ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ:ಶಿರಾಲಿ ಗ್ರಾಮ ಪಂಚಾಯತಿಗೆ ಕೇಂದ್ರ ಸರ್ಕಾರದ ನಿರ್ಮಲ ಗ್ರಾಮ ಪುರಸ್ಕಾರ

ಭಟ್ಕಳ:ಶಿರಾಲಿ ಗ್ರಾಮ ಪಂಚಾಯತಿಗೆ ಕೇಂದ್ರ ಸರ್ಕಾರದ ನಿರ್ಮಲ ಗ್ರಾಮ ಪುರಸ್ಕಾರ

Tue, 02 Feb 2010 18:18:00  Office Staff   S.O. News Service

ಭಟ್ಕಳ, ಫೆಬ್ರವರಿ ೨: ಕೇಂದ್ರ ಸರಕಾರದ ನಿರ್ಮಲ ಗ್ರಾಮ ಪುರಸ್ಕಾರ ಪ್ರಶಸ್ತಿಯು ಭಟ್ಕಳ ತಾಲೂಕಿನ ಶಿರಾಲಿ ಗ್ರಾಮ ಪಂಚಾಯತಿಗೆ ಲಭಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ ಹಾಗೂ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಜಗದೀಶ ಶೆಟ್ಟರ್‌ರಿಂದ ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಅಧ್ಯಕ್ಷ ಬಿ ಕೆ ನಾಯ್ಕರು ಸ್ವೀಕರಿಸಿದರು.

 

ಶಿರಾಲಿ ಭಾಗದ ಅಂಗನವಾಡಿ, ಶಾಲೆ,ಕಾಲೇಜು ಮುಂತಾದ ಕಡೆಗಳಲ್ಲಿ ಶೌಚಾಲಯ ನಿರ್ಮಾಣ,ಘನತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಕ್ರಮ, ಚರಂಡಿ ಸುಧಾರಣೆ,ಸ್ವಚ್ಛತೆ,ಕುಡಿಯುವ ನೀರು ಮುಂತಾದ ಅಭಿವೃದ್ದಿಯನ್ನು ಕಾರ್ಯವನ್ನು ಗಮನಿಸಿದ ಅಧಿಕಾರಿಗಳ ತಂಡವು ಶಿರಾಲಿ ಪಂಚಾಯತಿಗೆ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಎಲ್ಲಾ ವಾರ್ಡುಗಳಲ್ಲೂ ಸದಸ್ಯರ ಸಹಕಾರದಿಂದ ಸ್ವಚ್ಛತೆಗೆ ಪಂಚಾಯತ್ ಆಡಳಿತ ಹೆಚ್ಚಿನ ಗಮನ ಹರಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಶೇ.೨೦ರ ನಿಧಿಯಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮದಲ್ಲಿ ಪ್ರತಿಯೊಬ್ಬರೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ತಮ್ಮ ತಮ್ಮ ಪರಿಸರವನ್ನು ಸುಂದರವಾಗಿಟ್ಟುಕೊಳ್ಳಬೇಕು. ಆ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಆಡಳಿತ ಸಹ ಕಟಿಬದ್ದವಾಗಿದೆ ಎಂದ ಅಧ್ಯಕ್ಷ ಬಿ ಕೆ ನಾಯ್ಕ ನಿರ್ಮಲ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಸರ್ವ ಸದಸ್ಯರ, ಕಾರ್ಯದರ್ಶಿ,ಸಿಬ್ಬಂದಿಗಳ ಉತ್ತಮ ಸಹಕಾರವೇ ಕಾರಣ. ಪ್ರಶಸ್ತಿ ಲಭಿಸಿದ ಪಂಚಾಯತ್‌ಗಳಿಗೆ ಕೇಂದ್ರ ಸರಕಾರ ಐದು ಲಕ್ಷ ರೂ ಬಹುಮಾನ ನೀಡುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಅದು ಪಂಚಾಯತ್‌ಗೆ ಬರಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿ ಇದರಿಂದ ಹೆಚ್ಚಿನ ಅಭಿವೃದ್ದಿಗೆ ಅನುಕೂಲವಾಗಲಿದೆ ಎಂದರು.


Share: