ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಮುಂದುವರಿದ ಪಡಿತರ ಪರಿಪಾಟಲು

ಭಟ್ಕಳ: ಮುಂದುವರಿದ ಪಡಿತರ ಪರಿಪಾಟಲು

Wed, 18 Nov 2009 16:34:00  Office Staff   S.O. News Service
ಭಟ್ಕಳ, ನವೆಂಬರ್ 18: ತಾಲೂಕಿನ ವಿವಿದೆಡೆ ಜನರು ಬಡತನ ರೇಖೆಯೊಳಗಿನ(ಬಿಪಿ‌ಎಲ್)ವರಿಗಾಗಿ ನೀಡಲಾಗುತ್ತಿರುವ ಪಡಿತರವನ್ನು ಪಡೆಯಲು ಹೋರಾಟವನ್ನು ಮುಂದುವರೆಸಿದ್ದಾರೆ. ತಾಲೂಕಿನ ಬೆಂಗ್ರೆಯಲ್ಲಿ ಪಡಿತರ ಚೀಟಿ ವಿತರಣೆಯಲ್ಲಿ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿರುವ ನೂರಾರು ಮಹಿಳೆಯರು ಗ್ರಾಮಲೆಕ್ಕಾಧಿಕಾರಿ, ಗೊಡೋನ್ ಹಾಗೂ ಗ್ರಾಮಪಂಚಾಯತ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಅಳ್ವೇಕೋಡಿಯಲ್ಲಿ ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ಧರಣಿ ಹೊಸ ರೂಪ ಪಡೆದು ಆಹಾರ ನಿರೀಕ್ಷಕರಿಗೆ ದಿಗ್ಬಂಧನ ವಿಧಿಸಲಾಗಿದೆ.
 
ಬೆಂಗ್ರೆ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ನಡೆಸಲಾಗಿರುವ ಬಿಪಿ‌ಎಲ್ ಸರ್ವೇಯು ತಾರತಮ್ಯ ನೀತಿಯಿಂದ ಕೂಡಿದೆ. ಒಂದೇ ಮನೆಯ ಮೂರ್‍ನಾಲ್ಕು ಜನರಿಗೆ ಪ್ರತ್ಯೇಕ ಬಿಪಿ‌ಎಲ್ ಕಾರ್ಡ ನೀಡಿರುವ ಪ್ರಕರಣಗಳೂ ಇವೆ. ಕಳೆದ ಮೂರು ದಿನಗಳಿಂದ ಅಧಿಕಾರಿಗಳ ಆಗಮನಕ್ಕಾಗಿ ಕಾದು ಕುಳಿತರೂ ಅಧಿಕಾರಿಗಳು ನಿರ್ಲಕ್ಷ ತಾಳಿದ್ದಾರೆ ಎಂದು ಜನರು ಕಿಡಿಕಾರಿದರು. ಮಂಗಳವಾರ ಬೆಳಿಗ್ಗೆ ೧೨ ಗಂಟೆಯವರೆಗೂ ಕಂದಾಯ ಅಧಿಕಾರಿಗಳು ಹಾಗೂ ಆಹಾರ ನಿರೀಕ್ಷಕರು ಸೇರಿದಂತೆ ಯಾವುದೇ ಅಧಿಕಾರಿ ಸ್ಥಳಕ್ಕೆ ಹಾಜರಾಗದ ಕಾರಣ ಜನರು ಅಸಮಾಧಾನಗೊಂಡು ಗ್ರಾಮಲೆಕ್ಕಾಧಿಕಾರಿಗಳ ಕಚೇರಿಗೆ ಬೀಗ ಜಡಿದರು. ಬೆಂಗ್ರೆಯ ಪ್ರಮುಖ ಗಣೇಶ ನಾಯ್ಕ ಘಟನಾ ಸ್ಥಳದಲ್ಲಿ ಉಪಸ್ಥಿತರಿದ್ದು, ಪ್ರತಿಭಟನಾಕಾರರಿಗೆ ಬೆಂಬಲ ನೀಡಿದರು. ಪ್ರತಿಭಟನೆಯ ನಡುವೆ ಬೆಂಗ್ರೆ ಗ್ರಾಮಪಂಚಾಯತ ಅಧ್ಯಕ್ಷ ಜನಾರ್ಧನ ನಾಯ್ಕರನ್ನು ಕಾರ್ಯಾಲಯದಲ್ಲಿ ಕೂಡಿ ಹಾಕಲು ಪ್ರಯತ್ನಪಟ್ಟ ಘಟನೆಯೂ ನಡೆಯಿತು. ನಂತರ ಅಧ್ಯಕ್ಷರನ್ನು ಕಾರ್ಯಾಲಯದಿಂದ ಹೊರಕ್ಕೆ ಕರೆಯಿಸಿ ಕಚೇರಿಯನ್ನು ಮುಚ್ಚಲಾಯಿತು. ಜನಪ್ರತಿನಿಧಿಗಳ ಪೋನ್ ಕರೆಗೆ ಸ್ಪಂದಿಸದ ಅಧಿಕಾರಿಗಳು, ಸಾಮಾನ್ಯ ಜನರಿಗೆ ಸಹಾಯ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ ಜನರು ಪಂಚಾಯತ ಕಾರ್ಯಾಲಯ ಹಾಗೂ ಪಡಿತರ ತುಂಬಿದ ಗೊಡೋನ್‌ಗೂ ಬೀಗ ಜಡಿದರು. ಆಹಾರ ನಿರೀಕ್ಷಕ ಶಂಕರಪ್ಪ ಸ್ಥಳಕ್ಕೆ ಧಾವಿಸಿ ಆಕ್ರೋಶಿತರನ್ನು ಸಮಾಧಾನಪಡಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಜನರಿಂದ ಲಿಖಿತ ದೂರುಗಳನ್ನು ಪಡೆದುಕೊಂಡು, ಆದಷ್ಟು ಬೇಗ ಸಮಸ್ಯೆಗಳನ್ನು ಪರಿಹಾರ ಮಾಡುವುದಾಗಿ ಅವರು ಭರವಸೆ ನೀಡಿದ ನಂತರ ಜನರು ಅಲ್ಲಿಂದ ತೆರಳಿದರು.
 
ತಹಸೀಲ್ದಾರ ಭೇಟಿ: ಎರಡೂ ಕಡೆ ಜನರ ಆಕ್ರೋಶ ಮಿತಿ ಮೀರಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ ಎಸ್.ಎಮ್.ನಾಯ್ಕ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಮುಂಜಾವಿನೊಂದಿಗೆ ಮಾತನಾಡಿದ ಅವರು ಪಡಿತರ ಚೀಟಿ ವಿತರಣೆಯಲ್ಲಿ ಸರಕಾರ ನಿಗದಿಪಡಿಸಿದ ಮಾನದಂಡವನ್ನು ಅನುಸರಿಸಲಾಗಿದೆ. ಅನ್ಯಾಯವಾಗಿದೆ ಎಂದು ಕಂಡು ಬಂದಲ್ಲಿ ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು. ಹೆಚ್ಚುವರಿ ಕಾರ್ಡ ವಿತರಣೆಗಾಗಿ ಸರಕಾರದ ನಿರ್ದೇಶನಕ್ಕಾಗಿ ಕಾಯಲಾಗುತ್ತಿದೆ ಎಂದು ವಿವರಿಸಿದ್ದಾರೆ.

Share: