ಬೆಂಗಳೂರು,ಏ,೨೭:ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಮೇ ೩೦ ರಂದು ಎರಡು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಲಾಖೆಗಳಲ್ಲಿ ಆಗಿರುವ ಸಾಧನೆಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಸಚಿವರಿಗೆ ಆದೇಶ ನೀಡಿದ್ದಾರೆ.
ಈ ಕುರಿತು ಎಲ್ಲಾ ಸಚಿವರಿಗೂ ಪತ್ರ ಬರೆದಿರುವ ಅವರು, ಎರಡನೇ ವರ್ಷದ ಸಾಧನಾ ಸಮಾವೇಶವನ್ನು ಅದ್ದೂರಿಯಾಗಿ ನಡೆಸುವ ಉದ್ದೇಶದಿಂದ ಇಲಾಖೆಗಳಲ್ಲಿ ಆಗಿರುವ ಸಾಧನೆ, ಭವಿಷ್ಯದಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮಗಳ ಕುರಿತು ವಿವರ ನೀಡುವಂತೆ ಸೂಚಿಸಿದ್ದಾರೆ.
ಪ್ರಸ್ತುತ ಬಿಜೆಪಿ ಸರ್ಕಾರ ಹಲವು ಎಡರು ತೊಡರುಗಳನ್ನು ಎದುರಿಸಿ ಸಮಾಧಾನ ತರುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಲೋಕಸಭೆ, ಬಿಬಿಎಂಪಿ, ಸಹಕಾರಿ ರಂಗದ ಚುನಾವಣೆಯಲ್ಲಿ ಇದು ಸಾಬೀತಾಗಿದೆ.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜನಕಲ್ಯಾಣ ಯೋಜನೆಗಳಲ್ಲದೇ ದೀರ್ಘಕಾಲಕ್ಕೆ ಪರಿಣಾಮ ಬೀರಬಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ. ಇವು ಸಾಮಾನ್ಯ ಜನರಿಗೆ ನೆರವಾಗುವ ಜೊತೆಗೆ ಆಡಳಿತದಲ್ಲಿ ಗುಣಾತ್ಮಕ ಬದಲಾವಣೆ ತರುವ ರೀತಿಯಲ್ಲಿದೆ.
ಮೇ ೩೦ ರಂದು ಸರ್ಕಾರಕ್ಕೆ ಎರಡು ವರ್ಷಗಳು ತುಂಬುತ್ತವೆ. ಸಾಧಿಸಿದ್ದನ್ನು ಸಂತಸದಿಂದ ಮೆಲುಕು ಹಾಕುವ ಜೊತೆಗೆ ಸಾಧಿಸಬೇಕಾಗಿರುವುದು ಅಗಾಧವಾಗಿದೆ ಎಂಬುದನ್ನು ನೆನಪು ಮಾಡಿಕೊಳ್ಳಬೇಕಾದ ದಿನವಾಗಿದೆ ಎಂದು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಚುನಾವಣೆಗಳಲ್ಲಿನ ಗೆಲುವು ನಮ್ಮನ್ನು ಮುಂದಿನ ಬಾರಿಗೆ ಅಧಿಕಾರಕ್ಕೆ ತರುತ್ತದೆ. ಆದರೆ ಆಡಳಿತದಲ್ಲಿನ ಗುಣಾತ್ಮಕ ಬದಲಾವಣೆ ಜನರ ಮನಸ್ಸಿನಲ್ಲಿ ನಮ್ಮನ್ನು ಶಾಶ್ವತವಾಗಿರಿಸುತ್ತದೆ. ಹಿಂದಿನ ಎನ್.ಡಿ.ಎ ಸರ್ಕಾರದ ಗ್ರಾಮ ಸಡಕ್, ಸುವರ್ಣ ಚತುಷ್ಪಥ, ಸಣ್ಣ ರಾಜ್ಯಗಳ ನಿರ್ಮಾಣ, ಪೋಖ್ರಾನ್ ಅಣು ಸ್ರ್ಪೇಟಗಳು ಸದಾ ಸ್ಮರಣೆಯಲ್ಲಿರುತ್ತವೆ.
ಈ ದಿಕ್ಕಿನಲ್ಲಿ ಬದ್ಧತೆ ಪ್ರದರ್ಶಿಸಬೇಕಾದ ದಿನ ಮೇ ೩೦ ಆಗಿದೆ. ಈ ಕಾರಣದಿಂದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಂಕಲ್ಪ ಎಂಬ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಯಾವ ರೀತಿ ಅನುಷ್ಠಾನಗೊಳಿಸಲಾಗಿದೆ ಎಂಬ ವಿವರಗಳನ್ನು ಕೊಡುವಂತೆ ಈಶ್ವರಪ್ಪ ಕೋರಿದ್ದಾರೆ.