ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ದೋಹಾ, ಕತರ್: ಕತರ್ ಜಮಾತ್ ಆಚರಿಸಿದ ಈದ್ ಮಿಲನ್ ಕಾರ್ಯಕ್ರಮ - ಪ್ರತಿಭೆಗಳ ಅನಾವರಣ

ದೋಹಾ, ಕತರ್: ಕತರ್ ಜಮಾತ್ ಆಚರಿಸಿದ ಈದ್ ಮಿಲನ್ ಕಾರ್ಯಕ್ರಮ - ಪ್ರತಿಭೆಗಳ ಅನಾವರಣ

Mon, 28 Sep 2009 02:52:00  Office Staff   S.O. News Service
ದೋಹಾ, ಕತರ್, ಸೆಪ್ಟೆಂಬರ್ ೨೭:  ರಮಧಾನ್ ತಿಂಗಳು ಕಳೆದ ಕೆಲವೇ ದಿನಗಳಲ್ಲಿ ಈದ್ ಮಿಲನ್ ಕಾರ್ಯಕ್ರಮವನ್ನು ನಗರದ ಕತರ್ ಜಮಾತ್ ಹಮ್ಮಿಕೊಂಡಿತ್ತು.  ನಗರದ ಮಾಝಾ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ನೂರುಲ್ ಅಮೀನ್ ಮಲ್ಪಾರವರು ಸಹಪ್ರಾಯೋಜಿಸಿದ್ದು ಇದೇ ಸಂದರ್ಭದಲ್ಲಿ ತಮ್ಮ ವಿವಾಹ ಮಹೋತ್ಸವವನ್ನೂ ಆಚರಿಸಿಕೊಂಡರು. ಕಾರ್ಯಕ್ರಮದಲ್ಲಿ ಜಮಾತ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
27_qatar_eidmilan_2.jpg
ಮೌಲವಿ ಪುಜೈಲ್ ಅರ್ಮಾರ್ ರವರು ಪವಿತ್ರ ಕುರಾನ್ ವಾಕ್ಯಗಳನ್ನು ಪಠಿಸುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.  ಶೌಕತ್ ಮನ್ಕವಿಯವರ ಹಮ್ದ್ ಸಂಜೆಗೆ ರಂಗುನೀಡಿತು.  ಸಂಘದ ಹಿರಿಯ ಸದಸ್ಯ ಹಾಗೂ ದೋಹಾ ನಗರದಲ್ಲಿ ಹೆಚ್ಚಿನ ಕಾಲದಿಂದ ವಾಸವಾಗಿರುವ ಫಾರೂಖ್ ಮಾಲೇಕಾ (ಮೊಹ್ತೆಶಾಮ್) ರವರು ತಮ್ಮ ಕವನವೊಂದನ್ನು ವಾಚಿಸಿ ನೆರೆದವರ ಹೃದಯ ಗೆದ್ದರು.  ಕವನ ಮಾನವನ ಅಂತಿಮಯಾತ್ರೆಯ ಕುರಿತಾಗಿದ್ದು ಆ ಯಾತ್ರೆಗೆ ನಾವು ಮಾಡಬೇಕಾದ ಸಿದ್ಧತೆಗಳನ್ನು ಕುರಿತದ್ದಾಗಿತ್ತು. ಕವನ ಮುಗಿಯುತ್ತಿದ್ದಂತೆ ನೆರೆದವರ ಕಣ್ಣಂಚಿನಲ್ಲಿ ನೀರು ಮೂಡಿತ್ತು. ಬಳಿಕ ಅವರನ್ನು ಸೂಕ್ತ ಬಹುಮಾನದಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಲವು ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಮೆರೆದರು.  ಅರ್ವಾ ಪುಜೈಲ್ ಅರ್ಮಾರ್, ಅಬೀರ್, ಅಬ್ದುಲ್ಲಾ ಅತೀಖ್ ಪೇಶ್ಮಾಮ್, ಅಬ್ದುಲ್ಲಾ ಮತ್ತು ಮೊಹಮ್ಮದ್ ಸಾಯ್ಬ್ ಬರ್ಕತ್ ಪೇಶ್ಮಾಮ್ ತಮ್ಮ ಪ್ರತಿಭೆಗಳನ್ನು ಪ್ರಕಟಿಸಿದರು.  ಭಾಗವಹಿಸಿದ ಎಲ್ಲಾ ಮಕ್ಕಳನ್ನು ಬಹುಮಾನಗಳೊಂದಿಗೆ ಪ್ರೋತ್ಸಾಹಿಸಲಾಯಿತು.  

ಬಳಿಕ ಕ್ವಿಜ್ ಮಾಸ್ಟರ್ ಮೌಲಾನಾ ಮೊಹಮ್ಮದ್ ಅಝರ್ ಅರ್ಮಾರ್ ರವರು ಚಿಕ್ಕ ಆದರೆ ಪರಿಣಾಮಕಾರಿಯಾದ ರಸಪ್ರಶ್ನೆ ಕಾರ್ಯಕ್ರಮದಿಂದ ನೆರೆದವರನ್ನು ರಂಜಿಸಿದರು.  ಮೊಹಮ್ಮದ್ ತಮೀಂ ಕಾಜಿಯಾ, ನಿಸಾರ್ ಅಹ್ಮದ್ ಅಲಿಅಕ್ಬರ್ ಹಾಗೂ ಮೊಹಮ್ಮದ್ ನಾಸಿರ್ ಮೊಹ್ತೆಶಾಮ್ ರವರು ಪ್ರಥಮ ಮೂರು ಬಹುಮಾನಗಳನ್ನು ಪಡೆದರು.  ಗುಲ್ ಮೊಹಮ್ಮದ್ ಮುಅಲ್ಲಿಮ್, ಫಾರೂಖ್ ಮೊಹ್ತೆಶಾಮ್, ಮೊಹಮ್ಮದ್ ತುಫೈಲ್ ಆಫ್ರಿಕಾ ರವರು ರ್‍ಯಾಫೆಲ್ ಡ್ರಾ ಮೂಲಕ ಬಹುಮಾನಗಳನ್ನು ಪಡೆದರು.  ಚಿನ್ನದ ನಾಣ್ಯ, ನಗದು ಬಹುಮಾನ, ಮೊಬೈಲ್ ಫೋನ್, ಗಿಫ್ಟ್ ವೋಚರ್, ಸುಗಂಧ ದ್ರವ್ಯ, ಗೃಹಬಳಕೆಯ ವಸ್ತುಗಳು ಬಹುಮಾನರೂಪದಲ್ಲಿ ಹಲವರ ಪಾಲಾದವು.

ಬಳಿಕ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಕತರ್ ಜಮಾತ್ ಕಾರ್ಯದರ್ಶಿ ಮೌಲಾನಾ ಅಬ್ದುಲ್ ಅಜೀಂ ರುಕ್ನುದ್ದೀನ್ ರವರು ಪ್ರವಾದಿಯವರ ಸಂದೇಶದಲ್ಲಿ ನೀಡಿರುವಂತೆ ಶಾಂತಿಯುವ ಜೀವನ ಸಾಗಿಸಿ ಒತ್ತಡರಹಿತ ಜೀವನ ನಡೆಸುವಂತೆ ಕರೆ ನೀಡಿದರು. ಇಂದಿನ ದಿನಗಳಲ್ಲಿ ಶಿಕ್ಷಣ ಅತ್ಯಂತ ಮಹತ್ವವುಳ್ಳದ್ದಾಗಿದ್ದು ಶಿಕ್ಷಣ ಸಂಸ್ಥೆಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ದೇಣಿಗೆ ನೀಡುವಂತೆ ಅವರು ಮನವಿ ಮಾಡಿಕೊಂಡರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಾತ್ ಉಪಾಧ್ಯಕ್ಷರಾದ ತಾಹಿರ್ ಹುಸೇನ್ ಕಾಝಿಯಾರವರು ಜಮಾತ್ ಕಾರ್ಯಕಲಾಪಗಳಲ್ಲಿ ಎಲ್ಲಾ ಸದಸ್ಯರ ಸಹಕಾರವನ್ನು ಕೋರಿದರು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಯಿತು.  ಬಹುಮಾನಗಳನ್ನು ಅಲಿ ಬಿನ ಆಲಿ ಎಸ್ಟಾಬ್ಲಿಷ್ಮೆಂಟ್ ಸಂಸ್ಥೆಯ  ಮೊಹಮ್ಮದ್ ಖಲೀಲ್ ಸಿದ್ದಿ ಅಹ್ಮದಾ ರವರು ಪ್ರಾಯೋಜಿಸಿದ್ದರು.  
27_qatar_eidmilan_3.jpg
ಕಾರ್ಯಕ್ರಮವನ್ನು ಎಸ್.ಎಂ. ಸೈಯದ್ ಜಾಕಿರ್ ರವರು ಆಯೋಜಿಸಿ ನಿರೂಪಿಸಿದರು.  ನಿಸಾರ್ ಅಹ್ಮದ್ ಅಲಿಅಕ್ಬರಾ, ಮೊಹಮ್ಮದ್ ಆಸಿಫ್ ಗವಾಯಿ, ಖಲೀಲ್ ಪಸ್ತಾರೆ ಹಾಗೂ ಶಮ್ಸು ಜುಹಾ ಅರ್ಮಾರ್ ರವರು ಕಾರ್ಯಕ್ರಮ ಸುಗಮವಾಗಿ ನಡೆಯುವಲ್ಲಿ ಸಹಕರಿಸಿದರು.


ಚಿತ್ರ, ವರದಿ: ಎಸ್.ಎಂ. ಸೈಯದ್ ಜಾಕಿರ್, ಕತರ್.

Share: