ಮಂಗಳೂರು, ಮಾ.೯: ಮಂಗಳೂರಿನ ಶ್ರೀಮಂತ ಉದ್ಯಮಿಗಳ ಬಗ್ಗೆ ಭೂಗತ ಪಾತಕಿ ರವಿ ಪೂಜಾರಿಗೆ ಮಾಹಿತಿ ನೀಡುವ ಮೂಲಕ ಹಫ್ತಾ ದಂಧೆಗಿಳಿದ ಆರೋಪ ಎದುರಿಸುತ್ತಿರುವ ಶ್ರೀರಾಮ ಸೇನೆಯ ರಾಜ್ಯ ಸಹ ಸಂಚಾಲಕ ಪ್ರಸಾದ್ ಅತ್ತಾವರನಿಗೆ ಮತ್ತೆ ಎರಡು ದಿನ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಕದ್ರಿ ಪೊಲೀಸರು ಇಂದು ನ್ಯಾಯಾಲಯಕ್ಕೆ ವಿಶೇಷ ಮನವಿ ಸಲ್ಲಿಸಿ ಹೆಚ್ಚುವರಿ ವಿಚಾರಣೆಗಾಗಿ ಆರೋಪಿ ಪ್ರಸಾದ್ ಅತ್ತಾವರನನ್ನು ಕಸ್ಟಡಿಗೆ ಒಪ್ಪಿಸುವಂತೆ ಮನವಿ ಸಲ್ಲಿಸಿದ್ದರು. ಅದರಂತೆ ನ್ಯಾಯಾಲಯ ಆರೋಪಿಯನ್ನು ಪೊಲೀಸರ ಕಸ್ಟಡಿಗೆ ಒಪ್ಪಿಸಿದೆ.
ಮಾ.೧ರ ರಾತ್ರಿ ಎಸ್‌ಪಿ ಡಾ.ಎ.ಎಸ್.ರಾವ್ ಮಾರ್ಗದರ್ಶನದಂತೆ ಪ್ರಸಾದ್ ಅತ್ತಾವರನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿತ್ತು. ಅಲ್ಲದೆ ಶ್ರೀರಾಮ ಸೇನೆ ಸಂಘಟನೆಯಲ್ಲಿದ್ದುಕೊಂಡು ಭೂಗತ ಪಾತಕಿಗಳ ಜೊತೆ ಕೈ ಜೋಡಿಸಿದ್ದನ್ನು ಖಚಿತಪಡಿಸಿಕೊಂಡಿತ್ತು. ಈತನಿಂದ ಮತ್ತಷ್ಟು ಮಾಹಿತಿ ಪಡೆಯುವ ಸಲುವಾಗಿ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಸರಕಾರದ ಷಡ್ಯಂತ್ರ:
ತನ್ಮಧ್ಯೆ ಶ್ರೀರಾಮ ಸೇನೆಯ ರಾಷ್ಟ್ರೀಯ ಮುಖಂಡ ಪ್ರಮೋದ್ ಮುತಾಲಿಕ್, ಜೈಲಿನಲ್ಲಿದ್ದ ಪ್ರಸಾದ್ ಅತ್ತಾವರನನ್ನು ಭೇಟಿಯಾ ದರು. ತದನಂತರ ಪತ್ರಕರ್ತರ ಪ್ರಶ್ನೆಗೆ ಉತ್ತ್ತರಿಸಿದ ಮುತಾಲಿಕ್, ‘ಇದು ರಾಜ್ಯ ಬಿಜೆಪಿ ಸರಕಾರದ ಕುತಂತ್ರವಾಗಿದೆ. ತಮ್ಮ ಸಂಘಟನೆಯನ್ನು ಬಗ್ಗುಬಡಿಯಲು ಬಿಜೆಪಿಗರು ಇಂತಹ ದಾರಿ ಕಂಡುಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.