಿ ಕುಳಿತು ಮುಖ್ಯಮಂತ್ರಿಗಳನ್ನು ಕೆಳಗಿಳಿಸುವ ಸಮಾಲೋಚನೆಯಲ್ಲಿ ತೊಡಗಿದ್ದಾರೆ ಎಂದು ಟೀಕಾ ಪ್ರಹಾರ ಗೈದರು. ಜೆಡಿಎಸ್‌ನೊಂದಿಗಿನ ಮೈತ್ರಿಯನ್ನು ಚುನಾವಣೆಗಷ್ಟೇ ಸೀಮಿತಗೊಳಿಸಬಾರದು ಎಂದ ಅವರು ಜ್ಯಾತ್ಯಾತೀತ ವ್ಯವಸ್ಥೆಯಲ್ಲಿ ವಿಶ್ವಾಸವಿರಿಸುವ ಜನರು ವಿಭಜನೆ ಹೊಂದಬಾರದು ಎಂಬ ಕಾರಣದಿಂದ ಈ ಕ್ರಮಕ್ಕೆ ವರಿಷ್ಠರು ಮುಂದಾಗಿದ್ದಾರೆ ಎಂದು ವಿಶ್ಲೇಷಿಸಿದರು.
ವರದಿ: ಎಮ್ಮಾರ್ ಮಾನ್ವಿ, ಭಟ್ಕಳ