ಮಂಗಳೂರು, ನ.೯: ಕಳೆದ ವರ್ಷ ಮಂಗಳೂರು ಮತ್ತು ಸುತ್ತಮುತ್ತ ಬಜರಂಗ ದಳದ ಕಾರ್ಯಕರ್ತರು ಚರ್ಚ್‌ಗಳಿಗೆ ನುಗ್ಗಿ ದಾಂಧಲೆಗೈದ ಪ್ರಕರಣದ ಬಗ್ಗೆ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ ಆಯೋಗದ ವಿಚಾರಣೆ ನಡೆಯುತ್ತಿದ್ದಂತೆಯೇ ಬಜರಂಗ ದಳದ ಕಾರ್ಯಕರ್ತರು ಮತ್ತೆ ಮತಾಂತರದ ಆರೋಪ ಹೊರಿಸಿ ಚರ್ಚ್ ಮತ್ತು ಕೆಲವು ಕ್ರೈಸ್ತರ ಮನೆಗೆ ನುಗ್ಗಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಆದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪೊಲೀಸರು ಶಾಂತಿ ಭಂಗ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತಿಲ್ಲ ಎಂದು ಮಾಜಿ ಸಂಸದ, ನಿವೃತ್ತ ಪೊಲೀಸ್ ಅಧಿಕಾರಿ ಎಚ್.ಟಿ. ಸಾಂಗ್ಲಿಯಾನ ಹರಿಹಾಯ್ದಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಚ್ ವಾರೆಂಟ್ ಇಲ್ಲದೆ ಯಾರದೇ ಮನೆಗೆ ಅಥವಾ ಖಾಸಗಿ ಜಮೀನಿಗೆ ನುಗ್ಗುವಂತಿಲ್ಲ. ಆದರೆ, ಇಲ್ಲಿನ ಪೊಲೀಸರು ಅದೆಲ್ಲವನ್ನೂ ಗಾಳಿಗೆ ತೂರಿ ಕೆಲವು ಶಕ್ತಿಗಳನ್ನು ತೃಪ್ತಿಪಡಿಸುವ ಸಲುವಾಗಿ ಪಕ್ಷಪಾತ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
‘ನಾನು ಕೂಡ ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಆವಾಗ ಇಂಥ ಕೋಮುಭಾವನೆ ಇರಲಿಲ್ಲ. ಈಗ ಆ ವಾತಾವರಣ ಕಣ್ಮರೆಯಾಗಿರುವುದು ವಿಷಾದನೀಯ. ನಾನಿಲ್ಲಿಗೆ ಒಬ್ಬ ರಾಜಕಾರಣಿಯಾಗಿ ಬಂದಿಲ್ಲ. ಕ್ರೈಸ್ತ ಸಮುದಾಯದ ಮೇಲೆ ಆಗುತ್ತಿರುವ ಅನ್ಯಾಯವನ್ನು ಕಂಡು ಬೇಸತ್ತು ಇಲ್ಲಿನ ಜನರ ಆಹವಾಲನ್ನು ಆಲಿಸಲು ಸಮುದಾಯದ ಕಾರ್ಯಕರ್ತನಾಗಿ ಬಂದಿದ್ದೇನೆ. ಇಲ್ಲಿ ಕ್ರೈಸ್ತ ಸಮುದಾಯದ ಮೇಲೆ ಉದ್ದೇಶಪೂರ್ವಕವಾಗಿ ದೌರ್ಜನ್ಯ ನಡೆಸಲಾಗುತ್ತದೆ. ಪೊಲೀಸರು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರಗಿಸುತ್ತಿಲ್ಲ. ಕ್ರೈಸ್ತರ ಮೇಲೆ ನಡೆಸಿದ ದೌರ್ಜನ್ಯದ ಬಗ್ಗೆ ನಾಲ್ಕು ಪ್ರಕರಣ ದಾಖಲಿಸಲು ಬಾಕಿ ಉಳಿದಿದ್ದು, ಇದ್ಯಾಕೆ ಎಂದು ಪೊಲೀಸ್ ಅಧಿಕಾರಿಗಳಲ್ಲಿ ಕೇಳಿದಾಗ ‘ಸೂಕ್ತ ಸಾಕ್ಷ ಇಲ್ಲದ ಕಾರಣ ಪ್ರಕರಣ ದಾಖಲಿಸಲಿಲ್ಲ’ ಎನ್ನುತ್ತಾರೆ.
ಹಾಗಿದ್ದರೆ, ಬಜರಂಗ ದಳದವರು ನೀಡಿದ ದೂರುಗಳು ಸಾಕ್ಷಾಧಾರದಿಂದ ಕೂಡಿರುತ್ತದೆಯೇ ಎಂದು ಪ್ರಶ್ನಿಸಿದ ಸಾಂಗ್ಲಿಯಾನ, ಸಂಘ ಪರಿವಾರ ಹಾಗೂ ಅವರೊಂದಿಗಿರುವ ಪೊಲೀಸರ ಜೊತೆ ಕೆಲವು ಮಾಧ್ಯಮದವರೂ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಅಜ್ಜರಕಾಡು ಮತ್ತು ಮಂಗಳೂರಿನ ಅತ್ತಾವರದಲ್ಲಿ ಬಜರಂಗ ದಳದ ಕಾರ್ಯಕರ್ತರ ದೌರ್ಜನ್ಯಕ್ಕೆ ತುತ್ತಾದ ಕುಟುಂಬಸ್ಥರು ಕೂಡ ಇದೇ ಸಂದರ್ಭ ತಮ್ಮ ಅಳಲನ್ನು ತೋಡಿಕೊಂಡರು.
ಮನೆ ಖಾಲಿ ಮಾಡಲು ಸೂಚನೆ
ನ. ೩ರಂದು ಮಂಗಳವಾರ ನಗರದ ಅತ್ತಾವರದ ಫ್ಲಾಟ್‌ನಲ್ಲಿ ಬಜರಂಗ ದಳದ ಕಾರ್ಯಕರ್ತರು ಪೊಲೀಸರ ಸಮ್ಮುಖ ನಡೆಸಿದ ದೌರ್ಜನ್ಯದ ಬಗ್ಗೆ ವಿವರಿಸಿದ ಆಶಾಲತಾ ‘ಪೊಲೀಸರನ್ನೇ ಕಂಡಿರದ ನಾನು ಮತ್ತು ನನ್ನ ಮಕ್ಕಳು ತುಂಬಾ ಹೆದರಿದ್ದೇವೆ. ನಮಗೆ ಮಾಧ್ಯಮದ ಮೇಲೂ ತುಂಬಾ ವಿಶ್ವಾಸವಿತ್ತು. ಆದರೆ ಬಜರಂಗ ದಳದ ಕಾರ್ಯಕರ್ತರ ಜತೆಗೂಡಿ ಕೆಲವು ಮಾಧ್ಯಮದವರು ಕೂಡ ನಮ್ಮ ನೆಮ್ಮದಿ ಹಾಳು ಮಾಡಿದರು. ನಮ್ಮಲ್ಲಿ ಯಾವುದೇ ಮಾತು ಕೇಳದೆ ಬಜರಂಗ ದಳದವರ ಹೇಳಿಕೆಗೆ ಮಾತ್ರ ಹೆಚ್ಚು ಮಹತ್ವ ನೀಡಿದರು. ಅದನ್ನೇ ನಂಬಿದರು. ಮಾಧ್ಯಮಗಳ ವರದಿಯಿಂದ ಬೇಸತ್ತು ನಾನು ಆತ್ಮಹತ್ಯೆ ಮಾಡುವುದೊಂದು ಬಾಕಿ...’ ಎಂದು ಹೇಳಿ ಗದ್ಗದಿತರಾದರಲ್ಲದೆ, ನಾವಿರುವ ಫ್ಲಾಟ್‌ನ ಓನರ‍್ಸ್ ಅಸೋಸಿಯೇಶನ್‌ನವರು ಮೊನ್ನೆ ಸಭೆ ನಡೆಸಿ ೧ ದಿನದೊಳಗೆ ಮನೆ ಬಿಡುವಂತೆ ಸೂಚಿಸಿದ್ದಾರೆ. ಕೊನೆಗೆ ನಮ್ಮ ಮನೆಯ ಮಾಲಕರ ವಿನಂತಿ ಮೇರೆಗೆ ೩೫ ದಿನಗಳ ಕಾಲಾವಕಾಶ ಕೋರಿದ್ದು, ಉಪಾಯವಿಲ್ಲದೆ ನಾವು ಆ ಮನೆ ಬಿಡುವಂತಾಗಿದೆ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಬಿಷಪ್ ಸಿ.ಎಲ್.ಫುರ್ಟಾಡೊ, ವಾಲ್ಟರ್ ಮಾಬೆನ್, ಎಡ್ವಿನ್ ವಾಲ್ಟರ್, ರೆ.ಫಾ. ಓವಿಲ್ ಡಿಸೋಜ, ಆಲ್ವಿನ್ ಕುಲಾಸೊ, ವಿಲಿಯಂ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.
‘ಭರವಸೆ ನೀಡುತ್ತಲೇ ಜೈಲಿಗೆ ತಳ್ಳಿದರು...’
ಉಡುಪಿ ಅಜ್ಜರಕಾಡು ಚರ್ಚ್ ಅಧೀನದಲ್ಲಿ ಬೆಥೆಲ್ ಚಿಲ್ಡ್ರನ್ ಹೋಮ್ ಇದ್ದು, ಇಲ್ಲಿಗೆ ಕಳೆದ ನ.೧ರಂದು ಮತಾಂತರದ ಆರೋಪದ ಮೇರೆಗೆ ಪೊಲೀಸರು ನುಗ್ಗಿ ಪರಿಶೀಲಿಸಿದ್ದಾರೆ ಎಂದು ಚಿಲ್ಡ್ರನ್ ಹೋಮ್‌ನ ವಾರ್ಡನ್ ಸರೋಜ ಮಾರ್ಗರೆಟ್ ಆರೋಪಿಸಿದರು.
‘ನಮ್ಮಲ್ಲಿ ೬೫ ಬಡ ಮಕ್ಕಳಿದ್ದಾರೆ. ಅವರಿಗೆ ನಾವು ಉಚಿತ ಶಿಕ್ಷಣ, ಅನ್ನಹಾರ ನೀಡುತ್ತಿದ್ದೆವು. ನಾವು ಯಾವತ್ತೂ ಕೂಡ ಅವರಿಗೆ ಬೈಬಲ್ ಓದಿ, ಕ್ರಿಶ್ಚಿಯನ್ ಧರ್ಮಕ್ಕೆ ಸೇರಿ ಎಂದು ಒತ್ತಾಯಿ ಸಿರಲಿಲ್ಲ. ನ.೧ರಂದು ಕಾಪು ಪೊಲೀಸರು ಬಂದು ನನ್ನನ್ನು ಠಾಣೆಗೆ ಕರೆದೊಯ್ದರು. ಕೆಲವು ಪೊಲೀಸರು ನನ್ನನ್ನು ವಿಚಾರಣೆ ನಡೆಸಿದರೆ ಇನ್ನು ಕೆಲವರು ಚಿಲ್ಟ್ರನ್ ಹೋಮ್‌ಗೆ ತೆರಳಿ ಪರಿಶೀಲನೆ ನಡೆಸಿದರು. ನನ್ನ ಬಗ್ಗೆ ಒಳ್ಳೆಯ ಮಾತುಗಳ ನ್ನಾಡುತ್ತಲೇ ಹಿರಿಯ ಅಧಿಕಾರಿಗಳು ಬಂದ ಅನಂತರ ನಿಮ್ಮನ್ನು ಬಿಡುಗಡೆ ಮಾಡುತ್ತೇವೆ ಎಂದಿದ್ದರು. ಆದರೆ, ಸಂಜೆಯ ಹೊತ್ತು ನನ್ನ ಮೇಲೆ ಪ್ರಕರಣ ದಾಖಲಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಎರಡು ದಿನ ಮಂಗಳೂರು ಜೈಲಿನಲ್ಲಿರುವಂತೆ ಮಾಡಿದ್ದಾರೆ’ ಎಂದು ಸರೋಜ ಮಾರ್ಗರೆಟ್ ಹೇಳಿದರು.
‘ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ. ೬೫ ಮಂದಿಯ ಪೈಕಿ ಇಬ್ಬರು ಮಕ್ಕಳು ರಜೆಯಲ್ಲಿ ಊರಿಗೆ ಹೋಗಿದ್ದರು. ಅವರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಸರೋಜರ ಮೇಲೆ ಪ್ರಕರಣ ದಾಖಲಿಸಿದ್ದಾರಂತೆ. ಹಾಗೇ ಹೋದ ಮಕ್ಕಳು ಮರಳಿ ಬಂದಿಲ್ಲ. ತಮ್ಮ ಸಾಮಗ್ರಿಗಳನ್ನು ಕೂಡ ಕೊಂಡು ಹೋಗಿದ್ದಾರೆ. ಈ ಮಕ್ಕಳನ್ನು ಬಜರಂಗದಳದ ಕಾರ್ಯಕರ್ತರೇ ಯಾಕೆ ನಮ್ಮ ಸಂಸ್ಥೆಗೆ ಸೇರಿಸಿರಬಾರದು ಎಂಬ ಸಂಶಯ ನಮಗೆ ಕಾಡುತ್ತದೆ’ ಎಂದು ಸರೋಜರ ಪತಿ ಜೋಸೆಫ್ ಜಮಖಂಡಿ ನುಡಿದರು