ಪಡುಬಿದ್ರಿ, ಡಿಸೆಂಬರ್ ೨೩:ಇಂದಿನ ದಿನಗಳಲ್ಲಿ ಬ್ಯಾರಿ ಸಂಸ್ಕೃತಿ ಮರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಅವುಗಳನ್ನು ಉಳಿಸುವ ಉದ್ದೇಶದಿಂದ ಮತ್ತೆ ಮರುಜೀವ ನೀಡುವ ಗುರಿಯನ್ನು ಬ್ಯಾರಿ ಅಕಾಡೆಮಿ ಹೊಂದಿದೆ ಎಂದು ಬ್ಯಾರಿ ಅಕಾಡೆಮಿ ಅಧ್ಯಕ್ಷ ಎಂ.ಬಿ.ಅಬ್ದುರ್ರಹ್ಮಾನ್ ಹೇಳಿದರು.
ಅವರು ಭಾನುವಾರ ಸಂಜೆ ಪಡುಬಿದ್ರಿಯ ಡೌನ್‌ಟೌನ್ ಸಭಾಂಗಣದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಮುದಾಯದ ಮಂದಿಯ ಹಲವು ವರ್ಷಗಳ ಹೋರಾಟದ ಫಲವಾಗಿ ಬ್ಯಾರಿ ಅಕಾಡೆಮಿ ದೊರಕಿದೆ. ಬ್ಯಾರಿ ಜನಾಂಗದಲ್ಲಿ ತನ್ನದೇ ಆದ ಸಂಸ್ಕೃತಿ ಇದೆ. ಇತ್ತೀಚಿನ ದಿನಗಳಲ್ಲಿ ಈ ಸಂಸ್ಕೃತಿ ಯುವಜನಾಂಗ ಮರೆತಿದೆ. ಈ ಸಂಸ್ಕೃತಿಯನ್ನು ಮತ್ತೆ ಜೀವಂತಿಕೆ ನೀಡಿ ಉಳಿಸಿ ಬೆಳಸುವ ನಿಟ್ಟಿನಲ್ಲಿ ಅಕಾಡೆಮಿ ಪ್ರೋತ್ಸಾಹ ನೀಡಲಿದೆ. ಈ ಬಗ್ಗೆ ಬ್ಯಾರಿ ಸಮುದಾಯದ ಮಂದಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಅಕಾಡೆಮಿಯ ಸದಸ್ಯರಾದ ಎಸ್.ಪಿ.ಉಮರ್ ಫಾರೂಕ್, ಪಿ.ಮೊಹಮ್ಮದ್ ಹಾಜರಿದ್ದರು. ಇಸ್ಮಾಯೀಲ್ ಫಲಿಮಾರು ಸ್ವಾಗತಿಸಿದರು. ಅಬ್ದುಲ್ ಅಝೀಝ್ ಹೆಜ್ಮಾಡಿ ವಂದಿಸಿದರು. ಪಿ.ಎಮ್.ಶರೀಫ್
ಕಾರ್ಯಕ್ರಮ ನಿರ್ವಹಿಸಿದರು.
ಚಿತ್ರ, ವರದಿ: ಹಮೀದ್, ಪಡುಬಿದ್ರಿ.