ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಗಳೂರು:ದ.ಕ. ಜಿಲ್ಲಾ ರಾಜ್ಯೋತ್ಸವ: ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಶಕ್ತಿತುಂಬುವ ಕೆಲಸವಾಗಲಿ: ಸಚಿವ ಪಾಲೆಮಾರ್

ಮಂಗಳೂರು:ದ.ಕ. ಜಿಲ್ಲಾ ರಾಜ್ಯೋತ್ಸವ: ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಶಕ್ತಿತುಂಬುವ ಕೆಲಸವಾಗಲಿ: ಸಚಿವ ಪಾಲೆಮಾರ್

Mon, 02 Nov 2009 03:06:00  Office Staff   S.O. News Service
ಮಂಗಳೂರು, ನ.೧: ಉತ್ತರ, ದಕ್ಷಿಣ, ಮೂಡಣ, ತೆಂಕಣ ಎಲ್ಲದರ ಹಂಗು ತೊರೆದ ಜನಸಂಸ್ಕೃತಿ ಕಟ್ಟಬಲ್ಲ ಭಾಷೆ ಕನ್ನಡವಾಗಿದ್ದು, ಶಿಕ್ಷಣ ಸ್ವರೂಪದಲ್ಲೇ ಕನ್ನಡ ಸಂಸ್ಕೃತಿಯನ್ನು ಶಕ್ತಿಯುತವನ್ನಾಗಿಸುವ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಇನ್ನಷ್ಟು ಶಕ್ತಿ ತುಂಬುವ ಕೆಲಸವಾಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅಭಿಪ್ರಾಯಿಸಿದ್ದಾರೆ. 

ಮಂಗಳೂರಿನ ನೆಹರೂ ಮೈದಾನದಲ್ಲಿ ರವಿವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ನೆರವೇರಿಸಿದ ಬಳಿಕ ಅವರು ಜನತೆಗೆ ಸಂದೇಶ ನೀಡಿದರು. 
2-mng2.jpg
ಕನ್ನಡ ಭಾಷೆ ಇತರ ಎಲ್ಲ್ಲ ಭಾಷೆ, ಸಂಸ್ಕೃತಿಗಳನ್ನೂ ತನ್ನೊಳಗೆ ಸೇರಿಸಿಕೊಳ್ಳುವ ಉದಾತ್ತ ಭಾವ ಹೊಂದಿದೆ. ಹಾಗಾಗಿ ಇಲ್ಲಿ ವಿಜ್ಞಾನ, ತಂತ್ರಜ್ಞಾನ ಸುಪ್ತವಾಗಿ ಬೆಳೆದಿದ್ದು, ಸಾಫ್ಟ್‌ವೇರ್ ಮೂಲಕ ಕನ್ನಡ ಗಾಳಿ ವಿಶ್ವದ ದಶದಿಕ್ಕಿಗೂ ಹಬ್ಬಿದೆ. ಭಾಷೆ ಎಂದರೆ ಆಡುವುದು ಮತ್ತು ಬರೆಯುವುದು ಮಾತ್ರವಲ್ಲ ಅದು ಒಟ್ಟು ಬದುಕು ಎಂದವರು ಹೇಳಿದರು. 

ನೆರೆ ಸಂತ್ರಸ್ತರಿಗೆ ಜಿಲ್ಲೆಯಿಂದ 2 ಕೋಟಿ ರೂ.ಗಳಿಗೂ ಅಧಿಕ ನೆರವು

ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಸಂಭವಿಸಿದ ಭೀಕರ ನೆರೆಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲೆಯಿಂದ ಈವರೆಗೆ ೨ ಕೋಟಿ ರೂ.ಗಳಿಗೂ ಅಧಿಕ ಹಣದ ನೆರವಿನ ಜೊತೆಗೆ ಧಾನ್ಯ, ಆಹಾರ ವಸ್ತುಗಳನ್ನು ತಲುಪಿಸಲಾಗಿದೆ ಎಂದು ಸಚಿವ ಪಾಲೆಮಾರ್ ನುಡಿದರು. 

ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲೂ ೧೯ ಜೀವಹಾನಿ ಸಂಭವಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ತಕ್ಷಣವೇ ಪರಿಹಾರ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. 

ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ೯.೧೩ ಕೋಟಿ ರೂ. ಮೊತ್ತವನ್ನು ನಿಗದಿಗೊಳಿಸಿದ್ದು, ಬೇಸಿಗೆ ಕಾಲದ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಗೆ ೧ ಕೋಟಿ ರೂ.ಗಳನ್ನು ಸರಕಾರ ಬಿಡುಗಡೆಗೊಳಿಸಿದೆ ಎಂದರು. 
2-mng3.jpg
ಹಲವು ಯೋಜನೆಗಳಡಿ ೧೦೬.೮೫ ಕೋಟಿ ರೂ. ವೆಚ್ಚದಲ್ಲಿ ೮೩ ಗ್ರಾಮೀಣ ರಸ್ತೆ ಹಾಗೂ ಸೇತುವೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪಶ್ಚಿಮ ಘಟ್ಟ ಅಭಿವೃದ್ಧಿಗೆ ೨.೦೬ ಕೋಟಿ ರೂ. ಅನುದಾನ ನಿಗದಿಯಾಗಿದ್ದು, ಪರಿಶಿಷ್ಟ ಜಾತಿಯವರ ಕಲ್ಯಾಣಕ್ಕಾಗಿ ನಿಗದಿಪಡಿಸಲಾಗಿರುವ ಒಟ್ಟು ೯.೯೮ ಕೋಟಿ ರೂ. ಅನುದಾನದಲ್ಲಿ ೨.೪೬ ಕೋಟಿ ರೂ. ಅನುದಾನವನ್ನು ಖರ್ಚು ಮಾಡಲಾಗಿದೆ ಎಂದವರು ಹೇಳಿದರು. 

ಒ‌ಎನ್‌ಜಿಸಿ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ರೂಪಿಸಲಾಗಿರುವ ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆಯಡಿ ಒ‌ಎಂಪಿ‌ಎಲ್ ಸುಮಾರು ೪೫೦ ಎಕರೆ ಪ್ರದೇಶದಲ್ಲಿ ೬,೫೦೦ ಕೋಟಿ ರೂ. ಬಂಡವಾಳ, ಐ‌ಎಸ್‌ಪಿ‌ಆರ್‌ಎಲ್ ಸಂಸ್ಥೆ ೧೦೦ ಎಕರೆ ಪ್ರದೇಶದಲ್ಲಿ ಸಾವಿರ ಕೋಟಿ ರೂ. ಬಂಡವಾಳ ಹೂಡಲಿದೆ. ಎರಡನೆ ಹಂತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಎರಡು ಲಕ್ಷ ನೇರ ಉದ್ಯೋಗಕ್ಕೆ ಅವಕಾಶವಿದೆ. ೧೨,೪೦೦ ಕೋಟಿ ರೂ.ಗಳ ಎಂಆರ್‌ಪಿ‌ಎಲ್ ಮೂರನೆ ಹಂತದ ಘಟಕ ಕಾಮಗಾರಿ ಆರಂಭಗೊಂಡಿದ್ದು, ೨೦೦ ಎಕರೆ ಜಾಗದಲ್ಲಿ ಪುನರ್ವಸತಿಗಾಗಿ ನಿವೇಶನ, ಮುಂಬರುವ ಘಟಕಗಳಲ್ಲಿ ನಿರ್ವಸಿತರಿಗೆ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ, ತರಬೇತಿ ಸೌಲಭ್ಯವನ್ನು ನೀಡಲಾಗುವುದು ಎಂದು ಸಚಿವ ಪಾಲೆಮಾರ್ ತಿಳಿಸಿದರು.
 
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಶಾಸಕ ಯೋUಶ್ ಭಟ್, ಜಿಲ್ಲಾಧಿಕಾರಿ  ಪೊನ್ನುರಾಜ್, ಪಶ್ಚಿಮ ವಲಯ ಐಜಿಪಿ ಗೋಪಾಲ್ ಹೊಸೂರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಬ್ರಹ್ಮಣ್ಯೇಶ್ವರ ರಾವ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.
2-mng4.jpg
2-mng5.jpg
2-mng6.jpg
2-mng7.jpg
2-mng8.jpg 
ನಾನು ಯಾವ ಬಣದಲ್ಲಿಯೂ ಇಲ್ಲ: ಕೃಷ್ಣ ಪಾಲೆಮಾರ್

ರಾಜ್ಯ ರಾಜಕಾರಣದಲ್ಲಿ ಕಾಣಿಸಿಕೊಂಡಿರುವ     ಭಿನ್ನಮತದ ಕುರಿತಂತೆ ಸುದ್ದಿಗಾರರ     ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಪಾಲೆಮಾರ್, ತಾನು ಯಾವ ಬಣದಲ್ಲಿಯೂ ಇಲ್ಲ. ತಾನೊಬ್ಬ ಪಕ್ಷದ ಸಾಮಾನ್ಯ, ನಿಷ್ಠ ಕಾರ್ಯಕರ್ತ. ತಾನು     ಪಕ್ಷಕ್ಕೆ ಬದ್ಧವಾಗಿದ್ದೇನೆಯೇ ಹೊರತು ವ್ಯಕ್ತಿಗಳಿಗಲ್ಲ. ಸಣ್ಣ ಪುಟ್ಟ ವಿವಾದಗಳು ಪಕ್ಷದಲ್ಲಿ     ಎದ್ದಿವೆ. ಅದನ್ನು ನಾಯಕರು ಸರಿಪಡಿಸುತ್ತಾರೆ     ಎಂದಷ್ಟೆ ಹೇಳಿದರು.

‘ಮಾಸ್ಟರ್ ಪ್ಲಾನ್ ೨೦೨೧’ಕ್ಕೆ ಸರಕಾರದಿಂದ ಅನುಮೋದನೆ

ಮಂಗಳೂರಿನ ‘ಮಾಸ್ಟರ್ ಪ್ಲಾನ್ ೨೦೨೧’ಕ್ಕೆ     ಸರಕಾರ ಅನುಮೋದನೆ ನೀಡಿದ್ದು, ೪೯ ಕೋಟಿ ರೂ. ವೆಚ್ಚದ ಹಂಪನಕಟ್ಟೆಯ ವಾಣಿಜ್ಯ ಕಟ್ಟಡ, ಕಾರು ಪಾರ್ಕಿಂಗ್ ಮತ್ತು ಉರ್ವ ಮಾರ್ಕೆಟ್ ಅಭಿವೃದ್ಧಿ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಸಚಿವರು ತಿಳಿಸಿದರು. 


‘ತುಳು ಭಾಷೆಯ ಅಭಿವೃದ್ಧಿಗಾಗಿ ೨೧ ಕೋಟಿ ರೂ. ಬಿಡುಗಡೆಗೆ’

ತುಳುವರು ತಮ್ಮ ಸಂಸ್ಕೃತಿ, ಭಾಷೆಯ ಅಭಿವೃದ್ಧಿಗಾಗಿ ವಿಶ್ವ ತುಳು ಸಮ್ಮೇಳನವನ್ನು     ಹಮ್ಮಿಕೊಂಡಿದ್ದು, ರಾಜ್ಯ ಸರಕಾರವು ತುಳು     ಭಾಷೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಸರ್ವಸಹಕಾರ ನೀಡಲು ತೀರ್ಮಾನಿಸಿ ಈಗಾಗಲೆ ೨೧ ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಿದೆ ಎಂದು ಸಚಿವ ಪಾಲೆಮಾರ್ ಹೇಳಿದರು

Share: