ಭಟ್ಕಳ: ರಾಜ್ಯ ಬಿಜೆಪಿ ಸರಕಾರದ ೨೨ತಿಂಗಳ ಆಡಳಿತದಲ್ಲಿ ಭ್ರಷ್ಟಾಚಾರವೇ ತುಂಬಿ ಹೋಗಿದ್ದು, ಆಂತರಿಕ ಕಚ್ಚಾಟದಿಂದ ಹೈರಾಣಾಗಿ ಹೋಗಿರುವ ಸರಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ಜ್ಯಾತ್ಯಾತೀತ ಜನತಾದಳದ ಭಟ್ಕಳ ಘಟಕದ ವತಿಯಿಂದ ಭಟ್ಕಳ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಉಚಿತ ವಿದ್ಯುತ್ ನೀಡುವ ಭರವಸೆಯನ್ನು ನೀಡಿ ರೈತರಿಗೆ ಮೋಸ ಮಾಡಲಾಗಿದೆ. ಬಿಪಿಎಲ್ ಪಡಿತರ ಚೀಟಿ ಹಂಚಿಕೆಯಲ್ಲಿಯೂ ಅಸಮಾನತೆ ತಾಂಡವವಾಡುತ್ತಿದ್ದು, ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಕಂಗಾಲಾಗಿದ್ದಾರೆ. ದಿನದಿಂದ ದಿನಕ್ಕೆ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು, ಜನರಿಗೆ ದಿನ ದೂಡುವುದೇ ಕಷ್ಟಕರವಾಗಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು, ಕರ್ನಾಟಕದಲ್ಲಿ ಹಿಂದೆಂದೂ ಕಂಡರಿಯದಷ್ಟು ಆಡಳಿತ ಕುಸಿದು ಬಿದ್ದಿದೆ ಎಂದು ಭಟ್ಕಳ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಮ್.ಡಿ.ನಾಯ್ಕ, ಮುಖಂಡರುಗಳಾದ ಇನಾಯಿತುಲ್ಲಾ ಶಾಬಂದ್ರಿ, ವೆಂಕಟೇಶ ನಾಯ್ಕ, ಈಶ್ವರ ನಾಯ್ಕ, ಸೈಯದ್ ಹಸನ್ ಬರ್ಮಾವರ್ ಮುಂತಾದವರು ಉಪಸ್ಥಿತರಿದ್ದರು. ಭಟ್ಕಳ ಉಪವಿಭಾಗಾಧಿಕಾರಿಗಳ ಅನುಪಸ್ಥಿತಿಯಲ್ಲಿ ಶಿರಸ್ತೇದಾರ ಎಮ್.ಬಿ.ನಾಯ್ಕ ಮನವಿಯನ್ನು ಸ್ವೀಕರಿಸಿದರು.