ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹೊಸದಿಲ್ಲಿ: ಮೂರು ರಾಜ್ಯಗಳಲ್ಲಿ ಮತ್ತೆ ಕಾಂಗ್ರೆಸ್ ವಿಜೃಂಭಣೆ - ಹರ್ಯಾಣಾದಲ್ಲಿ ತ್ರಿಶಂಕು ಸ್ಥಿತಿ

ಹೊಸದಿಲ್ಲಿ: ಮೂರು ರಾಜ್ಯಗಳಲ್ಲಿ ಮತ್ತೆ ಕಾಂಗ್ರೆಸ್ ವಿಜೃಂಭಣೆ - ಹರ್ಯಾಣಾದಲ್ಲಿ ತ್ರಿಶಂಕು ಸ್ಥಿತಿ

Fri, 23 Oct 2009 14:21:00  Office Staff   S.O. News Service
ಹೊಸದಿಲ್ಲಿ, ಅ.22: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮೂರು ರಾಜ್ಯಗಳ ವಿಧಾನಸಭಾ ಫಲಿತಾಂಶ ಹೊರಬಿದ್ದಿದ್ದು ಮಹಾರಾಷ್ಟ್ರ ಮತ್ತು ಅರುಣಾಚಲ
ದಲ್ಲಿ ಕಾಂಗ್ರೆಸ್ ಅಧಿಕಾರದೆಡೆಗೆ ಧಾಪುಗಾಲಿಟ್ಟಿದೆ. ಆದರೆ ಹರ್ಯಾಣದಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ.

ಮಹಾರಾಷ್ಟ್ರ: ಕಳೆದ 10 ವರ್ಷಗಳಿಂದ ಮಹಾರಾಷ್ಟ್ರವನ್ನು ಆಳುತ್ತಿರುವ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟವು ರಾಜ್ಯದ ಒಟ್ಟು ೨೮೮ ವಿಧಾನಸಭಾ ಕ್ಷೇತ್ರಗಳಲ್ಲಿ ೧೪೪ನ್ನು ಬಗಲಿಗೆ ಹಾಕಿಕೊಂಡಿದ್ದು, ಸರಳ ಬಹುಮತಕ್ಕೆ ಕೇವಲ ಒಂದು ಸ್ಥಾನದ ಕೊರತೆ ಅನುಭವಿಸಿದೆ. ಆದರೆ ಉಭಯ ಪಕ್ಷಗಳ ಬಂಡುಕೋರರು ಹಾಗೂ ಸ್ವತಂತ್ರ ಅಭ್ಯರ್ಥಿಗಳುಮ್ ೪೯ ಸ್ಥಾನ ಗಳಿಸಿರುವುದರಿಂದ ಆಳುವ ಮೈತ್ರಿ ಕೂಟಕ್ಕೆ ಬಹುಮತ ಕ್ರೋಢೀಕರಿಸಲು ಕಷ್ಟವಾಗಲಾರದು. ಕಳೆದ ಚುನಾವಣೆಯಲ್ಲಿ ಮೈತ್ರಿ ಕೂಟ ೪೦ ಸ್ಥಾನ ಗಳಿಸಿದ್ದು, ಈ ಬಾರಿ ತನ್ನ ಸಾಧನೆಯನ್ನು ಉತ್ತಮಗೊಳಿಸಿದೆ. ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಪಡೆಯಲಿರುವ ಕಾಂಗ್ರೆಸ್ ೭೯ ಸ್ಥಾನ ಗಳಿಸಿದ್ದು, ಮೂರು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಎನ್‌ಸಿಪಿ ೬೨ ಸ್ಥಾನಗಳಲ್ಲಿ ಗೆದ್ದಿದೆ. ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ೬೯ ಹಾಗೂ ಎನ್‌ಸಿಪಿ ೭೧ ಸ್ಥಾನ ಗಳಿಸಿದ್ದವು.

೧೩ ಸ್ಥಾನಗಳನ್ನು ಗಳಿಸಿ ಚೊಚ್ಚಲ ವಿಧಾನಸಭಾ ಪ್ರವೇಶ ಪಡೆದಿರುವ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಶಿವಸೇನಾ-ಬಿಜೆಪಿ ಮೈತ್ರಿ ಕೂಟದ ಹಿನ್ನಡೆಗೆ ಪ್ರಧಾನ ಕಾರಣವಾಯಿತು. ಮೈತ್ರಿ ಕೂಟ ಒಟ್ಟು ೯೦ ಸ್ಥಾನಗಳ ವಿಜಯಿಯಾಗಿದ್ದು, ಕಳೆದ ಬಾರಿಗಿಂತ ೨೬ ಸ್ಥಾನಗಳಲ್ಲಿ ಹಿನ್ನಡೆ ಅನುಭವಿಸಿದೆ. ೨೦೦೪ರಲ್ಲಿ ಕೂಟವು ೧೧೬ ಸ್ಥಾನ ಗಳಿಸಿತ್ತು. ಬಿಜೆಪಿ ೪೫ ಸ್ಥಾನ ಗಳಿಸಿದ್ದು, ಒಂದರಲ್ಲಿ ಮುನ್ನಡೆಯಲ್ಲಿದ್ದರೆ, ಶಿವಸೇನೆ ೪೩ ಕ್ಷೇತ್ರ ಗೆದ್ದು, ಒಂದರಲ್ಲಿ ಮುನ್ನಡೆ ಸಾಧಿಸಿದೆ.

ಅರುಣಾಚಲ ಪ್ರದೇಶ: ಆಳುವ ಕಾಂಗ್ರೆಸ್ ಪಕ್ಷವು ೬೦ ಸದಸ್ಯ ಬಲದ ಅರುಣಾಚಲ ಸದನದಲ್ಲಿ ೩೯ ಸ್ಥಾನ ಗೆದ್ದು, ಮೂರರಲ್ಲಿ ಮುನ್ನಡೆ ಸಾಧಿಸುವುದರೊಂದಿಗೆ ಮೂರನೆ
ಎರಡರ ನಿಚ್ಚಳ ಬಹುಮತದೊಂದಿಗೆ ಮತ್ತೆ ಗದ್ದುಗೆಯೇರಲಿದೆ. ಕಾಂಗ್ರೆಸ್ ಎಲ್ಲ ೬೦ ಸ್ಥಾನಗಳಿಗೆ ಸ್ಪಧಿಸಿದ್ದರೆ, ಮೊದಲ ಬಾರಿ ೨೬ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನಿಳಿಸಿದ್ದ ತೃಣಮೂಲ ಕಾಂಗ್ರೆಸ್ ಐದು ಕ್ಷೇತ್ರಗಳನ್ನು ಬಾಚಿಕೊಂಡಿದ್ದು, ಒಂದರಲ್ಲಿ ಮುನ್ನಡೆಯಲ್ಲಿದೆ. ೩೬ ಅಭ್ಯರ್ಥಿಗಳನ್ನು ನಿಲ್ಲಿಸಿದ್ದ ಎನ್‌ಸಿಪಿ ೬ ಕಡೆ ವಿಜಯ ಸಾಧಿಸಿದೆ.
ಕಾಂಗ್ರೆಸ್ ಗೆದ್ದ ೩೯ ಸ್ಥಾನಗಳಲ್ಲಿ ಮುಖ್ಯಮಂತ್ರಿ ದೋರ್ಜಿ ಖಂಡು ಹಾಗೂ ಇತರ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದುವರೆಗೆ ಫಲಿತಾಂಶ ಘೋಷಿಸಲಾದ ೫೩ ಕ್ಷೇತ್ರಗಳಲ್ಲಿ ಕಾಂಗ್ರೆಸ್-೩೬, ಬಿಜೆಪಿ-೨, ಹಾಗೂ ಇತರರು ೪ ಸ್ಥಾನಗಳಲ್ಲಿ ಗೆದ್ದಿದ್ದಾರೆ. ಬಿಜೆಪಿ ೧೬ ಸ್ಥಾನಗಳಿಗೆ ಸ್ಪಧಿಸಿತ್ತು. ರಾಜ್ಯದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಸಚಿವ ಲೋಂಬೊ ತಾಯೆಂಗ್ ಹೊರತಾಗಿ ನಿರ್ಗಮನ ಸಂಪುಟದ ಇತರೆಲ್ಲ ಸಚಿವರೂ ವಿಜಯ ಗಳಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ನಬಂ ಕುಕಿ ವಿಜಯಿಗಳಲ್ಲಿ ಸೇರಿದ್ದಾರೆ. ಆದಾಗ್ಯೂ, ೭ ಬಾರಿಯ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಗೆಗೋಂಗ್ ಅಪಾಂಗ್ ಹಾಗೂ ಅವರ ಪುತ್ರ ಒಮಕ್ ಅಪಾಂಗ್ ಸೋಲನುಭವಿಸಿದ್ದಾರೆ. ಅಪಾಂಗ್ ಎನ್‌ಸಿಪಿ ಅಭ್ಯರ್ಥಿಯೆದುರು ಸೋತರೆ ಅವರ ಪುತ್ರ ಬಿಜೆಪಿ ಅಭ್ಯರ್ಥಿಯೆದುರು ಪರಾಜಿತರಾಗಿದ್ದಾರೆ. ಮುಖ್ಯಮಂತ್ರಿಯ ನಿಕಟವರ್ತಿ ತ್ಸೆರಿಂಗ್ ಗಯುರ್ಮಿ ಪಿಪಲ್ಸ್ ಪಾರ್ಟಿ ಆಫ ಅರುಣಾಚಲ ಪ್ರದೇಶ ಅಭ್ಯರ್ಥಿಯೆದುರು ಸೋಲೊಪ್ಪಿಕೊಂಡಿದ್ದಾರೆ. 

ಹರ್ಯಾಣ: ಹರ್ಯಾಣದಲ್ಲಿ ಕಾಂಗ್ರೆಸ್ ಮಾಯಾ ಸಂಖ್ಯ ೪೬ಕ್ಕೆ ೬ ಸ್ಥಾನಗಳ ಕೊರತೆ ಅನುಭವಿಸುವುದರೊಂದಿಗೆ ರಾಜ್ಯದಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ. ಸರಕಾರ ರಚನೆಯಲ್ಲಿ ನಿರ್ಣಾಯಕರಾಗಿರುವ ಪಕ್ಷೇತರರು ೭ ಸ್ಥಾನಗಳಲ್ಲಿ ಗೆದ್ದಿದ್ದಾರೆ. ಗಮನಾರ್ಹ ಪುನರತ್ಥಾನ ಅನುಭವಿಸಿರುವ ಐ‌ಎನ್‌ಎಲ್‌ಡಿ ೯೦ ಸದಸ್ಯ ಬಲದ ಸದನದಲ್ಲಿ ೩೧ ಸ್ಥಾನ ಗಳಿಸಿದೆ. ರಾಜ್ಯದ ಸಂಪೂರ್ಣ ಫಲಿತಾಂಶ ಪ್ರಕಟವಾಗಿದ್ದು , ಕಾಂಗ್ರೆಸ್ -೪೦, ಐ‌ಎನ್‌ಎಲ್‌ಡಿ-೩೧ ಹಾಗೂ ಶಿರೋಮಣಿ ಅಕಾಲಿದಳ ಒಂದು ಸ್ಥಾನ ಗಳಿಸಿದೆ. ಉಳಿದ ೧೮ ಸ್ಥಾನಗಳಲ್ಲಿ ಪ್ರಥಮ ಪ್ರವೇಶಿಗ ಹರ್ಯಾಣ ಜನ ರಹಿತ ಕಾಂಗ್ರೆಸ್ (೬), ಬಿಜೆಪಿ (೪) ಹಾಗೂ  ಬಿ‌ಎಸ್ಪಿ(೧) ಸ್ಥಾನಗಳಲ್ಲಿ ವಿಜಯ ಗಳಿಸಿದೆ. ಕಾಂಗ್ರೆಸ್ ೨೦೦೫ರಲ್ಲಿ ಗೆದ್ದಿದ್ದ ಸ್ಥಾನಗಳಲ್ಲಿ ೨೭ನ್ನು ಕಳೆದುಕೊಂಡು ತೀವ್ರ ಹಿನ್ನಡೆ ಅನುಭವಿಸಿದ್ದರೆ, ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ನೇತೃತ್ವದ ಐ‌ಎನ್‌ಎಲ್‌ಡಿ ಕಳೆದ ಬಾರಿಯ ೯ ಸ್ಥಾನಗಳ ಸಾಧನೆ ವೃದಿಟಛಿಸಿ ಈ ಬಾರಿ ೩೧ ಸ್ಥಾನಗಳಲ್ಲಿ ಯಶಸ್ಸು ಸಾಧಿಸಿದೆ. ಈ ಸಾಧನೆಯಿಂದ ಉಬ್ಬಿರುವ ಚೌತಾಲಾ, ವಿಪಕ್ಷವನ್ನು ಮೊದಲು ಸರಕಾರ ರಚನೆಗೆ ಆಹ್ವಾನಿಸುವಂತೆ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ. ಆದರೆ ಇದೇ ವೇಳೆ, ಕಾಂಗ್ರೆಸ್ ಅಧಿಕಾರಕ್ಕೆ ಮರಳಲು ಸರ್ವ ಸನ್ನದ್ಧವಾಗಿದ್ದು, ಶಾಸಕಾಂಗ ಪಕ್ಷದ ನಾಯಕನ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆಯೆಂದು ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹೇಳಿದ್ದಾರೆ. 


Share: