* ಆಂಧ್ರ ಮೂಲದ ಇಂದ್ ಭಾರತ್ ಪವರ್ ಲಿಮಿಟೆಡ್ ಕಂಪನಿ ೪೫೦ ಮೆಗಾವ್ಯಾಟ್ ಸಾಮರ್ಥ್ಯದ ೩ ಘಟಕಗಳನ್ನು ಹಣಕೋಣದಲ್ಲಿ ಸ್ಥಾಪಿಸಲು ಮುಂದೆ ಬಂದಿತ್ತು. ಈ ಮೂರು ಘಟಕಗಳಲ್ಲಿ ತಲಾ ಒಂದು ಘಟಕದಲ್ಲಿ ೧೫೦ ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿತ್ತು.
* ೨೦೦೪ರಲ್ಲಿ ಹಣಕೋಣದಲ್ಲಿ ಸ್ಥಳ ಪರೀಶಿಲನೆಗೆ ಇಂದ್ ಭಾರತ್ ಪವರ್ ಕಂಪನಿ ಅಧಿಕಾರಿ ಬಂದಿದ್ದರು.
* ೨೦೦೬ರಲ್ಲಿ ಹಣಕೋಣ ಗ್ರಾಮ ಪಂಚಾಯತ್ ಮತ್ತು ಪರಿಸರ ನಿಯಂತ್ರಣ ಮಂಡಳಿಯ ಪರವಾನಗಿ ಪಡೆಯಿತು.
* ೨೦೦೮ರ ಅಕ್ಟೋಬರ್ ೨೮ ರಂದು ಪರಿಸರ ಜಾಗೃತಿ ಸಭೆ ಮೊಟ್ಟ ಮೊದಲ ಬಾರಿಗೆ ಹಣಕೋಣದ ಸಾತೇರಿ ದೇವಾಲಯದಲ್ಲಿ ನಡೆಯಿತು. ಈ ಸಭೆಯಲ್ಲಿ ಶಿರಸಿಯ ಸೋಂದಾದ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸ್ವರವತಿ ಸ್ವಾಮಿಜೀ, ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ್ ಸೇರಿದಂತೆ ಪರಿಸರ ಹೋರಾಟಗಾರರು ಸಭೆ ಸೇರಿ ಪ್ರತಿಭಟಿಸಿದ್ದರು.
* ೨೦೦೮ ಅಕ್ಟೋಬರ್ ೩೦ ರಂದು ಹಣಕೋಣದಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಗೋವಿಂದರಾಜ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಅಹವಾಲು ಆಲಿಕೆ ಸಭೆ ನಡೆಯಿತು. ಈ ಸಭೆಯಲ್ಲಿ ಸಂಸದ ಅನಂತಕುಮಾರ್ ಪಾಲ್ಗೊಂಡು ಕಂಪನಿಯನ್ನು ಇಲ್ಲಿಂದ ತೊಲಗಿಸುವ ಮಾತನಾಡಿದ್ದರು.
* ೨೦೦೯ ಜುಲೈ ೩೦ ರಂದು ಹಣಕೋಣ ವಿರೋಧಿ ಹೋರಾಟಗಾರರು ಗ್ರಾಮ ಪಂಚಾಯತ್ ತೆಗೆದುಕೊಂಡ ತೀರ್ಮಾಣದಂತೆ ಕಂಪನಿಯ ಆಸ್ತಿಯನ್ನು ಮುಟ್ಟುಗೋಲು ಹಾಕಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸ್ಥಳಕ್ಕೆ ಬಾರದಿರುವ ಬಗ್ಗೆ ಆಕ್ಷೇಪಿಸಿ ತೀವ್ರ ಪ್ರತಿಭಟನೆ ನಡೆಸಿತು. ಈ ವೇಳೆಯಲ್ಲಿ ೨ ಬಸ್ಸು, ನಾಲ್ಕು ಬೈಕ್ ಹಾಗೂ ಒಂದು ಟೆಂಪೋಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದರು. ಈ ವೇಳೆಯಲ್ಲಿ ಲಾರ್ಟಿ ಚಾರ್ಜ್, ಗಾಳಿ ಗುಂಡು, ಅಶ್ರು ವಾಯುವನ್ನು ಪೋಲೀಸರು ನಡೆಸಿದರು. ಅದೇ ದಿನ ಪ್ರತಿಭಟನಾಕಾರರನ್ನು ಪೋಲೀಸರು ಬಂಧಿಸಿದ್ದರು. ಬಂಧಿಸಲ್ಪಟ್ಟ ಪ್ರತಿಭಟನಾಕಾರರನ್ನು ಬಿಡಿಸಿಕೊಳ್ಳಲು ಹೋದವರಿಗೂ ಪೋಲೀಸ್ ಅಧಿಕಾರಿ ದೌರ್ಜನ್ಯ ನಡೆಸಿ ೮೦ ಕ್ಕೂ ಹೆಚ್ಚು ಜನರನ್ನು ಬಳ್ಳಾರಿಯ ಕಾರಾಗೃಹಕ್ಕೆ ಕಳುಹಿಸಿದ್ದರು.
* ೨೦೦೯ ಅಗಸ್ಟ್ ೧೨ ರಂದು ಕಾರವಾರದಲ್ಲಿ ಹಣಕೋಣ ಉಷ್ಣ ಸ್ಥಾವರ ವಿರೋಧಿ ಹೋರಾಟಗಾರರು ಪೋಲೀಸ್ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.
* ಅಗಸ್ಟ್ ೨೭ ರಂದು ಚಿತ್ತಾಕುಲ ಪೋಲೀಸ್ ಠಾಣೆಯಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರು ಪೋಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.
* ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಎಸೆದ ಪೋಲೀಸ್ ಅಧಿಕಾರಿಗಳ ಮೇಲೆ ಸರಕಾರ ಕ್ರಮಕೈಗೊಳ್ಳದಿರುವುದನ್ನು ಖಂಡಿಸಿ ವಿರೋಧಿ ಹೋರಾಟಗಾರರು ಕಾರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಪ್ಟಂಬರ್ ೧೦ ರಿಂದ ೨೦ ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿದ್ದರು.
* ಅಕ್ಟೋಬರ್ ೨ ರಂದು ಕಾರವಾರ ಬಂದ್ಗೆ ವಿರೋಧಿ ಹೋರಾಟಗಾರರು ಕರೆ ಕೊಟ್ಟಿದ್ದರು. ಅಂದು ಮಳೆ ಬಂದು ತೀವ್ರ ತೊಂದರೆ ಕೊಟ್ಟರು ಸುರಿಯುವ ಮಳೆಯಲ್ಲಿಯೂ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರವನ್ನು ಒತ್ತಾಯಿಸಿದ್ದರು.
* ೨೦೦೯ರ ಡಿಸೆಂಬರ್ ೧೯ ರಂದು ಖ್ಯಾತ ಪರಿಸರ ಹೋರಾಟಗಾರ್ತಿ ಮೇದಾ ಪಾಟ್ಕರ್ ಹಣಕೋಣ ಗಲಭೆ ಪೀಡಿತ ಪ್ರದೇಶಕ್ಕೆ ಬೇಟಿ ನೀಡಿದ್ದರು. ಅದೇ ದಿನ ಸಂಜೆ ಕಾರವಾರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ನಂತರ ಮಾಲಾದೇವಿ ಕ್ರೀಡಾಂಗಣದಲ್ಲಿ ಬೃಹತ್ ಪ್ರತಿಭಟನಾ ಸಭೆ ಕೂಡ ನಡೆಸಿದ್ದರು.
ಚಿತ್ರ, ವರದಿ: ಕಡತೋಕಾ ಮಂಜು,ಕಾರವಾರ.