ಬೆಂಗಳೂರು, ಎ.11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮುಗಿದ ಕೂಡಲೇ ನಂದಿನಿ ಹಾಲಿನ ದರ ಹೆಚ್ಚಿಸುವ ಮೂಲಕ ಜನತೆಗೆ ಆಘಾತ ನೀಡಿದ್ದ ರಾಜ್ಯ ಬಿಜೆಪಿ ಸರಕಾರ, ಈಗ ಕುಡಿಯುವ ನೀರಿನ ದರವನ್ನು ಹೆಚ್ಚಿಸುವ ಮೂಲಕ ಇನ್ನೊಂದು ಶಾಕ್ ನೀಡಲು ಸಿದ್ಧವಾಗಿದೆ.
ಜಲಮಂಡಳಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಕುಡಿಯುವ ನೀರಿನ ದರ ಏರಿಕೆ ಅನಿವಾರ್ಯ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಎ.15ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯಲಿರುವ ಸಭೆಯನಂತರ ಹೊರ ಬೀಳಲಿದೆ.
ನೀರಿನ ದರ ಹೆಚ್ಚಿಸುವ ಕುರಿತು ಎ.15ರಂದು ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿದಂತೆ ಇತರ ಪ್ರಮುಖರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ತನ್ನ ನಿವಾಸದ ಬಳಿ ರವಿವಾರ ಹೇಳಿದರು. ಕಳೆದ ಮೂರು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಪ್ರವಾಸದ ಸಂದರ್ಭದಲ್ಲಿ ಎಲ್ಲೂ ಕೂಡ ಕುಡಿಯುವ ನೀರಿನ ಸಮಸ್ಯೆ ಇರುವುದು ಕಂಡುಬಂದಿಲ್ಲ.
ನೀರಿನ ಸಮಸ್ಯೆ ಇದೆ ಎಂಬ ವರದಿಗಳು ಸತ್ಯಕ್ಕೆ ದೂರ ಎಂದು ಅವರು ತಿಳಿಸಿದರು.ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಎದುರಾಗ ದಂತೆ ಕ್ರಮ ಕೈಗೊಳ್ಳಲು ಹಾಗೂ ಸಮರ್ಪಕ ನೀರು ಸರಬರಾಜು ಮಾಡಲು ಜಿಲ್ಲಾಡಳಿತಕ್ಕೆ ಈಗಾಗಲೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.ಭಿನ್ನಮತವಿಲ್ಲ: ರಾಜ್ಯ ಬಿಜೆಪಿಯಲ್ಲಿ ಯಾವುದೇ ಒಡಕಾಗಲಿ ಅಥವಾ ಭಿನ್ನಮತವಾಗಲಿ ಇಲ್ಲ. ವಿರೋಧ ಪಕ್ಷಗಳ ಮುಖಂಡರು ಬಿಜೆಪಿಯಲ್ಲಿ ಭಿನ್ನಮತವಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೆಲವು ಸಚಿವರು ಪಕ್ಷದ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದಾರೆ ಎಂಬ ವಿಷಯದ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ಸೋಲು, ಗೆಲವು ಸಹಜ. ಹೀಗಿರುವಾಗ ಸಚಿವರ ಮೇಲೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಈ ಚುನಾವಣೆಯ ಫಲಿತಾಂಶ ತೃಪ್ತಿ ತಂದಿದೆ. ಮೇಯರ್ ಆಯ್ಕೆಯ ಬಗ್ಗೆ ಅಂತಿನ ನಿರ್ಧಾರವನ್ನು 2 ದಿನಗಳಲ್ಲಿ ಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಮುಂತಾದವರು ಉಪಸ್ಥಿತರಿದ್ದರು