ಮಂಗಳೂರು, ಫೆಬ್ರವರಿ ೧೩: ಶ್ರೀರಾಮಸೇನೆ ಪ್ರಮುಖ ಪ್ರಮೋದ್ ಮುತಾಲಿಕ್ ರವರಿಗೆ ಮಸಿ ಬಳಿಕ ಪ್ರಕರಣವನ್ನು ವಿರೋಧಿಸಿ ಶ್ರೀರಾಮಸೇನೆ ಕರೆನೀಡಿದ್ದ ಕರ್ನಾಟಕ ಬಂದ್ ಗೆ ಅತಿನೀರಸ ಪ್ರತಿಕ್ರಿಯೆ ದೊರಕಿದೆ. ಕೆಲವು ಸ್ಥಳಗಳಲ್ಲಿ ಕಲ್ಲುತೂರಾಟ ನಡೆಸಿದ ಚಿಕ್ಕಪುಟ್ಟ ಘಟನೆ ಬಿಟ್ಟರೆ ಇಡಿಯ ರಾಜ್ಯದಲ್ಲಿ ಬಂದ್ ಯಾವುದೇ ಪರಿಣಾಮ ಬೀರಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಾದ್ಯಂತ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೆಲವೆಡೆ ಶ್ರೀರಾಮಸೇನೆಯ ಕಾರ್ಯಕರ್ತರು ಬಲವಂತವಾಗಿ ಕೆಲವು ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡಿಸಲು ಮುನ್ನುಗ್ಗಿದಾಗ ತಡೆದ ಪೋಲೀಸರು ವಶಕ್ಕೆ ಪಡೆದುಕೊಂಡು ಸುಮಾರು ನೂರು ಜನರನ್ನು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಗಳು ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ರವರ ಮನೆಯ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಕಲ್ಲುತೂರಾಟ ಅಪರಾತ್ರಿಯಲ್ಲಿ ನಡೆದಿದ್ದು ಮಾಜಿ ಸಚಿವ ವಸಂತ ಸಾಲ್ಯಾನ್ ಮನೆಗೂ ಕಲ್ಲು ಬಿದ್ದಿವೆ. ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳ ಕೆಲವು ಪ್ರಮುಖ ರಸ್ತೆಗಳ ಸಾರಿಗೆ ವ್ಯತ್ಯಯವಾಗಿತ್ತು. ಉಭಯ ನಗರಗಳ ನಡುವಣ ಬಸ್ ಸಂಚಾರಕ್ಕೆ ಶ್ರೀರಾಮಸೇನೆಯ ಕಾರ್ಯಕರ್ತರು ಕಲ್ಲುತೂರಾಟದ ಮೂಲಕ ತಡೆ ಒಡ್ಡಿದ್ದರಿಂದ ಸಂಚಾರವನ್ನು ಕೊಂಚಕಾಲ ಸ್ಥಗಿತಗೊಳಿಸಲಾಗಿತ್ತು.
ಕಲ್ಲುತೂರಾಟದ ಪರಿಣಾಮವಾಗಿ ನಾಲ್ಕು ಬಸ್ಸುಗಳು ಜಖಂಗೊಂಡಿವೆ. ಕಲ್ಲುತೂರಾಟಕ್ಕೆ ಹೆದರಿ ಕೆಲವು ಅಂಗಡಿಗಳು ಮುಚ್ಚಿದ್ದವು.
ಗದಗ ನಗರದಲ್ಲಿ ನಿನ್ನೆ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ರವರ ಪ್ರತಿಮೆಯನ್ನು ಮಲಿನಗೊಳಿಸಿದ ಬಳಿಕ ಪ್ರಕ್ಷುಬ್ದ ವಾತಾವರಣ ಉಂಟಾಗಿದ್ದರೂ ಇಂದು ಜನಜೀವನ ಎಂದಿನಂತಿದ್ದು ಬಂದ್ ಯಾವುದೇ ಪರಿಣಾಮ ಬೀರಿಲ್ಲ.