ಭಟ್ಕಳ: ತಿಮ್ಮಪ್ಪ ನಾಯ್ಕ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿ ಮೇ. ೨ ರಂದು ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಸೇನೆ ತಿಳಿಸಿದೆ.
ಈ ಕುರಿತು ನಿನ್ನೆ ಸಂಜೆ ನಗರದಲ್ಲಿ ಕರೆಯಲಾದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ಮುಖಂಡ ಗಿರೀಶ ಶೆಟ್ಟಿ ಬಿ ಜೆ ಪಿ ಮುಖಂಡರಾಗಿದ್ದ ತಿಮ್ಮಪ್ಪ ನಾಯ್ಕರು ಹಂತಕರ ಗುಂಡಿಗೆ ಬಲಿಯಾಗಿ ಆರು ವರ್ಷ ಸಂದರೂ ಸಹ ಇನ್ನೂ ಕೂಡ ಕೊಲೆಗಡುಕರನ್ನು ಹಿಡಿಯಲು ಸಾಧ್ಯವಾಗಿಲ್ಲ. ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಹಂತಕರನ್ನು ಹಿಡಿಯುವಂತೆ ಪದೇ ಪದೇ ಪ್ರತಿಭಟನೆ ಮಾಡುತ್ತಿದ್ದ ಬಿ ಜೆ ಪಿಯೇ ಇದೀಗ ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಚುನಾವಣೆಯಲ್ಲಿ ಚಿತ್ತರಂಜನ್, ತಿಮ್ಮಪ್ಪ ನಾಯ್ಕರ ಪೋಟೋ ಇಟ್ಟುಕೊಂಡು ಗೆದ್ದು ಶಾಸಕರಾಗಿ, ಮಂತ್ರಿಯೂ ಆದವರು ಇದೀಗ ಪ್ರಕರಣದ ಕುರಿತು ತುಟಿಬಿಚ್ಚುತ್ತಿಲ್ಲ. ಇವರು ಮಾತನಾಡಬೇಕಾದರೆ ಮತ್ತೊಂದು ಚುನಾವಣೆ ಸಮೀಪಿಸಬೇಕೇ ಎಂದು ಪ್ರಶ್ನಿಸಿದ ಅವರು ಪ್ರಕರಣದ ಬಗ್ಗೆ ಸ್ಥಳೀಯ ಮುಖಂಡರೂ ಸಹ ತುಟಿಬಿಚ್ಚದಿರುವುದು ವಿಪರ್ಯಾಸ ಎಂದರು. ಭಟ್ಕಳದ ಜನರು ಬಿ ಜೆ ಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಚಿತ್ತರಂಜನ್ ಹಾಗೂ ತಿಮ್ಮಪ್ಪ ನಾಯ್ಕ ಪ್ರಕರಣಗಳು ಇತ್ಯರ್ಥವಾಗಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅಧಿಕಾರಕ್ಕೇರಿದ ಬಿ ಜೆ ಪಿ ಈ ಬಗ್ಗೆ ಏನೂ ಕ್ರಮ ಕೈಗೊಳ್ಳದೇ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಅಧಿಕಾರದ ಅಮಲಿನಲ್ಲಿರುವ ಬಿ ಜೆ ಪಿಗೆ ತಿಮ್ಮಪ್ಪ ನಾಯ್ಕರ ಕೊಲೆ ಪ್ರಕರಣದ ಬಗ್ಗೆ ನೆನಪು ಹೋದಂತಿದೆ. ಪ್ರಕರಣದ ಬಗ್ಗೆ ಬಿ ಜೆ ಪಿ ಮುಖಂಡರಿಗೆ ನೆನಪು ಹೋಗಿರಬಹುದೇ ವಿನ: ನಮಗೇ ನೆನಪು ಹೋಗಿಲ್ಲ. ತಿಮ್ಮಪ್ಪ ನಾಯ್ಕರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂಬ ಉದ್ದೇಶದಿಂದ ಶ್ರೀರಾಮ ಸೇನೆ ಮೇ. ೨ ರಂದು ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸಹಾಯಕ ಕಮೀಷನರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದೆ. ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆಯ ಉತ್ತರ ಕನ್ನಡ ಜಿಲ್ಲೆ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಂಚಾಲಕರು ಸೇರಿದಂತೆ ಅನೇಕ ಹಿರಿಯರು ಪಾಲ್ಗೊಳ್ಳಲಿದ್ದಾರೆ. ಇದು ಪಕ್ಷಾತೀತವಾದ ಹೋರಾಟವಾಗಿದ್ದು, ಹಿಂದೂ ಸಂಘಟನೆಗಳು, ಸಾರ್ವಜನಿಕರು ಹಾಗೂ ತಿಮ್ಮಪ್ಪ ನಾಯ್ಕ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸಬೇಕಿದೆ. ಸರಕಾರದ ಮೇಲೆ ಹೆಚ್ಚಿನ ಒತ್ತಡ ತರಲು ಇನ್ನು ಮುಂದೆ ಪ್ರತಿ ತಿಂಗಳು ೨ ನೇ ತಾರೀಖಿನಂದು ತಿಮ್ಮಪ್ಪ ನಾಯ್ಕ, ಚಿತ್ತರಂಜನ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ, ಭಟ್ಕಳ ಗಲಭೆ ಹಾಗೂ ಚಿತ್ತರಂಜನ್ ಹತ್ಯಾ ಪ್ರಕರಣದ ತನಿಖೆಗೆಂದು ರಚಿಸಲಾದ ನ್ಯಾ.ಮೂ.ಜಗನ್ನಾಥ ಶೆಟ್ಟಿ ಹಾಗೂ ರಾಮಚಂದ್ರಯ್ಯ ಆಯೋಗದ ವರದಿಗಳನ್ನು ಮಂಡನೆ ಮಾಡುವಂತೆ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಆಯೋಗದ ವರದಿಗಳು ಮಂಡನೆಯಾಗುವ ವರೆಗೆ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವ ತನಕ ಶ್ರೀರಾಮ ಸೇನೆ ಹೋರಾಟವನ್ನು ಮುಂದುವರಿಸುತ್ತದೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ತಿಮ್ಮಪ್ಪ ನಾಯ್ಕ ಪುತ್ರ ಸುರೇಶ ನಾಯ್ಕ, ಶಂಕರ ನಾಯ್ಕ, ಶಂಕರ ಮೊಗೇರ ಮುಂತಾದವರು ಉಪಸ್ಥಿತರಿದ್ದರು.