ಬೆಂಗಳೂರು, ಜ.೧೭: ದೇಶದ ಹಿರಿಯ ಸಿಪಿಎಂ ನಾಯಕ ಹಾಗೂ ಪಶ್ವಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸತತ ೨೩ ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಜ್ಯೋತಿ ಬಸು, ಸ್ವಯಂಸ್ಫೂರ್ತಿಯಿಂದ ತಮ್ಮ ಸ್ಥಾನವನ್ನು ತ್ಯಜಿಸಿದ್ದರು. ಅಲ್ಲದೆ, ತಮ್ಮ ಪಾಲಿಗೆ ಬಂದ ಪ್ರಧಾನಿ ಹುದ್ದೆಯನ್ನು ನಿರಾಕರಿಸಿ ಅಧಿಕಾರ ವ್ಯಾಮೋಹದ ಸಮಕಾಲೀನ ವ್ಯವಸ್ಥೆಯಲ್ಲಿ ಅಧಿಕಾರದ ಬಗ್ಗೆ ನಿರ್ಲಪ್ತತೆ ತೋರಿ ತಾವೊಬ್ಬ ಮೌಲ್ಯಗಳ ಪ್ರತಿಪಾದಕರಾಗಿ ಮೆರೆದಿದ್ದರು. ಅವರೊಬ್ಬ ಅಪರೂಪದ ತತ್ವನಿಷ್ಠ ಎಡಪಂಥೀಯ ನಾಯಕರಾಗಿದ್ದರು ಎಂದು ಯಡಿಯೂರಪ್ಪ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಎಡಪಂಥೀಯ ಸಿದ್ಧಾಂತಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಮತ್ತು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಖಚಿತವಾದ ಅಭಿಪ್ರಾಯಗಳನ್ನು ಹೊಂದಿದ್ದ ಜ್ಯೋತಿ ಬಸು ನಿಧನದಿಂದ ರಾಷ್ಟ್ರಕ್ಕೆ ಬಹುದೊಡ್ಡ ನಷ್ಟವುಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ಅವರ ಕುಟುಂಬ ವರ್ಗದವರಿಗೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಅವರು ಕೋರಿದ್ದಾರೆ.
-ಎಚ್.ಆರ್.ಭಾರದ್ವಾಜ್
ಹಿರಿಯ ಸಿಪಿಎಂ ನಾಯಕ ಜ್ಯೋತಿ ಬಸು ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರು. ದೇಶಕ್ಕೆ ಅವರ ಕೊಡುಗೆ ಅಪಾರವಾದದ್ದು. ಉತ್ತಮ ಆಡಳಿತಗಾರ, ಸರಳ, ಸಜ್ಜನಿಕೆಯ ಬಸು ರಾಜಕಾರಣಿಗಳಿಗೆ ಆದರ್ಶಪ್ರಾಯರಾಗಿದ್ದರು. ಅವರ ನಿಧನದ ಸುದ್ದಿ ದುಃಖ ತಂದಿದೆ.
-ಎಚ್.ಡಿ.ಕುಮಾರಸ್ವಾಮಿ
ಹಿರಿಯ ಸಿಪಿಎಂ ನಾಯಕ ಜ್ಯೋತಿ ಬಸು ದೇಶದಲ್ಲಿನ ಎಲ್ಲ ವರ್ಗದ ಕಾರ್ಮಿಕರ ಹಾಗೂ ಅಶಕ್ತರ ಹಕ್ಕುಗಳ ಪರ ಹೋರಾಟ ನಡೆಸಿದ್ದರು. ತಮ್ಮ ಆಡಳಿತಾವಧಿಯಲ್ಲಿ ಜಾರಿಗೆ ತಂದ ಹಲವಾರು ಯೋಜನೆಗಳು ದೇಶಕ್ಕೆ ಮಾದರಿಯಾದಂತಹದು. ರಾಜಕೀಯ ಕ್ಷೇತ್ರದ ಅತ್ಯಮೂಲ್ಯ ರತ್ನ ಅವರಾಗಿದ್ದರು.
-ಡಿ.ಕೆ.ಶಿವಕುಮಾರ್
ಸುದೀರ್ಘ ಅವಧಿಗೆ ಪಶ್ಚಿಮ ಬಂಗಾಳ ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮ ಆಡಳಿತ ಸಾಮರ್ಥ್ಯದಿಂದ ಇಡೀ ದೇಶದಲ್ಲೆ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಹಾಗೂ ಮುಖ್ಯಮಂತ್ರಿ ಎಂದರೆ ಹೇಗಿರಬೇಕೆಂದು ತೋರಿಸಿಕೊಟ್ಟ ಜ್ಯೋತಿ ಬಸು ನಿಧನದಿಂದ ದೇಶ ಒಂದು ರತ್ನವನ್ನು ಕಳೆದುಕೊಂಡಂತಾಗಿದೆ.
ಮಾರಸಂದ್ರ ಮುನಿಯಪ್ಪ
ಹಿರಿಯ ರಾಜಕಾರಣಿ ಹಾಗೂ ಐದು ಬಾರಿ ಪ.ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಅಪ್ರತಿಮ ಜನ ನಾಯಕ ಜ್ಯೋತಿ ಬಸು. ಅವರು ಒಬ್ಬ ಪ್ರಾಮಾಣಿಕ, ಹಾಗೂ ದೇಶ ಕಂಡ ಅಪರೂಪದ ನಾಯಕ.
-ಸಿಪಿಐ
ದೇಶದ ಕಮ್ಯೂನಿಸ್ಟ್ ಚಳವಳಿಯ ಹಿರಿಯ ನಾಯಕ ಜ್ಯೋತಿ ಬಸು, ದೇಶದ ಸ್ವಾತಂತ್ರ ಚಳವಳಿಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಅತಿ ಧೀರ್ಘ ಅವಧಿಗೆ ಪ.ಬಂಗಾಳದ ಮುಖ್ಯಮಂತ್ರಿಯಾಗಿ ಅವರೊಂದು ದಾಖಲೆಯನ್ನೆ ಸ್ಥಾಪಿಸಿದ್ದರು ಎಂದು ಸಿಪಿಐ ಕಾರ್ಯದರ್ಶಿ ಡಾ.ಸಿದ್ದನಗೌಡ ಪಾಟೀಲ್ ಹಾಗೂ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತ ಸುಬ್ಬರಾವ್ ತಿಳಿಸಿದ್ದಾರೆ.
ತಮ್ಮ ಆಡಳಿತಾವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬಡ ಜನರ ಜೀವನದ ಕಷ್ಟಕಾರ್ಪಣ್ಯಗಳು ಬಹು ಮಟ್ಟಿಗೆ ಕಡಿಮೆಯಾಗುವಂತಹ ಭೂ ಸುಧಾರಣೆಗಳನ್ನು ಜಾರಿಗೆ ತಂದರು. ಅವರೊಬ್ಬ ಜನ ಸಮುದಾಯದ ಜನಪ್ರಿಯ ನಾಯಕರಾಗಿದ್ದರು ಎಂದು ತಮ್ಮ ಸಂತಾಪ ಸಂದೇಶದಲ್ಲಿ ಅವರು ಹೇಳಿದ್ದಾರೆ.
-ಡಿವೈಎಫ್ಐ
ಹಿರಿಯ ಕಮ್ಯೂನಿಸ್ಟ್ ನಾಯಕ ಜ್ಯೋತಿ ಬಸು, ದೇಶದಲ್ಲಿನ ಅಸಮಾನತೆಯ ವಿರುದ್ಧ ಒಂದಾಗಿ ಮುಂದಾಗಬೇಕೆಂದು ಯುವ ಜನತೆಗೆ ಸ್ಫೂರ್ತಿ ತುಂಬುತ್ತಿದ್ದವರು. ದೇಶಾದ್ಯಂತ ಯುವಜನತೆಗೆ ಆಶಾಕಿರಣವಾಗಿದ್ದರು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರಮೂರ್ತಿ, ಬೆಂ.ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ನಾಗರಾಜ್ ಹಾಗೂ ಕಾರ್ಯದರ್ಶಿ ಲಿಂಗರಾಜ್ ತಿಳಿಸಿದ್ದಾರೆ.
ದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಯಾವುದೇ ಭ್ರಷ್ಟಾಚಾರ ಆರೋಪವಿಲ್ಲದ ಆಡಳಿತದ ಹೆಗ್ಗಳಿಕೆ ಹಾಗೂ ಕಳಂಕರಹಿತ ಆಡಳಿತ ನೀಡಿದವರು. ಭೂ ಹಂಚಿಕೆ, ಕಾರ್ಮಿಕರ ಹಕ್ಕುಗಳು ಹಾಗೂ ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ ವಿಶ್ವಕ್ಕೆ ಮಾದರಿಯಾದ ನೀತಿಗಳನ್ನು ಜಾರಿಗೆ ತಂದವರು ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
-ಎಸ್ಎಫ್ಐ
ದೇಶದ ಸಮಗ್ರತೆ, ಐಕ್ಯತೆ, ಸೌಹಾರ್ದಕ್ಕಾಗಿ ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಜ್ಯೋತಿ ಬಸು ಹಾಕಿಕೊಟ್ಟ ಮಾರ್ಗ ಅತ್ಯಂತ ಮಹತ್ತರವಾದದ್ದು. ರಾಜ್ಯದ ವಿದ್ಯಾರ್ಥಿ ಚಳವಳಿಯಲ್ಲಿ ಅವರ ಮಾರ್ಗದರ್ಶನದಂತೆ ಜವಾಬ್ದಾರಿಯನ್ನು ಕೊಂಡೊಯ್ಯುವ ಮೂಲಕ ಭಾರತ ವಿದ್ಯಾರ್ಥಿ ಫೆಡರೇಷನ್ ಅವರಿಗೆ ಗೌರವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ನನ್ಕುಮಾರ್, ಉಪಾಧ್ಯಕ್ಷ ಪ್ರಸಾದ್ ಹಾಗೂ ಕಾರ್ಯದರ್ಶಿ ಅನಂತ್ ನಾಯಕ್ ತಿಳಿಸಿದ್ದಾರೆ.