ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಆರೋಪ:ಹರತಾಳು ಹಾಲ(ಳ)ಪ್ಪ ರಾಜೀನಾಮೆ
ಬಿಜೆಪಿಯ ಮಾನಭಂಗ
ಬೆಂಗಳೂರು, ಮೇ.2: ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿ ರುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹರತಾಳು ಹಾಲಪ್ಪ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯ ರಾಜಕೀಯ ವಲಯದಲ್ಲಿ ತಲ್ಲಣ ಹುಟ್ಟಿಸಿರುವ ಈ ಪ್ರಕರಣ ಆಳುವ ಬಿಜೆಪಿಯನ್ನು ತೀವ್ರ ಇಕ್ಕಟಿಗೆ ಸಿಲುಕಿಸಿದೆ.
ಇದಕ್ಕೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದೇ ಸಂದರ್ಭ ದಲ್ಲಿ ಹಾಲಪ್ಪನವರ ರಾಜೀನಾಮೆಯನ್ನು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂಗೀಕರಿಸಿದ್ದಾರೆ. ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಹಿನ್ನಲೆಯಲ್ಲಿ ರಾಜೀನಾಮೆ ನೀಡಿರುವ ಸಚಿವ ಹರತಾಳು ಹಾಲಪ್ಪ ತನ್ನ ಭಾನಗಡಿ ಕೆಲಸದಿಂದ ಒಂದೆಡೆ ಪಕ್ಷವೆಂಬ ಮನೆಗೆ, ಕ್ಷೇತ್ರದ ಜನತೆಗೆ ದ್ರೋಹ ಬಗೆದರೆ ಮತ್ತೊಂದು ಕಡೆ ಸ್ನೇಹಿತನ ನಂಬಿಕೆಗೆ ದ್ರೋಹ ಬಗೆದು ‘ಉಂಡ ಮನೆಗೆ ದ್ರೋಹ ಬಗೆದ ಮಿತ್ರದ್ರೋಹದ ಭಂಡ’ ಕೆಲಸ ಮಾಡಿದ್ದಾರೆಂಬ ವ್ಯಾಪಕ ಟೀಕೆ ಕೇಳಿ ಬಂದಿದೆ.
ನಡೆದುದೇನು: ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿರುವ ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣ ನಡೆದುದು ನವೆಂಬರ್ 27, 2009ರಂದು ಎಂದು ಹೇಳಲಾಗುತ್ತಿದೆ.ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿದ್ದ ಸಚಿವ ಹಾಲಪ್ಪ ತಮ್ಮ ಅಧಿಕೃತ ಕಾರ್ಯಗಳನ್ನು ಮುಗಿಸಿದನಂತರ ಸ್ನೇಹಿತನ ಮನೆಗೆ ಊಟಕ್ಕೆ ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.
ಅಂದು ರಾತ್ರಿ ಸ್ನೇಹಿತನ ಮನೆಗೆ ಹೋಗಿದ್ದ ಹಾಲಪ್ಪ ಊಟ ಮುಗಿದನಂತರ ತೆರಳುವ ಬದಲು ಅಲ್ಲಿಯೇ ತಂಗಿದ್ದರು. ಮೇಲ್ಮಹಡಿಯಲ್ಲಿ ಮಲಗಿದ್ದ ಸಚಿವ ರಾತ್ರಿ ಸುಮಾರು 3:30ಕ್ಕೆ ಕೂಗಿಕೊಳ್ಳಲು ಪ್ರಾರಂಭಿಸಿದರು. ಗಾಬರಿಯಾಗಿ ಮೇಲಕ್ಕೆ ಹೋಗಿ ವಿಚಾರಿಸಿದಾಗ ತನಗೆ ‘ಲೋ ಬಿಪಿ’ಯಾಗಿದೆ ಪ್ರವಾಸಿ ಮಂದಿರದಲ್ಲಿ ಮಾತ್ರೆಗಳಿವೆ. ಅಲ್ಲಿ ವಾಹನ ಚಾಲಕ ಮತ್ತು ಗನ್‌ಮ್ಯಾನ್ ಇದ್ದಾರೆ ಹೋಗಿ ಅವರನ್ನು ಕೇಳಿದರೆ ಮಾತ್ರೆಗಳನ್ನು ನೀಡುತ್ತಾರೆ ಎಂದು ಹೇಳಿದರೆನ್ನಲಾಗಿದೆ.
ಸಚಿವರ ಸ್ಥಿತಿಯನ್ನು ಕಂಡು ಗಾಬರಿಯಾದ ಸ್ನೇಹಿತ ಮಾತ್ರೆ ತರಲು ಪ್ರವಾಸಿ ಮಂದಿರಕ್ಕೆ ಹೋಗುತ್ತಾನೆ. ಅಲ್ಲಿ ವಾಹನ ಚಾಲಕ ಅಥವಾ ಗನ್‌ಮ್ಯಾನ್ ಯಾರೂ ಇರಲಿಲ್ಲ. ಕೊನೆಗೆ ಹಾಲಪ್ಪನವರನ್ನು ಆಸ್ಪತ್ರೆಗಾದರೂ ಕರೆದುಕೊಂಡು ಹೋಗೋಣ ಎಂದು ಸ್ನೇಹಿತ ಆತುರವಾಗಿ ಮನೆಗೆ ಬಂದಾಗ ಅಲ್ಲಿಯ ಚಿತ್ರಣವೇ ಬೇರೆಯಾಗಿತ್ತು. ಮಿತ್ರ ನಗ್ನಾವಸ್ಥೆಯಲ್ಲಿದ್ದ. ಪತ್ನಿ ಜೋರಾಗಿ ಅಳುತ್ತಿದ್ದಳು. ಸಚಿವ ಆತುರಾತುರವಾಗಿ ಬಟ್ಟೆ ಹಾಕಿಕೊಳ್ಳುತ್ತಿದ್ದರು. ಪತ್ನಿ ಅಳುತ್ತಲೆ ತನ್ನ ಮೇಲಾದ ಅತ್ಯಾಚಾರವನ್ನು ವಿವರಿಸಿದಳು.
ದಿಕ್ಕು ತೋಚದ ಗೆಳೆಯ ಆಘಾತದ ನಡುವೆಯೂ ಮಂತ್ರಿ ಅರೆನಗ್ನಾವಸ್ಥೆಯಲ್ಲಿದ್ದು, ಬಟ್ಟೆ ಹಾಕಿಕೊಳ್ಳುತ್ತಿರುವುದು ಹಾಗೂ ಪತ್ನಿ ಅಳುತ್ತಿರುವ ದೃಶ್ಯವನ್ನು ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದಿದ್ದಾನೆನ್ನಲಾಗಿದೆ. ವಿಶ್ವಾಸದ್ರೋಹ ಬಗೆದ ಸಚಿವರನ್ನು ಸ್ನೇಹಿತ ಹಿಗ್ಗಾಮುಗ್ಗ ಥಳಿಸಿದ್ದು, ಸಚಿವರ ಮೂಗಿನಲ್ಲೆ ರಕ್ತ ಸೋರಿತ್ತು. ನನ್ನಿಂದ ತಪ್ಪಾಗಿದೆ. ದ್ರೋಹ ಮಾಡಿದ್ದೇನೆ. ಇದಕ್ಕಾಗಿ ಯಾವ ಶಿಕ್ಷೆಗೂ ಸಿದ್ದನಿದ್ದೇನೆ. ಈ ವಿಷಯವನ್ನು ಬಹಿರಂಗಪಡಿಸಿವುದು ಬೇಡ ಎಂದು ಅಂಗಲಾಚಿ, ಕಾಲಿಗೆ ಬಿದ್ದು ಅಲ್ಲಿಂದ ಸಚಿವರು ತೆರಳಿದರು ಎಂದು ಹೇಳಲಾಗಿದೆ.
40 ಸೆಕೆಂಡ್ ಚಿತ್ರೀಕರಣ: ನ.27ರಂದು ನಡೆದ ಘಟನೆಯನ್ನು 40 ಸೆಕೆಂಡ್ ಕಾಲ ಚಿತ್ರೀಕರಿಸಲಾಗಿದೆ. ಅದರಲ್ಲಿ ಸಚಿವರು ಬಟ್ಟೆ ಹಾಕಿಕೊಳ್ಳುತ್ತಿರುವುದು. ಗೆಳೆಯನ ಕಾಲಿಗೆ ಬೀಳುತ್ತಿರುವುದು. ಪತ್ನಿ ಅಳುತ್ತಿರುವ ದೃಶ್ಯಗಳಿವೆ. ಸಚಿವರ ಮುಖ ಸ್ಪಷ್ಟವಾಗಿ ಕಾಣುತ್ತಿದೆ. ಡಿಎನ್‌ಎ ಪರೀಕ್ಷೆ ಮಾಡಿಸುವ ದೃಷ್ಟಿಯಿಂದ ಸಚಿವರು ತೊಟ್ಟಿದ್ದ ಧೋತಿ ಹಾಗೂ ಒಳ ಉಡುಪನ್ನು ಸಂಗ್ರಹಿಸಿಡಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ಘಟನೆಯಿಂದ ಮಾನಸಿಕ ಆಘಾತಗೊಂಡ ಮಹಿಳೆ ಆತ್ಮಹತ್ಯೆಗೆ ಯತ್ನ ನಡೆಸಿದ್ದಾಳೆ ಎಂದು ಹೇಳಲಾಗಿದೆ.
ಸ್ನೇಹಿತನ ಕುಟುಂಬಕ್ಕೆ ಬೆದರಿಕೆ:
ಘಟನೆಯ ನಂತರ ಪಾಪ ಪ್ರಜ್ಞೆಯ ನಾಟಕವಾಡಿದ್ದ ಹಾಲಪ್ಪ ನ.27 ರಿಂದ ಇಂದಿನವರೆಗೆ ಸ್ನೇಹಿತನ ಕುಟುಂಬಕ್ಕೆ ಬೆದರಿಕೆ ಹಾಕುತ್ತಲೇ ಬಂದಿದ್ದಾರೆ ಎಂದು ಆರೋಪಿಸಲಾಗಿದೆ. ಸಚಿವರ ಖಾಸಗಿ ಮೊಬೈಲ್‌ನಿಂದ, ಕಚೇರಿ ಹಾಗೂ ಮನೆಯ ದೂರವಾಣಿ ಮೂಲಕ ಬರೊಬ್ಬರಿ 27 ಬಾರಿ ಕರೆ ಮಾಡಿ ಪ್ರಕರಣ ಬಹಿರಂಗಪಡಿಸದಂತೆ ಬೆದರಿಕೆ ಹಾಕಲಾಗಿದೆ.
ಸಚಿವರ ಬೆಂಬಲಿಗರಾದ ರೌಡಿ ಹಿನ್ನೆಲೆಯ ಗಿರೀಶ್ ಹಾಗೂ ಬಸವರಾಜ್ ಎನ್ನುವವರು ಬೆದರಿಕೆ ಹಾಕಿದ್ದಾರೆ. ಅನೇಕ ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದಿನ ಪತ್ರಿಕೆಯೊಂದ ರಲ್ಲಿ ಪ್ರಕಟವಾದ ಸುದ್ದಿಯಲ್ಲಿ ಪರೋಕ್ಷವಾಗಿ ತನ್ನ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ‘ನೈತಿಕ ಹೊಣೆ ಹೊತ್ತು’ ರಾಜಿನಾಮೆ ನೀಡಿರುವ ಹಾಲಪ್ಪ ‘ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಕೊಂಡು ನೋಡಿದ’ ಎನ್ನುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ಅವರ ರಾಜೀನಾಮೆಯಿಂದ ಅತ್ಯಾಚಾರ ಆರೋಪ ಮೇಲ್ನೋಟಕ್ಕೆ ಸಾಬೀತಾದಂತಾಗಿದೆಯೆಂದು ಅವು ಹೇಳಿವೆ.
ಐದನೆ ವಿಕೆಟ್ ಪತನ: ಮೊದಲು ಎಸ್.ಕೆ. ಬೆಳ್ಳುಬ್ಬಿ, ಮತ್ತೆ ಕೃಷ್ಣಯ್ಯ ಶೆಟ್ಟಿ, ಅನಂತರ ಶೋಭಾ ಕರಂದ್ಲಾಜೆ, ಸೋಮಣ್ಣ, ಈಗ ಮುಖ್ಯಮಂತ್ರಿಯ ಪರಮಾಪ್ತ ಹರತಾಳು ಹಾಲಪ್ಪ ರಾಜಿನಾಮೆ ಹೀಗೆ ಎರಡು ವರ್ಷಗಳಲ್ಲಿ ಬಿಜೆಪಿಯ ಐದನೆ ವಿಕೆಟ್ ಪತನವಾಗಿದೆ.
ಸರಕಾರ ಭದ್ರಗೊಳಿಸಲು ಪ್ರಾರಂಭಿಸಲಾದ ಅಪರೇಷನ್ ಕಮಲಕ್ಕೆ ಎಸ್.ಕೆ.ಬೆಳ್ಳುಬ್ಬಿ ಮೊದಲ ಬಲಿಪಶುವಾಗಿದ್ದರು. ಜೆಡಿಎಸ್‌ಗೆ ರಾಜಿನಾಮೆ ನೀಡಿ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದುಬಂದ ಉಮೇಶ ಕತ್ತಿಗೆ ಸಚಿವ ಸ್ಥಾನ ನೀಡಲು ಬೆಳ್ಳುಬ್ಬಿ ತಲೆದಂಡ ಪಡೆಯಲಾಗಿತ್ತು.
ಎರಡನೆ ಹಂತದ ಅಪರೇಶನ್ ಕಮಲದಲ್ಲಿ ಬಿಜೆಪಿ ಸೇರಿದ್ದ ಪ್ರಭಾವಿ ಮುಖಂಡ ವಿ.ಸೋಮಣ್ಣನವರಿಗೆ ನೆಲೆ ಒದಗಿಸಿಕೊಡಲು ಅನೇಕ ಆರೋಪಗಳನ್ನು ಎದುರಿಸುತ್ತಿದ್ದ ಮುಜರಾಯಿ ಸಚಿವರಾಗಿದ್ದ ಕೃಷ್ಣಯ್ಯ ಶೆಟ್ಟಿಯವರ ರಾಜೀನಾಮೆ ಪಡೆಯಲಾಗಿತ್ತು. ಸಚಿವ ಸ್ಥಾನ ಪಡೆದಿದ್ದ ವಿ. ಸೋಮಣ್ಣ ಚುನಾವಣೆಯಲ್ಲಿ ಸೋತ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ದರು.
ಕರ್ತವ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂದು ಕಾರ್ಯಕರ್ತರು ಹಾಗೂ ಪಕ್ಷದ ವರಿಷ್ಠರಿಂದ ಕೇಳಿ ಬಂದ ಅಪಸ್ವರದ ಹಿನ್ನಲೆಯಲ್ಲಿ ಸಂಪುಟದಲ್ಲಿ ಪ್ರಭಾವಿ ಸಚಿವೆಯಾಗಿದ್ದ ಮುಖ್ಯಮಂತ್ರಿಯ ನಿಕಟವರ್ತಿ ಶೋಭಾ ಕರಂದ್ಲಾಜೆ ರಾಜಿನಾಮೆ ನೀಡಬೇಕಾಗಿ ಬಂದಿತ್ತು.
ಕುತಂತ್ರಕ್ಕೆ ಬಲಿಯಾದರೇ!: ಮುಖ್ಯಮಂತ್ರಿಯ ಅತ್ಯಂತ ಪರಮಾಪ್ತರಾಗಿದ್ದ ಹರತಾಳು ಹಾಲಪ್ಪ ತನ್ನದೇ ಪಕ್ಷದವರ ಕುತಂತ್ರಕ್ಕೆ ಬಲಿಯಾದರೇ ಅಥವಾ ರಾಜಕೀಯ ವಿರೋಧಗಳ ಷಡ್ಯಂತ್ರಕ್ಕೆ ಗುರಿಯಾದರೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.
ಹರತಾಳು ಹಾಲಪ್ಪನವರನ್ನು ಹತ್ತಿರದಿಂದ ಬಲ್ಲವರ ಪ್ರಕಾರ ಅವರು ಇಂತಹ ಕೀಳು ಮಟ್ಟಕ್ಕೆ ಇಳಿಯುವ ವ್ಯಕ್ತಿಯಲ್ಲ. ಮಾಜಿ ಮುಖ್ಯಮಂತ್ರಿ ಹಾಗೂ ತಮ್ಮ ರಾಜಕೀಯ ಗುರು ಎಸ್. ಬಂಗಾರಪ್ಪನವರಿಂದ ರಾಜಕೀಯ ತಂತ್ರ-ಕುತಂತ್ರ ಗಳನ್ನು ಕರಗತ ಮಾಡಿಕೊಂಡವರಾಗಿದ್ದರೂ ಹಾಲಪ್ಪ ಇಂತಹ ಹಗ್ಗ ಕಡಿಯುವ ಜಾಯಮಾನದವರಲ್ಲ ಎಂದು ಅವರ ಆಪ್ತರು ಹೇಳುತ್ತಾರೆ.
ಪ್ರಕರಣದ ಎಲ್ಲ ಬೆಳವಣಿಗೆಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಹಾಲಪ್ಪ ವಿರುದ್ದ ವ್ಯವಸ್ಥಿತ ಷಡ್ಯಂತ್ರ ಬಿಜೆಪಿ ಶಾಸಕರಿಂದಲೇ ನಡೆದಿದೆ ಎಂಬ ಗುಮಾನಿಗಳು ದಟ್ಟವಾಗುತ್ತಿವೆ. ಹಾಲಪ್ಪನವರನ್ನು ಪ್ರತಿಹಂತದಲ್ಲೂ ವಿರೋಧಿಸುತ್ತ ಬಂದಿರುವ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಸಚಿವ ರೇಣುಕಾಚಾರ್ಯರ ಮೇಲೆ ಅನುಮಾನದ ನೆರಳು ಬಿದ್ದಿದೆ.
ಇದೇ ಮೊದಲಲ್ಲ: ರಾಜ್ಯ ರಾಜಕೀಯ ಇತಿಹಾಸದಲ್ಲಿ ಲೈಂಗಿಕ ಆರೋಪದ ಹಿನ್ನಲೆಯಲ್ಲಿ ರಾಜಿನಾಮೆ ನೀಡಿದವರಲ್ಲಿ ಹರತಾಳು ಹಾಲಪ್ಪ ಮೊದಲಿಗರಲ್ಲ. ಈ ಹಿಂದೆ 1976ರಲ್ಲಿ ದೇವರಾಜ್ ಅರಸ್ ಮಂತ್ರಿಮಂಡಲದಲ್ಲಿ ಒಳಾಡಳಿತ ಇಲಾಖೆ ರಾಜ್ಯ ಸಚಿವರಾಗಿದ್ದ ಆರ್.ಡಿ. ಕಿತ್ತೂರು, ವೈಯುಕ್ತಿಕ ಕೆಲಸಕ್ಕಾಗಿ ಬಂದಿದ್ದ ಬೇರೆ ರಾಜ್ಯದ ಸುಮಿತ್ರಾ ದೇಸಾಯಿ ಎಂಬ ಮಹಿಳೆ ತನ್ನ ಮನೆಯಿಂದ ಕಾಣೆಯಾದ ಆರೋಪದ ಹಿನ್ನಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅದೇ ರೀತಿ ರಾಮಕೃಷ್ಣ ಹೆಗೆಡೆ ಸಂಪುಟದಲ್ಲಿ ಸಚಿವರಾಗಿದ್ದ ರಾಜವರ್ಧನ್ ಇಂತಹದೇ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.