ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ಸ್ಪೀಕರ್ ಚುನಾವಣೆ ಕಿತ್ತಾಟ: ರಾಜ್ಯಪಾಲ ಭಾರದ್ವಾಜ್ ತಟಸ್ಥ

ಬೆಂಗಳೂರು:ಸ್ಪೀಕರ್ ಚುನಾವಣೆ ಕಿತ್ತಾಟ: ರಾಜ್ಯಪಾಲ ಭಾರದ್ವಾಜ್ ತಟಸ್ಥ

Sat, 02 Jan 2010 02:57:00  Office Staff   S.O. News Service
ಬೆಂಗಳೂರು/ಮಡಿಕೇರಿ, ಜನವರಿ ೧:ವಿಧಾನಸಭೆ ಸ್ಪೀಕರ್ ಚುನಾವಣೆ ಸಂದರ್ಭ ಸದನಲ್ಲಿ ಸದಸ್ಯರಿಂದ ನಡೆದ ಗದ್ದಲ ಹಾಗೂ ಸ್ಪೀಕರ್ ಪೀಠಕ್ಕೆ ಅಪಮಾನ ಎಸಗಿದ ಕರಾಳ ಘಟನೆ ಇದೀಗ ಮತ್ತಷ್ಟು ಗಂಭೀರತೆ ಪಡೆದುಕೊಳ್ಳುತ್ತಿದೆ.

ಸ್ಪೀಕರ್ ಆಯ್ಕೆ ವಿಚಾರದಲ್ಲಿ ತಾವು ಮಧ್ಯೆ ಪ್ರವೇಶಿಸುವುದಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸ್ಪಷ್ಟಪಡಿಸಿದ್ದಾರೆ. 

ಇದೇ ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ಶಾಸಕ ಡಾ| ಹೇಮಚಂದ್ರ ಸಾಗರ್ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚಿಸಿದ್ದು, ೧೫ ದಿನಗಳಲ್ಲಿ ವರದಿ ನೀಡಲು ಸೂಚಿಸಿದ್ದಾರೆ. 

ಈ ಸದನ ಸಮಿತಿ ತನ್ನ ವರದಿಯಲ್ಲಿ ನಿರ್ದಿಷ್ಟ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದಲ್ಲಿ ಅಂಥವರ ವಿರುದ್ಧ ಅಮಾನತು ಸೇರಿದಂತೆ ಮತ್ತಿತರ ಶಿಸ್ತು ಕ್ರಮ ತೆಗೆದುಕೊಳ್ಳುವ ಅಧಿಕಾರ ಸ್ಪೀಕರ್ ಅವರಿಗಿರುತ್ತದೆ.

ಶುಕ್ರವಾರ ರಾಜಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಪಾಲರು, ಸ್ಪೀಕರ್ ಆಯ್ಕೆ ಬಗ್ಗೆ ಏನೇ ಹಿನ್ನೆಲೆ ಇರಲಿ. ಅದು ಸದನದ ಒಳಗಡೆ ನಡೆದ ವಿಷಯ. ಹೀಗಾಗಿ ಅದರಲ್ಲಿ ಹೊರಗಿನವರು ಮೂಗು ತೂರಿಸುವಂತಿಲ್ಲ. 

ಸಂವಿಧಾನದಲ್ಲೂ ಇದನ್ನು ಸ್ಪಷ್ಟಪಡಿಸಲಾಗಿದೆ ಎಂದರು. ತಮ್ಮ ವ್ಯಾಪ್ತಿಗೆ ಒಳಪಡದ ವಿಚಾರದ ಬಗ್ಗೆ ಪ್ರತಿಕ್ರಿಯಿಸುವ  ಅಗತ್ಯವಿಲ್ಲ. ಆ ಕುರಿತು ಏನೇ ಇದ್ದರೂ ಸದನವೇ ತೀರ್ಮಾನ ಕೈಗೊಳ್ಳಬೇಕು ಎಂದು ತಿಳಿಸಿದರು.   

ಮಂಗಳವಾರ ವಿಧಾನಸಭೆಯ ಅಧ್ಯಕ್ಷರ ಚುನಾವಣೆ ನಡೆದಿತ್ತು. ಚುನಾವಣೆಯನ್ನು ಮುಂದೂಡುವಂತೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿ‌ಎಸ್ ತೀವ್ರವಾಗಿ ಆಗ್ರಹಿಸಿ ಸಭಾಧ್ಯಕ್ಷರ ಪೀಠಕ್ಕೂ ನುಗ್ಗಿ ಗದ್ದಲ ನಡೆಸಿದ್ದರು. ಆ ಗದ್ದಲ ಮಧ್ಯೆಯೇ ಚುನಾವಣೆ ನಡೆದು ನೂತನ ಸಭಾಧ್ಯಕ್ಷರ ಆಯ್ಕೆಯಾಗಿತ್ತು. ಇದನ್ನು ವಿರೋಧಿಸಿ ಉಭಯ ಪಕ್ಷಗಳ ಮುಖಂಡರು ಅದೇ ದಿನ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಈ ಆಯ್ಕೆಯನ್ನು ಅಸಿಂಧುವೆಂದು ಘೋಷಿಸಿ ಮರುಚುನಾವಣೆ ನಡೆಸಬೇಕು ಎಂಬ ಬೇಡಿಕೆ ಇಟ್ಟಿದ್ದರು. 

ವರದಿ ಆಧರಿಸಿ ಕ್ರಮ- ಬೋಪಯ್ಯ: ಶುಕ್ರವಾರ ಮಡಿಕೇರಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೂತನ ಸ್ಪೀಕರ್ ಬೋಪಯ್ಯ, ಸ್ಪೀಕರ್ ಆಯ್ಕೆ ಸಂದರ್ಭ ನಿರ್ಮಾಣವಾದ ಗದ್ದಲ ಪ್ರಕರಣ ವಿಚಾರಣೆ ನಡೆಸಿ ವರದಿ ನೀಡಲು ವಿಧಾನಸಭೆಯ ವಿವಿಧ ಪಕ್ಷಗಳ ಆರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದರು.ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ವಿಧಾನಸಭೆಯಲ್ಲಿ ಇಂತಹ ದಾಂಧಲೆ ನಡೆದಿದೆ. ಈ ಬಗ್ಗೆ ಕೆಲ ಶಾಸಕರು ನೀಡಿದ ದೂರಿನ ಹಿನ್ನಲೆಯಲ್ಲಿ ಹೇಮಚಂದ್ರ ಸಾಗರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಇದರಲ್ಲಿ ಎ.ನಾರಾಯಣಸ್ವಾಮಿ, ಸುಭಾಷ್ ಗುತ್ತೇದಾರ್, ಬಾಬುರಾವ್ ಚಿಂಚನಸೂರ್ ಮೊದಲಾದವರಿದ್ದಾರೆ ಎಂದರು.ಈ ವರದಿ ಆಧಾರದ ಮೇಲೆ ದಾಂಧಲೆ ನಡೆಸಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು. 

ಸದನದ ಮೂಲಸೌಕರ್ಯ ಹಾನಿ: ವಿಧಾನಸಭೆಯ ಮೈಕ್‌ಗಳು ಮತ್ತು ಪೀಠೋಪಕರಣಗಳನ್ನು ದಾಂಧಲೆನಿರತ ಶಾಸಕರು ದ್ವಂಸ ಮಾಡಿರುವ ಹಿನ್ನಲೆಯಲ್ಲಿ ಸದನ ನಡೆಸಲು ಅಗತ್ಯವಾದ ಮೂಲ ಸೌಕರ್ಯಗಳಿಲ್ಲದ ಹಿನ್ನಲೆಯಲ್ಲಿ ಅಧಿವೇಶನ ಮುಂದೂಡಲಾಯಿತು ಎಂದು ಬೋಪಯ್ಯ ಇದೇ ಸಂದರ್ಭ ಸಮರ್ಥಿಸಿಕೊಂಡರು. ಆಯ್ಕೆ ಪ್ರಕ್ರಿಯೆ ನಿಯಮಬದ್ಧವಾಗಿ ನಡೆದಿದೆ ಎಂದು ಬೋಪಯ್ಯ ಸ್ಪಷ್ಟಪಡಿಸಿದರು. 

ಸೌಜನ್ಯ: ಕನ್ನಡಪ್ರಭ

Share: