ಬೆಂಗಳೂರು, ನ.೮: ನವದಿಲ್ಲಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಭಿನ್ನಮತೀಯ ನಾಯಕ ಜನಾರ್ದನ ರೆಡ್ಡಿ ಪರಸ್ಪರ ಸಿಹಿ ತಿನಿಸಿಕೊಳ್ಳುವ ಮೂಲಕ ಕಳೆದ ಎರಡು ವಾರಗಳಿಂದ ಬಿಜೆಪಿಯಲ್ಲಿ ನಡೆಯುತ್ತಿದ್ದ ಆಂತರಿಕ ಸಂಘರ್ಷಕ್ಕೆ ತಾತ್ಕಾಲಿಕ ತೆರೆ ಎಳೆದಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದ್ದ ಗಣಿಧಣಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸುವ ಮೂಲಕ ಎರಡು ಬಣಗಳ ನಾಯಕರನ್ನು ಒಂದೆಡೆ ಕೂರಿಸಿ ಚರ್ಚೆ ಮಾಡುವಲ್ಲಿ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಯಶಸ್ವಿಯಾಗಿದ್ದಾರೆ. ನಂತರ ಮಾಧ್ಯಮಗಳೆದುರು ಕಾಣಿಸಿಕೊಂಡ ಯಡಿಯೂರಪ್ಪ ಮತ್ತು ಜನಾರ್ದನ ರೆಡ್ಡಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಭಿನ್ನಮತವನ್ನು ಮರೆತು ರಾಜ್ಯದ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ದುಡಿಯುತ್ತೇವೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಯಡಿಯೂರಪ್ಪ ಸಚಿವ ಶ್ರೀರಾಮುಲುರ ಕೈಹಿಡಿದು ಮೇಲಕ್ಕೆತ್ತುವ ಮೂಲಕ ಒಟ್ಟಾಗಿದ್ದೇವೆ ಎಂದು ತೋರ್ಪಡಿಸಿದರು. ಕೊನೆಯಲ್ಲಿದ್ದ ಸಚಿವ ಜನಾರ್ದನ ರೆಡ್ಡಿಯವರ ಕೈಹಿಡಿದಿದ್ದ ಶ್ರೀರಾಮುಲು ತಾವು ಪಕ್ಕಕ್ಕೆ ಸರಿದು ಜನಾರ್ದನ ರೆಡ್ಡಿಯವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರ ಪಕ್ಕಕ್ಕೆ ಸರಿಸಿದರು. ಕೊನೆಗೆ ಕಳೆದ 15 ದಿನ ಗಳಿಂದ ಬಹಿರಂಗವಾಗಿ ಪರಸ್ಪರ ನಿಂದಿಸಿಕೊಂಡಿದ್ದ ಇಬ್ಬರು ಮುಖಂಡರು ಒಟ್ಟಾಗಿರು ವುದಾಗಿ ಮಾಧ್ಯಮಗಳೆದುರು ಹೇಳಿದರು.
ನಂತರ ಅಡ್ವಾಣಿಯವರ 83 ನೆ ಹುಟ್ಟು ಹಬ್ಬದಲ್ಲಿ ಭಾಗವಹಿಸಿದ ಇಬ್ಬರು ಮೂಖಂಡರು ಸಂಸದ ಅನಂತ ಕುಮಾರ್ ಸಮ್ಮುಖದಲ್ಲಿ ಪರಸ್ಪರ ಕೇಕ್ ತಿನಿಸಿಕೊಳ್ಳುವ ಮೂಲಕ ಮತ್ತೆ ಒಗ್ಗಟ್ಟು ಪ್ರದರ್ಶನ ಮಾಡಿದರು. ಎರಡು ವಾರಗಳಿಂದ ನಡೆಯುತ್ತಿದ್ದ ನಾಟಕೀಯ ಬೆಳವಣಿಗಳು ಇಂದು ಸಂಜೆಯ ವೇಳೆಗೆ ನಾಟಕೀಯ ಶೈಲಿಯಲ್ಲೇ ಅಂತ್ಯಗೊಂಡವು.
ನಿನ್ನೆ ರಾತ್ರಿ ದಿಲ್ಲಿಯಲ್ಲೇ ಬಿಡುಬಿಟ್ಟಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್, ಅರುಣ್ ಜೈಟ್ಲಿಯೊಂದಿಗೆ ಚರ್ಚೆ ನಡೆಸಿದರು. ನಿನ್ನೆ ರಾತ್ರಿ ಗಣಿಧಣಿಗಳಿಗೆ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡ ಸುಷ್ಮಾ ಸ್ವರಾಜ್, ದಿಲ್ಲಿಗೆ ಆಗಮಿಸುವಂತೆ ತಾಕೀತು ಮಾಡಿದ್ದರು. ದಿಲ್ಲಿಗೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಸಚಿವರಾದ ಜನಾರ್ದನ ರೆಡ್ಡಿ, ಶ್ರೀರಾಮುಲು ಸುಷ್ಮಾರ ಅಣತಿಯ ಮೇರೆಗೆ ದಿಲ್ಲಿಗೆ ತೆರಳಿದರು. ಮಧ್ಯಾಹ್ನ ೨ ಗಂಟೆಯಿಂದ ಯಡಿಯೂರಪ್ಪ ಮತ್ತು ಅವರ ಬಣದ ಸಚಿವರು ಹಾಗೂ ಜನಾರ್ದನ ರೆಡ್ಡಿ ಮತ್ತು ಬಣದೊಂದಿಗೆ ಮುಖಾಮುಖಿ ಚರ್ಚೆ ಸಾಧ್ಯವಾಯಿತು. ಈ ಸಂದರ್ಭದಲ್ಲಿ ಕೇಂದ್ರಿಯ ಮುಖಂಡರಾದ ಅನಂತಕುಮಾರ್, ವೆಂಕಯ್ಯ ನಾಯ್ಡು, ಅರುಣ್ ಜೈಟ್ಲಿ, ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದಗೌಡ ಹಾಜರಿದ್ದರು.
ಚರ್ಚೆಯ ವೇಳೆ ಆರು ಮಂದಿ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಬೇಡಿಕೆಗೆ ಯಡಿಯೂರಪ್ಪ ಮಣಿಯದೆ ಇದ್ದರಿಂದ ಸಮಸ್ಯೆ ಬಿಗಡಾಯಿಸಿತು. ಕೊನೆಗೆ ಕೋರ್ ಕಮಿಟಿ ರಚನೆ ಮಾಡಿ ಅಲ್ಲಿ ಚರ್ಚಿಸಿದ ನಂತರ ಸಚಿವರನ್ನು ಕೈಬಿಡುವ ಕುರಿತು ನಿರ್ಧರಿಸುವಂತೆ ವರಿಷ್ಠರು ನೀಡಿದ ಸಲಹೆಯನ್ನು ಎರಡು ಬಣಗಳು ಒಪ್ಪಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.
ಉಳಿದಂತೆ ಸಚಿವೆ ಶೋಭಾರನ್ನು ಕೈಬಿಡಲು ಮುಖ್ಯಮಂತ್ರಿ ಸಮ್ಮತಿಸಿದ್ದು, ಆ ಸ್ಥಾನಕ್ಕೆ ವಿಧಾನಸಭಾಧ್ಯಕ್ಷ ಜಗದೀಶ್ರನ್ನು ನಿಯೋಜಿಸಲು ಒಪ್ಪಿದ್ದಾರೆ ಎನ್ನಲಾಗಿದೆ. ಬಾಯಿ ಮಾತಿನ ಭರವಸೆಗಳನ್ನು ತಾವು ನಂಬುವುದಿಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದಾಗ ಶೋಭಾರ ಸಹಿ ಇದ್ದ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಪ್ರದರ್ಶಿಸಿದರು ಎಂದು ಹೇಳಲಾಗಿದೆ.
ಬಳ್ಳಾರಿ ಮತ್ತು ಗದಗ ಜಿಲ್ಲೆಗಳಿಂದ ವರ್ಗಾವಣೆಯಾಗಿರುವ ಅಧಿಕಾರಿಗಳ ಮರು ನೇಮಕ. ಸುಷ್ಮಾ ಸ್ವರಾಜ್ ಮಾರ್ಗದರ್ಶನದಲ್ಲಿ ಕೋರ್ ಸಮಿತಿ ರಚನೆ. ಸಮಿತಿಯಲ್ಲಿ ಸಂಸದ ಅನಂತಕುಮಾರ್, ಸದಾನಂದಗೌಡ, ಯಡಿಯೂರಪ್ಪ, ಕರುಣಾಕರ ರೆಡ್ಡಿ, ಸಂಘ ಪರಿವಾರದ ಮುಖಂಡ ಸಂತೋಷ್ ಸದಸ್ಯರಾಗಿರುವುದು ಎಂದು ನಿರ್ಧರಿಸಲಾಗಿದೆ. ಇದಕ್ಕೆ ಎರಡು ಬಣಗಳು ಸಮ್ಮತಿಸಿದ್ದು, ಸರಕಾರ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು ಕೋರ್ ಕಮಿಟಿಯಲ್ಲಿ ಚರ್ಚೆಯಾಗಬೇಕು ಎಂಬ ಷರತ್ತು ವಿದಿಸಲಾಗಿದೆ.
ಗಣಿ ಅದಿರು ಸಾಗಾಣಿಕೆಯ ಮೇಲೆ ವಿದಿಸಲು ನಿರ್ಧರಿಸಲಾಗಿದ್ದ ಸಾಗಾಣಿಕೆ ಹೆಚ್ಚುವರಿ ಶುಲ್ಕವನ್ನು ಸದ್ಯಕ್ಕೆ ಜಾರಿಗೊಳಿಸದಿರಲು ಯಡಿಯೂರಪ್ಪ ಸಮ್ಮತಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಗಣಿಧಣಿಗಳ ಪಾಳೇಯದಲ್ಲಿ ಗುರುತಿಸಿಕೊಂಡಿರುವ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ, ಏಕಾಏಕಿ ಅಧಿಕಾರಿಗಳ ವರ್ಗಾವಣೆಗೆ ಕೈಹಾಕದಿರುವಂತೆ ವರಿಷ್ಠರು ಸಲಹೆ ನೀಡಿದ್ದು, ಅದರಂತೆ ನಡೆದುಕೊಳ್ಳುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
ರಾಜ್ಯಕ್ಕೆ ಮರಳಿದ ಭಿನ್ನ ಶಾಸಕರು
ಹೈದರಾಬಾದ್: ಬಿಜೆಪಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಳೆದ ೧೪ ದಿನಗಳಿಂದ ಹೈದರಾಬಾದ್ನ ಪಂಚತಾರ ಹೋಟೆಲ್ನಲ್ಲಿ ತಂಗಿದ್ದ ಬಿಜೆಪಿಯ ಶಾಸಕರು ರಾಜ್ಯಕ್ಕೆ ಮರಳಿದ್ದಾರೆ.
ನಾಯಕತ್ವ ಬದಲಾವಣೆಯಾಗದ ಹೊರೆತು ರಾಜೀಯಾಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದ ಬಂಡಾಯ ಶಾಸಕರು, ತಮ್ಮ ಬೇಡಿಕೆಗೆ ಹೈಕಮಾಂಡ್ ಮಣಿಯದೇ ಇದ್ದರಿಂದ ಬೇರೆ ದಾರಿ ಇಲ್ಲದೆ ‘ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯಕ್ಕೆ ಮರಳುತ್ತಿರುವುದಾಗಿ’ ಹೇಳಿದ್ದಾರೆ.
ಹೈದರಾಬಾದ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ ಮತ್ತು ಬೇಳೂರು ಗೋಪಾಲಕೃಷ್ಣ, ಹೈಕಮಾಂಡ್ ನಿರ್ಧಾರಕ್ಕೆ ತಲೆ ಬಾಗುವುದಾಗಿ ಹೇಳಿದ್ದಾರೆ.
ಬಿಕ್ಕಟ್ಟು ಆರಂಭದಲ್ಲಿ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಲು ಲಾಯಕ್ಕಿಲ್ಲದ ವ್ಯಕ್ತಿ. ಒಬ್ಬ ಮಹಿಳೆಯ ಹಿಂದೆ ಬಿದ್ದು ರಾಜ್ಯವನ್ನು ಹಾಳು ಮಾಡಿದ್ದಾರೆ ಎಂದು ಟೀಕಿಸಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ, ಇಂದು ‘ಯಡಿಯೂರಪ್ಪ ನಮ್ಮ ತಂದೆಯ ಸಮಾನ’ ಅವರ ನಾಯಕತ್ವದಲ್ಲಿ ನಮಗೆ ವಿಶ್ವಾಸವಿದೆ. ತಂದೆ ಮಕ್ಕಳ ನಡುವೆ ಮನಸ್ತಾಪ ಸಹಜ. ಆದರೆ, ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂದು ಹೇಳಿದ್ದಾರೆ.
ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಬದಲಾವಣೆ ತಮ್ಮ ಬೇಡಿಕೆಯಾಗಿತ್ತು. ಉಳಿದ ಬೇಡಿಕೆಗಳ ಈಡೇರಿಕೆಗೆ ಜನಾರ್ದನ ರೆಡ್ಡಿ ವರಿಷ್ಠರೊಂದಿಗೆ ಚರ್ಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
20 ದಿನದಿಂದ ನಮ್ಮಲ್ಲಿ ಆಂತರಿಕ ಬಿಕ್ಕಟ್ಟಿತ್ತು. ಈಗ ಮಾತುಕತೆಯಿಂದ ಬಗೆಹರಿದಿದೆ. ನಾಳೆ ಬೆಳಗ್ಗೆಯಿಂದ ನಾವೆಲ್ಲಾ ಕ್ಷೇತ್ರಗಳ ಅಭಿವೃದ್ಧಿ ಕಾರ್ಯದಲ್ಲಿ ಕಾಯೋನ್ಮುಖ ರಾಗುತ್ತೇವೆ. ನಮ್ಮೆಲ್ಲಾ ಬೇಡಿಕೆಗಳಿಗೆ ಸ್ಪಂದಿಸಿರುವ ವರಿಷ್ಠರು, ಕೆಲ ಸಚಿವರನ್ನು ಸಂಪುಟದಿಂದ ಕೈಬಿಡುವ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
ಸಚಿವ ಶೋಭಾರ ಹೆಸರನ್ನು ಪದೇ ಪದೇ ಉಚ್ಛಾರಣೆ ಮಾಡಿದರೆ ನನ್ನ ಸ್ವಾಭಿಮಾನ ಮತ್ತು ವರ್ಚಸ್ಸಿಗೆ ಧಕ್ಕೆಯಾಗುತ್ತೆ. ನಾವು ಬಚ್ಚೇಗೌಡ, ಹರತಾಳ ಹಾಲಪ್ಪರಂತೆ ಪಕ್ಷಾಂತರಿಗಳಲ್ಲಿ, ಪಕ್ಷಾಂತರಿಗಳ ಟೀಕೆಗೆಲ್ಲ ಉತ್ತರ ಕೊಡುವುದಿಲ್ಲ ಎಂದ ಅವರು, ನಾವು ಹೈದರಾಬಾದ್ನ ನೋವೆಟಲ್ ಹೋಟೆಲ್ನಲ್ಲಿ ಮಜಾ ಮಾಡುತ್ತಿರಲಿಲ್ಲ. ಆಂಧ್ರ ಪ್ರದೇಶದ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಎರಡು ಮೂರು ದಿನಗಳಲ್ಲಿ ಕ್ಷೇತ್ರಗಳಲ್ಲಿ ನೆರೆ ಸಂತ್ರಸ್ಥರಿಗೆಲ್ಲಾ ಪರಿಹಾರ ಕೊಡಿಸುತ್ತೇವೆ ಎಂದು ಹೇಳಿದರು.
ಇನ್ನೊಬ್ಬ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ನಾಳೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
ತಾಯಿ ಮಾತಿಗೆ ಗೌರವ: ರೆಡ್ಡಿ
ಹೊಸದಿಲ್ಲಿ: ಮಕ್ಕಳು ತಾಯಿ ಮಾತು ಕೇಳಲೇ ಬೇಕಾಗುತ್ತದೆ. ಅದರಂತೆ ತಾವು ತಾಯಿ ಸುಷ್ಮಾ ಸ್ವರಾಜ್ರ ಮಾತು ಕೇಳಿ ರಾಜ್ಯದ ಅಭಿವೃದ್ಧಿಗಾಗಿ ಯಡಿಯೂರಪ್ಪನವರೊಂದಿ ಗಿನ ಭಿನ್ನಮತವನ್ನು ಹೊಗಲಾಡಿಸಿಕೊಂಡಿರುವುದಾಗಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಮುಖ್ಯಮಂತ್ರಿಯೊಂದಿಗೆ ಕೈಜೋಡಿಸಿದ ನಂತರ ಸುದ್ದಿಗಾರರೊಂದಿಗೆ ಜಂಟಿಯಾಗಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಷ್ಟೆ ಅಲ್ಲದೆ ೫೦ ವರ್ಷಗಳ ವರೆಗೂ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿ ಮುಂದುವರಿಯಬೇಕು. ಅದಕ್ಕಾಗಿ ನಾವು ಭಿನ್ನಮತ ವನ್ನು ಮರೆತು ಸನ್ಮಾನ್ಯ ಯಡಿಯೂರಪ್ಪನವರೊಂದಿಗೆ ಕೈಜೋಡಿಸುವುದಾಗಿ ಹೇಳಿ ದರು.
ಭಿನ್ನಮತ ಹೋಗಲಾಡಿಸಲು ಪಕ್ಷದ ಕೇಂದ್ರಿಯ ಮುಖಂಡರು ತೀವ್ರ ಪ್ರಯತ್ನ ನಡೆಸಿ ದ್ದಾರೆ. ಅದರಲ್ಲೂ ಸಹೋದರರಂತಿರುವ ಅನಂತ ಕುಮಾರ್ ಪ್ರಯತ್ನ ವಿಶೇಷವಾಗಿದೆ ಎಂದು ಜನಾರ್ದನ ರೆಡ್ಡಿ ಹೇಳಿದರು.
ಮತ್ತೆ ಒಂದಾಗಿದ್ದೇವೆ: ಯಡಿಯೂರಪ್ಪ
ರಾಜ್ಯದ ಜನತೆಯ ಹಿತದೃಷ್ಠಿಯಿಂದ ನಮ್ಮಲ್ಲಿದ್ದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು, ಮತ್ತೆ ಒಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನಗರದ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಯ ಹಿತದೃಷ್ಠಿಯಿಂದ ರೆಡ್ಡಿ ಸಹೋದರರೊಂದಿಗೆ ಉಂಟಾಗಿದ್ದ ಭಿನ್ನಾಫ್ರಾಯ ಗಳನ್ನು ಪಕ್ಷದ ರಾಷ್ಟ್ರೀಯ ನಾಯಕರು ಬಗೆಹರಿಸಿದ್ದಾರೆ ಎಂದರು.
ರಾಜ್ಯದ ರಾಜಕೀಯದಲ್ಲಿ ಉಂಟಾಗಿದ್ದ ಅನಿಶ್ಚಿತತೆಯಿಂದ ಕಳೆದ ಎರಡು ವಾರಗಳಿಂದ ಜನತೆಯ ನಿರೀಕ್ಷೆಯಂತೆ ನೆರೆ ಸಂತ್ರಸ್ತರ ಪರಿಹಾರ ಕಾಮಗಾರಿಗಳ ಕುರಿತು ಗಮನ ಹರಿಸಲು ಸಾಧ್ಯವಾಗದೆ, ವಿಳಂಬವಾಗಿರುವುದಕ್ಕೆ ತಾನು ಕ್ಷಮೆ ಯಾಚಿಸುತ್ತೇನೆ. ಸೋಮವಾರದಿಂದಲೆ ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯ ಸರಕಾರವು ತನ್ನ ಅಧಿಕಾರವಧಿಯನ್ನು ಪೂರ್ಣಗೊಳಿಸಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ರೆಡ್ಡಿ ಸಹೋದರರು ಸೇರಿದಂತೆ ಎಲ್ಲ ಶಾಸಕರು, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.
ರಾಷ್ಟ್ರೀಯ ನಾಯಕರ ವಿಶೇಷ ಪ್ರಯತ್ನ, ರೆಡ್ಡಿ ಸಹೋದರರ ಸಹಕಾರದೊಂದಿಗೆ ಬಿಕ್ಕಟ್ಟು ನಿವಾರಣೆಯಾಗಿದೆ. ನಮ್ಮ ಸಮಸ್ಯೆಯನ್ನು ಬಗೆಹರಿಸಿದ ಪಕ್ಷದ ರಾಷ್ಟ್ರೀಯ ನಾಯಕರಾದ ಎಲ್.ಕೆ.ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ, ರಾಜ್ನಾಥ್ ಸಿಂಗ್, ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು, ಸುಷ್ಮಾ ಸ್ವರಾಜ್, ಅನಂತ್ಕುಮಾರ್ ಹಾಗೂ ಸದಾನಂದ ಗೌಡರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು, ರಾಷ್ಟ್ರೀಯ ನಾಯಕರ ಸೂಚನೆಗೆ ಸ್ಪಂದಿಸಿದ ಸಚಿವರಾದ ಕರುಣಾಕರರೆಡ್ಡಿ, ಜನಾರ್ದನ ರೆಡ್ಡಿ, ಶ್ರೀರಾಮುಲು ಅವರಿಗೆ ವಿಶೇಷ ಅಭಿನಂದನೆ ಎಂದರು.
ಪಕ್ಷದ ಮುಖಂಡನಾಗಿ ಹೆಚ್ಚಿನ ಜವಾಬ್ದಾರಿ ತನ್ನ ಮೇಲಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಉದ್ಭವಿಸಲು ಅವಕಾಶ ನೀಡದಂತೆ ಮುಂದು ವರೆಯುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಡಾ.ವಿ.ಎಸ್.ಆಚಾರ್ಯ, ರಾಮಚಂದ್ರಗೌಡ, ಬಿ.ಎನ್.ಬಚ್ಚೇಗೌಡ, ಹರತಾಳ ಹಾಲಪ್ಪ ಮುಂತಾದವರು ಉಪಸ್ಥಿತರಿದ್ದರು.
ಇದು ಒತ್ತಾಯದ ಮದುವೆ: ದೇಶಪಾಂಡೆ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರೆಡ್ಡಿ ಸಹೋದರರ ನಡುವೆ ಬಿಜೆಪಿಯ ರಾಷ್ಟ್ರೀಯ ನಾಯಕರು ಒತ್ತಾಯದ ಮದುವೆ ಮಾಡಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಲೇವಡಿ ಮಾಡಿದ್ದಾರೆ.
ನಗರದಲ್ಲಿನ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹದಿನಾಲ್ಕು ದಿನಗಳಿಂದ ರಾಜ್ಯದ ಬಿಜೆಪಿಯಲ್ಲಿ ಉಂಟಾಗಿದ್ದ ಬಿಕ್ಕಟ್ಟನ್ನು ಶಮನ ಮಾಡಲು ಬಿಜೆಪಿ ಹೈ ಕಮಾಂಡ್, ಮುಖ್ಯಮಂತ್ರಿ ಹಾಗೂ ರೆಡ್ಡಿ ಸಹೋದರರ ನಡುವೆ ಒತ್ತಾಯದ ಮದುವೆ ಮಾಡಿಸಿದ್ದಾರೆ ಎಂದರು.
ಬಿಜೆಪಿ ಪಕ್ಷದಿಂದ ರಾಜ್ಯದಲ್ಲಿ ಸ್ಥಿರ ಸರಕಾರ ನೀಡುವುದು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ. ಇಷ್ಟು ದಿನಗಳಿಂದ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದವರು ಇಂದು ಮತ್ತೆ ಒಂದಾಗಿದ್ದಾರೆ. ಇನ್ನಾದರೂ ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ, ಸಂತ್ರಸ್ತ ಜನತೆಯ ಕಣ್ಣೀರನ್ನು ಕೆಲಸ ಮಾಡಲಿ ಎಂದು ದೇಶಪಾಂಡೆ ತಿಳಿಸಿದರು.
ಬಿಜೆಪಿಯಲ್ಲಿ ಉಂಟಾಗಿದ್ದ ಬಿಕ್ಕಟ್ಟಿನಿಂದಾಗಿ ರಾಜ್ಯದಲ್ಲಿ ಆಡಳಿತ ಯಂತ್ರವು ಸಂಪೂರ್ಣ ಕುಸಿದಿದೆ. ನೆರೆ ಸಂತ್ರಸ್ತರ ಸಂಕಷ್ಟವು ದಿನೆ ದಿನೆ ಹೆಚ್ಚುತ್ತಿದ್ದು, ಸಮರ್ಪಕ ಪರಿಹಾರ ಕಾಮಗಾರಿಗಳಿಲ್ಲದೆ ಅವರು ಕಣ್ಣೀರಿಡುವಂತಾಗಿದೆ ಎಂದು ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದರು.
ತತ್ವ-ಸಿದ್ಧಾಂತ, ತ್ಯಾಗ ವಿಚಾರಧಾರೆಗಳಿಂದ ಕೂಡಿದ ಶಿಸ್ತು ಬದ್ಧ ಪಕ್ಷ ಎಂದು ಹೇಳಿಕೊಂಡು ಜನ ಮನ್ನಣೆಗಳಿಸಿದ್ದ ಬಿಜೆಪಿಯ ನೈಜ್ಯ ಬಣ್ಣ ಏನೂ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಾಗಿದೆ. ಬಿಜೆಪಿಯ ಮುಖ್ಯಮಂತ್ರಿ, ಸಚಿವರು, ಶಾಸಕರು ಅಧಿಕಾರದ ಆಸೆಗಾಗಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಅವರು ಕಿಡಿಕಾರಿದರು.