ಬೆಂಗಳೂರು, ಫೆಬ್ರವರಿ 22:ಪ್ರತಿವರ್ಷ ಏಪ್ರಿಲ್ ೨೪ ರಂದು ದಿ. ಡಾ. ರಾಜ್‌ಕುಮಾರ್ ಅವರ ಜನ್ಮ ದಿನಾಚರಣೆಯನ್ನು ಕರ್ನಾಟಕ ಸರ್ಕಾರದ ಸಮಾರಂಭವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ.
ಡಾ. ರಾಜ್‌ಕುಮಾರ್ ಪ್ರತಿಷ್ಠಾನದ ಉಪ ಸಮಿತಿ ಸಭೆಯಲ್ಲಿ ರಾಜ್ಯ ಸರ್ಕಾರವು ದಿ. ದೇವರಾಜ್ ಅರಸ್, ಜಗಜೀವನ್‌ರಾಮ್, ಕನಕ ಜಯಂತಿ ಮೊದಲಾದ ಜನ್ಮ ದಿನಾಚರಣೆಯನ್ನು ರಾಜ್ಯ ಸರ್ಕಾರದ ಸಮಾರಂಭವನ್ನಾಗಿ ಆಚರಿಸುವ ಮಾದರಿಯಲ್ಲಿ ದಿ. ಡಾ ರಾಜ್‌ಕುಮಾರ್ ಅವರ ಜನ್ಮ ದಿನಾಚರಣೆಯನ್ನು ಸಹ ರಾಜ್ಯ ಸರ್ಕಾರದ ಸಮಾರಂಭವನ್ನಾಗಿ ಆಚರಿಸಲು ತೀರ್ಮಾನಿಸಿತ್ತು.
ಡಾ. ರಾಜ್‌ಕುಮಾರ್ ಪ್ರತಿಷ್ಠಾನದ ಈ ನಿರ್ಣಯದಂತೆ ಪ್ರತಿವರ್ಷ ಏಪ್ರಿಲ್ ೨೪ ರಂದು ಡಾ. ರಾಜ್ ರವರ ಜನ್ಮ ದಿನಾಚರಣೆಯನ್ನು ಕರ್ನಾಟಕ ರಾಜ್ಯ ಸರ್ಕಾರದ ಸಮಾರಂಭವನ್ನಾಗಿ ಆಚರಿಸಬೇಕೆಂದು ಶ್ರೀ ಕಂಠೀರವ ಸ್ಟುಡಿಯೋ ವ್ಯವಸ್ಥಾಪಕ ನಿರ್ದೇಶಕರು ಕೋರಿದ್ದರು. ಅದರಂತೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.