ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಧಾರವಾಡ: ಗ್ರಾ.ಪಂ. ಚುನಾವಣೆ ಪೊಲೀಸ್ ಬಂದೋಬಸ್ತಿಗೆ ಕ್ರಮ -ಶ್ರೀ ಡಿ.ಪ್ರಕಾಶ್

ಧಾರವಾಡ: ಗ್ರಾ.ಪಂ. ಚುನಾವಣೆ ಪೊಲೀಸ್ ಬಂದೋಬಸ್ತಿಗೆ ಕ್ರಮ -ಶ್ರೀ ಡಿ.ಪ್ರಕಾಶ್

Mon, 19 Apr 2010 21:18:00  Office Staff   S.O. News Service

ಧಾರವಾಡ,ಏ,೧೯: ಮೇ ೧೨ರಂದು ಜಿಲ್ಲೆಯಲ್ಲಿ ನಡೆಯಲಿರುವ ೧೨೦ ಗ್ರಾ.ಪಂ. ಗಳಚುನಾವಣೆ ಶಾಂತಿಯುತವಾಗಿ ನಡೆಯಲು ಹೆಚ್ಚಿನ ಪೊಲೀಸ್ ಬಂದೋಬಸ್ತಿಗೆ ವ್ಯವಸ್ಥೆ ಮಾಡಲಾಗುತ್ತಿದೆಯೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಡಿ. ಪ್ರಕಾಶ ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

 

ಜಿಲ್ಲೆಯ ಒಟ್ಟು ೫೮೩ ಮತಗಟ್ಟೆಗಳ ಪೈಕಿ ೧೪೮ ಅತೀ ಸೂಕ್ಷ್ಮ, ೧೪೧ ಸೂಕ್ಷ್ಮ ಹಾಗೂ ೨೯೪ ಸಾಮಾನ್ಯ ಮತಗಟ್ಟೆಗಳಿದ್ದು, ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಒಬ್ಬ ಎಚ್‌ಸಿ,ಪಿಸಿ ಹಾಗೂ ಒಬ್ಬ ಹೋಮ್‌ಗಾರ್ಡ್, ಸೂಕ್ಷ್ಮ ಮತಗಟ್ಟೆಗಳಿಗೆ ಒಬ್ಬ ಎಚ್‌ಸಿ, ಪಿಸಿ, ಹಾಗೂ ಸಾಮಾನ್ಯ ಮತಗಟ್ಟೆಗೆ ಒಬ್ಬ ಪಿಸಿ ಯನ್ನು ನೇಮಕ ಮಾಡಲಾಗುವುದೆಂದು ಅವರು ಹೇಳಿದರು. ೮ ರಿಂದ ೧೦ ಮತಗಟ್ಟೆಗಳಿಗೆ ಸೆಕ್ಟರ್ ಮೊಬೈಲ್ ವ್ಯವಸ್ಥೆ ಮಾಡಲಾಗುವುದು. ಪ್ರತಿ ತಾಲೂಕಿನ ಮೇಲುಸ್ತುವಾರಿಗೆ ಡಿ‌ಎಸ್‌ಪಿ ಅವರನ್ನು ನೇಮಕ ಮಾಡಲಾಗುವುದು. ಒಟ್ಟಾರೆ ಜಿಲ್ಲೆಗೆ ೬ ಜನ ಸರ್ಕಲ್ ಇನ್ಸ್‌ಪೆಕ್ಟರ್, ೪೧ ಪಿ‌ಎಸ್‌ಐ, ೧೨೪ ಹೆಡ್‌ಕಾನ್‌ಸ್ಟೇಬಲ್, ೫೬೭ ಕಾನ್‌ಸ್ಟೇಬಲ್ ಹಾಗೂ ೬೦೦ ಹೋಮ್‌ಗಾರ್ಡ್ಸ್‌ಗಳನ್ನು ನೇಮಕ ಮಾಡುವುದರ ಜೊತೆಗೆ ೫ ಕೆ‌ಎಸ್‌ಆರ್‌ಪಿ ದಳ ಹಾಗೂ ೧೨ ಸಶಸ್ತ್ರ ಮೀಸಲು ದಳಗಳನ್ನು ನಿಯೋಜಿಸಲಾಗುವುದು. ೨೧ ರಿಂದ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಬಂದೋಬಸ್ತ್‌ಗೆ ಪ್ರತಿ ಗ್ರಾಮ ಪಂಚಾಯತಿಗೆ ಒಬ್ಬ ಕಾನ್‌ಸ್ಟೇಬಲ್ ನ್ನು ನೇಮಕ ಮಾಡಲಾಗುವುದೆಂದು ಶ್ರೀ ಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಡಿ‌ಎಸ್‌ಪಿ ಶ್ರೀ ಜಿ.ಎಸ್. ಪಾಟೀಲ ಉಪಸ್ಥಿತರಿದ್ದರು. ---

 

ಧಾರವಾಡದಲ್ಲಿ ಲಿಡ್‌ಕರ್ ಮಾರಾಟ ಮಳಿಗೆ ಪ್ರಾರಂಭೋತ್ಸವ

 

ಧಾರವಾಡ,ಏ,೧೯: ಕರ್ನಾಟಕ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಇವರು ಏಪ್ರಿಲ್ ೨೧ರಂದು ಮಧ್ಯಾಹ್ನ ೨-೩೦ಗಂಟೆಗೆ ಧಾರವಾಡ ಕೆ‌ಎಸ್‌ಆರ್‌ಟಿಸಿ ಹಳೇ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳ ಸಂಕೀರ್ಣ ನಂ.೬ರಲ್ಲಿ ಲಿಡ್‌ಕರ್ ಮಾರಾಟ ಮಳಿಗೆಯನ್ನು ಆರಂಭಿಸಲಾಗುವುದು.

ಜಿಲ್ಲಾಧಿಕಾರಿ ಶ್ರೀ ದರ್ಪಣ ಜೈನ್ ಮಾರಾಟ ಮಳಿಗೆಯನ್ನು ಉದ್ಘಾಟಿಸವರು. ಮುಖ್ಯ ಅತಿಥಿಗಳಾಗಿ ಸಿ‌ಇ‌ಓ ಶ್ರೀಮತಿ ಸಿ.ಶಿಖಾ, ಪಾಲಿಕೆಯ ಆಯುಕ್ತರಾದ ಶ್ರೀ ಪಿ.ಎಸ್. ವಸ್ತ್ರದ ಹಾಗೂ ಕೆ‌ಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಎ.ಎನ್. ಪಾಟೀಲ ಆಗಮಿಸುವರೆಂದು . ಈ ಪ್ರಾರಂಭೋತ್ಸವದ ಪ್ರಯುಕ್ತ ಅಪ್ಪಟ ಚರ್ಮದಿಂದ ತಯಾರಿಸಲ್ಪಟ್ಟ ಎಲ್ಲಾ ದಾಸ್ತಾನುಗಳ ಮೇಲೆ ಶೇ. ೧೦ ರಿಯಾಯಿತಿಯನ್ನು ಏಪ್ರಿಲ್ ೨೧ ರಿಂದ ಮೇ ೫ ರವರೆಗೆ ನೀಡಲಾಗಿದೆಯೆಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಹೊನ್ನೂರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---

 

ಸ್ವಯಂ ಸೇವಕರ ಹುದ್ದೆಗಾಗಿ ಅರ್ಜಿ ಆಹ್ವಾನ

ಧಾರವಾಡ,ಏ,೧೯: ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರವು ಧಾರವಾಡ ಜಿಲ್ಲೆಯ ೫ ತಾಲೂಕಿಗಳಿಗೆ ಇಬ್ಬರಂತೆ ಕೆಲಸ ಮಾಡಲು ರಾಷ್ಟ್ರೀಯ ಯುವ ದಳದ ಸ್ವಯಂ ಸೇವಕರ ಹುದ್ದೆಗಾಗಿ ೧ ವರ್ಷದ ಅವಧಿಗೆ ತಾತ್ಕಾಲಿಕ ಕೆಲಸ ಮಾಡಲು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ದ್ವಿತೀಯ ಪಿಯುಸಿ ಪಾಸಾದ, ೧೮-೨೫ ವರ್ಷದೊಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳು ಪ್ರತಿ ತಿಂಗಳು ೨೫೦೦/- ರೂ.ಗಳು ಗೌರವಧನ ನೀಡಲಾಗುವುದು. ಆಯಾ ತಾಲೂಕಿನ ಪಂಚಾಯತ ಕಚೇರಿಯಲ್ಲಿ ಹಾಗೂ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ನಮೂನೆಗಳನ್ನು ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಏಪ್ರಿಲ್ ೨೫ರೊಳಗಾಗಿ ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳು, ನೆಹರು ಯುವ ಕೇಂದ್ರ, ಮಿನಿ ವಿಧಾನಸೌಧ, ಧಾರವಾಡ (೦೮೩೬-೨೪೪೪೬೭೬) ಇಲ್ಲಿಗೆ ಸಲ್ಲಿಸಬೇಕೆಂದು ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನ

ಧಾರವಾಡ,ಏ,೧೯: ಸಮಗ್ರ ಕೃಷಿ ಪದ್ಧತಿ, ಬೆಳೆ ಪದ್ಧತಿಗಳು ಮತ್ತು ಬೆಳೆ ವೈವಿದ್ಧ್ಯೀಕರಣ, ಸಾವಯವ ಕೃಷಿ, ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿ ಹಾಗೂ ನೀರಿನ ಸಮರ್ಥ ಬಳಕೆ ಕುರಿತ ಗಮನಾರ್ಹ ಸಾಧನೆಗೈದ ರೈತರಿಗೆ ೨೦೦೯-೧೦ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಲಾಗುವುದು.

ನೈಸರ್ಗಿಕ ಸಂಪನ್ಮೂಲಗಳ ಸದ್ಭಳಕೆ ಮಾಡಿಕೊಂಡು ಸಾಗುವಳಿ ಮಾಡಿ ಆರ್ಥಿಕ ಉತ್ಪಾದನೆ ಬರುವಂತೆ ಬದಲಾವಣೆ ತಂದಿರುವ ರೈತರ ಆರ್ಥಿಕ ಮಟ್ಟ ಸುಧಾರಣೆಯಾಗುವಂತೆ ಸೃಜನಾತ್ಮಕ ಕಾರ್ಯದಿಂದ ರೈತ ಸಮುದಾಯದ ಶ್ರೇಯೋಭಿವೃದ್ಧಿಗೆ ಹಾಗೂ ಮಾರ್ಗದರ್ಶಕರಾಗಿ ಶ್ರಮಿಸುತ್ತಿರುವ ವ್ಯಕ್ತಿಗಳು ಪ್ರಶಸ್ತಕಿಗೆ ಅರ್ಹರಾಗಿದ್ದಾರೆ.

ಅರ್ಜಿ ನಮೂನೆಗಳನ್ನು ಸಂಬಂಧಿಸಿದ ತಾಲೂಕಾ ಸಹಾಯಕ ಕೃಷಿ ನಿರ್ದೇಶಕರು ಅಥವಾ ರೈತ ಸಂಪರ್ಕ ಕೇಂದ್ರಗಳಿಂದ ಪಡೆದು ನಾಮನಿರ್ದೇಶನದ ಪತ್ರಗಳನ್ನು ಆಯಾ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು, ಕೃಷಿವಿಶ್ವವಿದ್ಯಾಲಯಗಳ ತಜ್ಞರ ಶಿಫಾರಸ್ಸಿನೊಂದಿಗೆ ಜಂಟಿ ಕೃಷಿ ನಿರ್ದೇಶಕರು, (ವಿಸ್ತರಣೆ ಮತ್ತು ತರಬೇತಿ) ಕೃಷಿ ಆಯುಕ್ತಾಲಯ, ಶೇಷಾದ್ರಿ ರಸ್ತೆ, ಬೆಂಗಳೂರು ಇವರಿಗೆ ಮೇ ೩೧ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರನ್ನು ಸಂಪರ್ಕಿಸಲು ತಿಳಿಸಲಾಗಿದೆ.

 

ದೀರ್ಘಾವಧಿ ಆರೋಗ್ಯಕ್ಕೆ ಆಯುಷ್ ಚಿಕಿತ್ಸೆ

ಧಾರವಾಡ,ಏ,೧೯: ದೈನಂದಿನ ಬದುಕಿನಲ್ಲಿ ಗ್ರಾಮದಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಗ್ರಾಮ ನೈರ್ಮಲ್ಯದ ಬಗ್ಗೆ, ಪೌಷ್ಠಿಕ ಆಹಾರ ಸೇವನೆ ಕುರಿತು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಮತ್ತು ಉಚಿತ ಶಿಬಿರದ ಉಪಯುಕ್ತತೆ ಬಗ್ಗೆ, ಆಯುಷ್ ಚಿಕಿತ್ಸಾ ಶಿಬಿರದ ಮಹತ್ವದ ಬಗ್ಗೆ ಹನಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಶ್ರೀ. ಆರ. ಬಿ. ಕಾಂಬಳೆ ಅವರು ಮುಖ್ಯ‌ಅತಿಥಿಗಳಾಗಿ ಆಗಮಿಸಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಿದರು.

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ಜಿಲ್ಲಾ ಆಯುಷ್ ಇಲಾಖೆ, ಧಾರವಾಡ, ಗ್ರಾಮ ಪಂಚಾಯತ್ ಹಾಗೂ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಇವರ ಸಂಯುಕ್ತ ಆಶ್ರಯದಲ್ಲಿ ನವಲಗುಂದ ತಾಲೂಕು ಹನಸಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಆಯುಷ್ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು. ಈ ಶಿಬಿರವನ್ನು ಡಾ. ಸವಿತಾ ಹುಣಸಿಮರದ ಇವರು ಸಂಯೋಜಿಸಿದ್ದರು.

 

ಶಿಬಿರದ ಉದ್ಘಾಟನೆಯನ್ನು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಗಣೇಶ ಕಬಾಡೆ ಉದ್ಘಾಟಿಸಿ ಶಿಬಿರದಲ್ಲಿ ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಹೋಮಿಯೋಪತಿ, ಸಿದ್ಧ, ಯುನಾನಿ ಚಿಕಿತ್ಸೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಎನ್.ಆರ್.ಎಚ್.ಎಂ ಜಿಲ್ಲಾ ಆಯುಷ್ ನೋಡಲ್ ಅಧಿಕಾರಿಗಳಾದ ಡಾ. ಎಂ. ಡಿ. ತೋಟದ ಇವರು ಮಾತನಾಡಿ, ಭಾರತ ಹಾಗೂ ಕರ್ನಾಟಕ ಸರ್ಕಾರದಿಂದ ಆಯೋಜಿಸಲ್ಪಟ್ಟ ಆಯುಷ್ ಇಲಾಖೆ ಬಗ್ಗೆ ವಿವರವಾಗಿ ತಿಳಿಸಿದರು. ಮನೆ ಬಾಗಿಲಿಗೆ ಆಯುಷ್ ಚಿಕಿತ್ಸಾ ಶಿಬಿರಗಳು ತಲುಪಿದ್ದು, ಉಚಿತವಾಗಿ ದೊರಕುವ ಎಲ್ಲ ರೋಗಗಳ ತಪಾಸಣೆ ಹಾಗೂ ಚಿಕಿತ್ಸೆ ಮಹತ್ವ ತಿಳಿಸಿದರು. ರೋಗಗಳು ಬಂದ ಮೇಲೆ ಚಿಕಿತ್ಸೆ ಪಡೆಯುವದಕ್ಕಿಂತ ರೋಗ ಬರದಂತೆ ಹೇಗೆ ತಡೆಯಬೇಕೆಂದು ವಿವರಣೆ ನೀಡಿದರು. ಗ್ರಾಮೀಣದವರು ತಮ್ಮ ಅನಾರೋಗ್ಯದ ಬಗ್ಗೆ ಚಿಕಿತ್ಸೆ ಪಡೆಯಲು ದೂರದ ಶಹರಕ್ಕೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡುವುದಕ್ಕಿಂತ ಇಂತಹ ಉಚಿತ ಶಿಬಿರದ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು. ಮನೆಮದ್ದು - ಅಂದರೆ ಮನೆಯಲ್ಲಿ ಸಿಗುವ ಔಷಧಿ ಸಸ್ಯಗಳಿಂದ ಮನೆಯಲ್ಲಿಯೇ ಔಷಧ ತಯಾರಿಸಿ ಉಪಚರಿಸಿದಲ್ಲಿ ರೋಗಗಳನ್ನು ಪ್ರಾಥಮಿಕ ಹಂತದಲ್ಲಿಯೇ ತಡೆಯಬಹುದೆಂದು ತಿಳಿಸಿದರು. ಉದಾ : ತುಳಸಿ, ವಾಸಾ (ಅಡುಸೋಗೆ) ಅಮೃತಬಳ್ಳಿ, ಲಶೂನ್ (ಬೆಳ್ಳೊಳ್ಳಿ), ಶುಂಠಿ, ಜೀರಗಿ, ಹವೀಜ, ಸಾಸವಿ, ಲೋಳಸರ, ಗಿಡಮೂಲಿಕೆಗಳ ಬಗ್ಗೆ ಗ್ರಾಮೀಣ ಜನರಿಗೆ ತಿಳಿಸಿದರು. ನೂರಕ್ಕೆ ೮೦ರಷ್ಟು ಕಾಯಿಲೆಗಳಿಗೆ ಮನೆಮದ್ದು ಮೂಲಕ ಪರಿಹಾರ ಕಂಡು ಕೊಳ್ಳಬಹುದೆಂದರು ಡಾ. ಎಂ. ಡಿ. ತೋಟದ ತಿಳಿಸಿದರು.

ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ. ಸವಿತಾ ಹುಣಸಿಮರದ, ಡಾ. ಬಿ. ಎಸ್. ಆದಿ, ಡಾ. ಶಿವನಗೌಡರ, ಡಾ. ಪೂಜಾರ ಬಿ. ಪಿ. ಡಾ. ಕಮಲಾಕರ, ಡಾ. ರಜಪೂತ, ಡಾ. ಎಂ.ಡಿ.ತೋಟದ ಭಾಗವಹಿಸಿದ್ದರು. ವಿವಿಧ ರೋಗಗಳಿಗೆ ತಜ್ಞ ವೈದ್ಯರಿಂದ ತಪಾಸಣೆ ಹಾಗೂ ಚಿಕಿತ್ಸೆ ಕೊಡಿಸಲಾಯಿತು.

ಆರಂಭದಲ್ಲಿ ಡಾ. ಪಾತಿಮಾ ಮೂಲಿಮನಿ ಪ್ರಾರ್ಥನೆ ಮಾಡಿದರು. ಶಿಬಿರದಲ್ಲಿ ೩೦೦ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು. ಕಾರ್ಯಕ್ರಮ ನಿರೂಪಣೆ ಶ್ರೀ ಗಂಗಪ್ಪ. ಸಿದ್ದೋಜಿ ಮಾಡಿದರು. 


Share: