ಬೆಂಗಳೂರು, ನ.೧೨: ನಾಯಕತ್ವದ ವಿಷಯದಲ್ಲಿ ತಾರಾ-ಮಾರಾ ಕಚ್ಚಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರೆಡ್ಡಿ ಬಳಗ ಕಡೆಗೂ ನೆರೆ ಸಂತ್ರಸ್ತರ ಕುಸಿದ ಮನೆಗಳ ಮರು ನಿರ್ಮಾಣ ಕಾರ್ಯಕ್ಕೆ ಜತೆಗೂಡಿದೆ.
ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣ ಕಾಮಗಾರಿಗಳಿಗೆ ಪ್ರತ್ಯೇಕವಾಗಿ ಚಾಲನೆ ನೀಡಿದ್ದ ಸಚಿವರಾದ ಕರುಣಾಕರರೆಡ್ಡಿ, ಜನಾರ್ದನರೆಡ್ಡಿ, ಶ್ರೀರಾಮುಲು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ರಾಯಚೂರಿನಲ್ಲಿ ಒಂದೇ ವೇದಿಕೆಯಲ್ಲಿ ಒಟ್ಟಾಗಿ ಶುಕ್ರವಾರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂತ್ರಸ್ತರ ಮನೆ ನಿರ್ಮಾಣ ಕಾಮಗಾರಿ ಉದ್ಘಾಟನೆ‘ನೆಪ’ದಲ್ಲಿ ಮತ್ತೆ ಒಗ್ಗಟ್ಟು ಪ್ರದರ್ಶಿಸಲಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆ ಗುರುವಾರ ಮಾತುಕತೆ ನಡೆಸಿದ ಬಳಿಕ ಸ್ವತಃ ಪ್ರವಾಸೋದ್ಯಮ ಸಚಿವ ಜನಾರ್ದನರೆಡ್ಡಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಪ್ರಸ್ತುತ ಸರ್ಕಾರದಲ್ಲಾಗಲೀ ಅಥವಾ ಬಿಜೆಪಿಯಲ್ಲಾಗಲೀ ಯಾವುದೇ ಬಿಕ್ಕಟ್ಟು ಇಲ್ಲ. ಆದರೂ ಮಾಧ್ಯಮಗಳು ಮಾತ್ರ ಬಿಕ್ಕಟ್ಟು ಇದೆ ಎಂದು ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಜನಾರ್ದನ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಯಾವುದೇ ರಾಜಕೀಯ ವಿಚಾರ ಚರ್ಚಿಸಿಲ್ಲ.
ಈಗ ನಮ್ಮ ಮುಂದೆ ಇರುವುದು ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳ ಜನರಿಗೆ ಪುನಾವಸತಿ ಕಲ್ಪಿಸುವುದು. ಈ ಬಗ್ಗೆ ಚರ್ಚಿಸಿದ್ದು, ಶುಕ್ರವಾರ ರಾಯಚೂರಿನಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ನಾನು, ಕರುಣಾಕರ ರೆಡ್ಡಿ, ಯಡಿಯೂರಪ್ಪ, ಅನಂತಕುಮಾರ್ ಎಲ್ಲರೂ ಪಾಲ್ಗೊಳ್ಳಲಿದ್ದೇವೆ ಎಂದು ರೆಡ್ಡಿ ಸ್ಪಷ್ಟಪಡಿಸಿದರು.
ಸಂಪುಟ ಸಭೆಯಲ್ಲಿ ಭಿನ್ನಾಭಿಪ್ರಾಯ ಇರಲಿಲ್ಲ: ಬುಧವಾರ ನಡೆದ ಸಚಿವ ಸಂಪುಟ ಸಭೆ ಮಧ್ಯದಲ್ಲೇ ಎದ್ದು ಹೋದದ್ದು ಯಾವುದೇ ಭಿನ್ನಾಭಿಪ್ರಾಯದಿಂದಲ್ಲ. ನಾನು ಬಳ್ಳಾರಿಗೆ ಹೋಗಿ ೧೫ ದಿನ ಆಗಿತ್ತು. ಅಲ್ಲದೇ ಸೂರ್ಯ ಮುಳುಗುವುದರೊಳಗೆ ಹೆಲಿಕಾಪ್ಟರ್ ಹೊರಡಬೇಕಿತ್ತು. ಆ ಕಾರಣದಿಂದಾಗಿ ತುರ್ತಾಗಿ ಸಂಪುಟ ಸಭೆಯಿಂದ ಎದ್ದು ಹೋಗಬೇಕಾಯಿತು ಎಂದು ಜನಾರ್ದನರೆಡ್ಡಿ ಸ್ಪಷ್ಟಪಡಿಸಿದರು.
ಸೌಜನ್ಯ: ಕನ್ನಡಪ್ರಭ