ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ತಾರಕಕ್ಕೇರಿದ ಅಧಿಕಾರಿಗಳ ವರ್ಗಾವರ್ಗಿ - ಕೆಲವರಿಗೆ ಎರೆಡೆರೆಡು ವರ್ಗಾವಣೆಗಳ ಸೌಭಾಗ್ಯ

ಬೆಂಗಳೂರು: ತಾರಕಕ್ಕೇರಿದ ಅಧಿಕಾರಿಗಳ ವರ್ಗಾವರ್ಗಿ - ಕೆಲವರಿಗೆ ಎರೆಡೆರೆಡು ವರ್ಗಾವಣೆಗಳ ಸೌಭಾಗ್ಯ

Sat, 14 Nov 2009 03:06:00  Office Staff   S.O. News Service
ಬೆಂಗಳೂರು, ನ.13 :ರೆಡ್ಡಿ ಬಳಗದ ‘ಹುಕುಂ’ನಂತೆ ಅಧಿಕಾರಿಗಳ ವರ್ಗಾವರ್ಗಿ ಪರ್ವ ಮುಂದುವರಿದಿದ್ದು, ಶುಕ್ರವಾರ ತಾರಕಕ್ಕೆ ಮುಟ್ಟಿತ್ತು. 
ಇದರಿಂದಾಗಿ ಹಿರಿಯ ಐ‌ಎ‌ಎಸ್ ಅಧಿಕಾರಿಗಳು ‘ಫುಟ್‌ಬಾಲ್’ ಆಗಿದ್ದು, ಕೆಲವರು ಎರಡೇ ವಾರದಲ್ಲಿ ಎರಡು- ಮೂರು ಬಾರಿ ವರ್ಗಾವಣೆಯ ‘ಸೌಭಾಗ್ಯ’ ಕಂಡಿದ್ದಾರೆ. ಒಂದೇ ದಿನದಲ್ಲಿ ೧೩ ಐ‌ಎ‌ಎಸ್, ೫ ಐಪಿ‌ಎಸ್, ೯ ಐ‌ಎಫ್‌ಎಸ್ ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. 

ರೆಡ್ಡಿ ಬಳಗದ ಆಪ್ತರೆಂಬ ಹಣೆಪಟ್ಟಿಗೆ ಒಳಗಾಗಿರುವ ಪೆರುಮಾಳ್ ಎರಡನೇ ಬಾರಿಗೆ ವರ್ಗಾವಣೆಗೊಂಡಿದ್ದರೆ, ರೆಡ್ಡಿ ಬಳಗದ ಅವಕೃಪೆಗೆ ಪಾತ್ರರಾಗಿರುವ ಎಂ. ಮದನ್ ಗೋಪಾಲ್ ಮತ್ತೆ ಎತ್ತಂಗಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಆಹಾರ ಮತ್ತು ನಾಗರಿಕ ಇಲಾಖೆಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬಂದಿದ್ದ ಮದನ್‌ಗೋಪಾಲ್ ಮತ್ತೆ ಆಹಾರ ಮತ್ತು ನಾಗರಿಕ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಐ.ಆರ್. ಪೆರುಮಾಳ್ ಅವರು ಆಹಾರ ಮತ್ತು ನಾಗರಿಕ ಇಲಾಖೆಯಿಂದ ಈಗ ರೇಷ್ಮೆ ಅಭಿವೃದ್ಧಿ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಕಂಡಿದ್ದಾರೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಅವರನ್ನು ಕಿರು ನೀರಾವರಿ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. 
ಮದನ್‌ಗೋಪಾಲ್ ಹುದ್ದೆಗೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ| ಇ.ವಿ. ರಮಣ ರೆಡ್ಡಿ ಅವರನ್ನು ಮತ್ತು ಶ್ರೀನಿವಾಸಾಚಾರಿ ಅವರ ಹುದ್ದೆಗೆ ಸಹಕಾರಿ ಸಂಘಗಳ ರಿಜಿಸ್ಟ್ರಾರ್ ಡಿ.ಎನ್. ನಾಯಕ್ ಅವರನ್ನು ವರ್ಗಾ ಮಾಡಲಾಗಿದೆ. ಅಲ್ಲದೆ, ರಾಯಚೂರು ಡಿಸಿ ಅದೋನಿ ಸಯ್ಯದ್ ಸಲೀಮ್‌ರನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ ಎಂಡಿಯಾಗಿ ನೇಮಿಸಲಾಗಿದೆ.   

ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಂಬು ಕುಮಾರ್ ಅವರನ್ನು ಗುಲ್ಬರ್ಗ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 

ವರ್ಗಾವಣೆ ಆದೇಶ ರದ್ದು: ಇದಲ್ಲದೇ ಇತ್ತೀಚೆಗಷ್ಟೆ ಶಿವಮೊಗ್ಗದಿಂದ ಹಾವೇರಿ ಎಸ್.ಪಿ.ಯಾಗಿ ವರ್ಗಾವಣೆಗೊಂಡಿದ್ದ ಎಸ್. ಮುರುಗನ್ ಅವರ ವರ್ಗಾವಣೆ ಆದೇಶವನ್ನು ತಡೆಹಿಡಿದು, ಅವರನ್ನು ಶಿವಮೊಗ್ಗ ಎಸ್.ಪಿ.ಯಾಗಿ ಮುಂದುವರೆಸಲಾಗಿದೆ. 
ಶಿವಮೊಗ್ಗ ಎಸ್.ಪಿ.ಯಾಗಿ ವರ್ಗಾವಣೆಯಾಗಿದ್ದ ಡಾ| ಡಿ.ಸಿ. ರಾಜಪ್ಪ ಅವರನ್ನು ಮತ್ತೆ ರೈಲ್ವೇಸ್ ಎಸ್.ಪಿ.ಯಾಗಿ ವರ್ಗಾವಣೆ ಮಾಡಲಾಗಿದೆ. ಬಳ್ಳಾರಿ ಡಿಸಿ‌ಎಫ್ ಹುದ್ದೆಯಿಂದ ಎತ್ತಂಗಡಿಯಾಗಿದ್ದ ಬಿಸ್ವಜಿತ್ ಅವರಿಗೆ ಚಾಮರಾಜನಗರ ಡಿಸಿ‌ಎಫ್ ಹುದ್ದೆಯನ್ನು ನೀಡಲಾಗಿದೆ. 

ಯಾರು ಎಲ್ಲಿಗೆ? 
ಐ‌ಎ‌ಎಸ್ ಅಧಿಕಾರಿಗಳು: ಎಂ.ಎನ್. ವಿಜಯಶಂಕರ್- ಅಧ್ಯಕ್ಷರು, ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿ. 
ವಂದಿತಾ ಶರ್ಮಾ- ವ್ಯವಸ್ಥಾಪಕ ನಿರ್ದೇಶಕರು, ರಾಜ್ಯ ಕೈಗಾರಿಕಾ ಬಂಡವಾಳ ಮತ್ತು ಅಭಿವೃದ್ಧಿ ನಿಗಮ. 
ಶಂಭು ದಯಾಳ್ ಮೀನಾ- ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ. 
ಡಿ.ಎನ್. ನಾಯಕ್- ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು. 
ಸಂಧ್ಯಾ ವೇಣುಗೋಪಾಲ್ ಶರ್ಮಾ- ಹೆಚ್ಚುವರಿ ಕಾರ್ಯದರ್ಶಿ ಮತ್ತು ಸರ್ವ ಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕರು. ರಶ್ಮಿ ವಿ. ಮಹೇಶ್- ಹೆಚ್ಚುವರಿ ಆಯುಕ್ತರು, ಅಬಕಾರಿ, ಬೆಂಗಳೂರು. 
ಎಸ್. ಸೆಲ್ವಕುಮಾರ್- ಯೋಜನಾ ನಿರ್ವಹಣಾಧಿಕಾರಿ ಕೆ‌ಎಚ್‌ಎಸ್‌ಡಿ‌ಆರ್‌ಪಿ ಮತ್ತು ಜಂಟಿ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಹೆಚ್ಚುವರಿಯಾಗಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯ ಯೋಜನಾ ನಿರ್ದೇಶಕ ಹುದ್ದೆ. 
ಐಪಿ‌ಎಸ್ ಅಧಿಕಾರಿಗಳು: ಡಾ| ರಾಜವೀರ್ ಪ್ರತಾಪ್ ಶರ್ಮಾ- ಐಜಿಪಿ, ಯೋಜನೆ- ಆಧುನೀಕರಣ, ಬೆಂಗಳೂರು. 
ಅಮರ್‌ಕುಮಾರ್ ಪಾಂಡೆ- ಐಜಿಪಿ, ಆಂತರಿಕ ಭದ್ರತಾ ವಿಭಾಗ. 
ಜಯಪ್ರಕಾಶ್ ವಿ. ನಾಯಕ್- ಐಜಿಪಿ, ಕುಂದುಕೊರತೆ ಹಾಗೂ ಮಾನವಹಕ್ಕುಗಳು, ಬೆಂಗಳೂರು. 
ಪಿ. ಮುನಿಸ್ವಾಮಿ- ಎಸ್.ಪಿ, ಎಚ್ ಅಂಡ್ ಬಿ, ಸಿ‌ಐಡಿ. 
ಡಿ. ರೂಪಾ- ಎಸ್.ಪಿ, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು. 
ಇವರಲ್ಲದೆ, ನಾಜೀರ್ ಅಹಮದ್ ಅವರನ್ನು ಉಪ ಕಮಾಂಡೆಂಟ್, ಹೋಮ್ ಗಾರ್ಡ್ಸ್ ಮತ್ತು ಉಪ ನಿರ್ದೇಶಕ, ಸಿವಿಲ್ ಡಿಫೆನ್ಸ್ ಹುದ್ದೆಗೆ ವರ್ಗ ಮಾಡಲಾಗಿದೆ. 

೮ ಐ‌ಎಫ್‌ಎಸ್ ಅಧಿಕಾರಿಗಳಿಗೆ ಮುಂಬಡ್ತಿ: ಎಂಟು ಮಂದಿ ಐ‌ಎಫ್‌ಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ. ಅವರು- ಡಿಸಿ‌ಎಫ್ ಪ್ರಬೋಷ್ ಚಂದ್ರ ರೇ- ನಿರ್ದೇಶಕರು (ಯೋಜನೆ) ಜೆ‌ಎಸ್‌ವೈ‌ಎಸ್. 
ಮಹೇಶ್ ಬಿ. ಶಿರೂರ್- ಕಾರ್ಯಕಾರಿ ನಿರ್ದೇಶಕ, ಚಾಮರಾಜನಗರ ಮೃಗಾಲಯ. 
ಸ್ಮಿತಾ ಬಿಜೂರ್- ಕಾರ್ಯದರ್ಶಿ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ. 
ಎನ್.ಎಲ್. ಶಾಂತಾ ಕುಮಾರ್- ಅರಣ್ಯ ಸಂರಕ್ಷಣಾಧಿಕಾರಿ, ಬಿಬಿ‌ಎಂಪಿ. 
ಶ್ರೀಕಾಂತ್ ವಿ. ಹೊಸೂರ್- ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂರಕ್ಷಣೆ, ಬೆಂಗಳೂರು. 
ಬಿ.ಎಂ. ಪರಮೇಶ್ವರ್- ಕಾರ್ಯಕಾರಿ ನಿರ್ದೇಶಕ, ರಾಜ್ಯ ಕರಕುಶಲ ವಸ್ತುಗಳ ಅಭಿವೃದ್ಧಿ ನಿಗಮ. 
ಕೆ.ಬಿ. ಮಾರ್ಕಂಡೇಯ- ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ವಲಯ. 
ವಿಜಯ ರಂಜನ್ ಸಿಂಗ್- ಉಪ ಅರಣ್ಯ ಸಂರಕ್ಷಣಾಧಿಕಾರಿ, ಹುಣಸೂರು ವನ್ಯಜೀವಿ ವಿಭಾಗ. 
ಆರೋಗ್ಯ ಇಲಾಖೆಯಿಂದ ಮದನ್‌ಗೋಪಾಲ್, ಶ್ರೀನಿವಾಸಾಚಾರಿ ಎತ್ತಂಗಡಿ 
ಆಹಾರ ಇಲಾಖೆಯಲ್ಲಿದ್ದ ಪೆರುಮಾಳ್ ರೇಷ್ಮೆ ಇಲಾಖೆಗೆ 
ಶಿವಮೊಗ್ಗಕ್ಕೆ ಎಸ್‌ಪಿಯಾಗಿ ಮುರುಗನ್ ವಾಪಸ್ 
ಬಳ್ಳಾರಿಯಿಂದ ಶಿವಮೊಗ್ಗಕ್ಕೆ ಬಂದಿದ್ದ ಎಸ್ಪಿ ರಾಜಪ್ಪ ರೈಲ್ವೇಸ್‌ಗೆ ಎತ್ತಂಗಡಿ


ಸೌಜನ್ಯ: ಕನ್ನಡಪ್ರಭ

Share: