ಬೆಂಗಳೂರು, ಏಪ್ರಿಲ್ ೨೬ (ಕರ್ನಾಟಕ ವಾರ್ತೆ) - ಖ್ಯಾತ ನಟ ಡಾ: ವಿಷ್ಣುವರ್ಧನ್ ಸ್ಮಾರಕನಿರ್ಮಾಣ ಮತ್ತು ನಿರ್ವಹಣೆಗೆ ಅನುಕೂಲವಾಗುವಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಡಾ: ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಪ್ರತಿಷ್ಠಾನವನ್ನು ಸರ್ಕಾರವು ರಚಿಸಿದೆ.
ವಸತಿ, ವಾರ್ತಾ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಬೆಂಗಳೂರು ಜಲಮಂಡಳಿ ಸಚಿವರು ಈ ಪ್ರತಿಷ್ಠಾನದ ಉಪಾಧ್ಯಕ್ಷರಾಗಿರುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು, ವಾರ್ತಾ ಇಲಾಖೆ ನಿರ್ದೇಶಕರು, ಶ್ರೀಮತಿ ಭಾರತಿ ವಿಷ್ಣುವರ್ಧನ್ ಅಥವಾ ಅವರ ಕುಟುಂಬದ ಪ್ರತಿನಿಧಿ, ಹಿರಿಯ ಕಲಾವಿದ ಹಾಗೂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಶ್ರೀ ಅಂಬರೀಶ್ ಈ ಪ್ರತಿಷ್ಠಾನದ ಸದಸ್ಯರಾಗಿದ್ದು ಶ್ರೀ ಕಂಠೀರವ ಸ್ಟುಡಿಯೋದ ವ್ಯವಸ್ಥಾಪಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
ಈ ಪ್ರತಿಷ್ಠಾನವು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆಗಾಗ ಸಭೆ ಸೇರಿ ಸ್ಮಾರಕ ನಿರ್ಮಾಣದ ಪ್ರಗತಿ ಅನುದಾನದ ಬಿಡುಗಡೆ ಇವುಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ.
ಡಾ: ವಿಷ್ಣುವರ್ಧನ್, ಕೆ.ಎಸ್. ಅಶ್ವಥ್ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ
ಬೆಂಗಳೂರು, ಏಪ್ರಿಲ್ ೨೬ (ಕರ್ನಾಟಕ ವಾರ್ತೆ) - ರಾಜ್ಯ ಸರ್ಕಾರವು ಪ್ರತಿವರ್ಷ ನೀಡುತ್ತಿರುವ ಚಲನಚಿತ್ರ ಕ್ಷೇತ್ರದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ದಿವಂಗತ ಡಾ: ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಹಾಗೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ದಿವಂಗತ ಕೆ.ಎಸ್. ಅಶ್ವಥ್ ಅವರ ಹೆಸರಿನಲ್ಲಿ ನೀಡಲು ಸರ್ಕಾರ ಆದೇಶ ಹೊರಡಿಸಿದೆ.