ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಅಕ್ರಮ-ಸಕ್ರಮ ವಾಪಸ್ , ಕಾಂಗ್ರೆಸ್ ಪಕ್ಷದ ಕೈವಾಡ - ಯಡಿಯೂರಪ್ಪ ಆರೋಪಕ್ಕೆ ದೇಶಪಾಂಡೆ ಕಿಡಿ

ಬೆಂಗಳೂರು: ಅಕ್ರಮ-ಸಕ್ರಮ ವಾಪಸ್ , ಕಾಂಗ್ರೆಸ್ ಪಕ್ಷದ ಕೈವಾಡ - ಯಡಿಯೂರಪ್ಪ ಆರೋಪಕ್ಕೆ ದೇಶಪಾಂಡೆ ಕಿಡಿ

Sun, 17 Jan 2010 03:19:00  Office Staff   S.O. News Service
ಬೆಂಗಳೂರು,ಜನವರಿ 16:ಅಕ್ರಮ ಸಕ್ರಮ  ಸುಗ್ರೀವಾಜ್ಞೆಯನ್ನು ವಾಪಸ್ಸ್ ಕಳುಹಿಸುವರ  ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡವಿದೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರೋಪಕ್ಕೆ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಈ ಯೋಜನೆಯ ಬಗ್ಗೆ ಆಡಳಿತಾರೂಡ  ಬಿಜೆಪಿ ಗೊಂದಲ ಸೃಷ್ಠಿಸಿದೆ ಎಂದು ಹರಿಹಾಯ್ದಿದ್ದಾರೆ. 
ಅಕ್ರಮ ಸಕ್ರಮ ಸುಗ್ರೀವಾಜ್ಞೆ ವಾಪಸಾತಿಯಿಂದೆ ಕಾಂಗ್ರೆಸ್ ಕೈವಾಡವಿದೆ ಎನ್ನುವುದನ್ನ ಮುಖ್ಯಮಂತ್ರಿ ಯಡಿಯೂರಪ್ಪ ಸಾಬೀತುಪಡಿಸಲಿ ಅದುಬಿಟ್ಟು  ಸುಮ್ಮನೆ ಆರೋಪ  ಮಾಡುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ  ಹೇಳಿದರು.  
 
ಅಕ್ರಮ  ಸಕ್ರಮ ಯೋಜನೆ ಜಾರಿಯಾಗಬೇಕು ಎನ್ನುವುದು ಕಾಂಗ್ರೆಸ್ ಪಕ್ಷದ ಆಶಯ. ಈ ಹಿಂದೆಯೇ ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಜಾರಿಗೆ ಕಾಂಗ್ರೆಸ್ ಪಕ್ಷ ಪ್ರಯತ್ನ ನಡೆಸಿತ್ತು ಎಂದರು.  
 
ಅಕ್ರಮ ಸಕ್ರಮ ಯೋಜನೆ ಅತ್ಯಂತ  ಪಾರದರ್ಶಕವಾಗಿ ಕಾನೂನಿನ  ಚೌಕಟ್ಟಿನ ಒಳಗೆ ಜಾರಿಯಾಗಬೇಕಾಗಿದೆ.  ಮನಸೋ‌ಇಚ್ಚೆ ಯೋಜನೆಯನ್ನು ಜಾರಿಮಾಡುವುದು ಸರಿಯಲ್ಲ ಎಂದರು.  
ಅಕ್ರಮ ಸಕ್ರಮ ಯೋಜನೆಯನ್ನು ಜಾರಿಮಾಡುವ ಇಚ್ಚಾಶಕ್ತಿ ಬಿಜೆಪಿ ಸರ್ಕಾರಕ್ಕೆ ಇಲ್ಲ ಎಂದು ದೂರಿದ  ಅವರು ಬಿಬಿ‌ಎಂಪಿ ಚುನಾವಣೆಯ  ಮೇಲೆ ಕಣ್ಣಿಟ್ಟು ತರಾತುರಿಯಲ್ಲಿ ಯೋಜನೆಗೆ  ಮುಂದಾದದ್ದು ಚುನಾವಣಾ ಸ್ಟಂಟ್ ಎಂದು ಟೀಕಿಸಿದರು. 
 
ಈ ಸರ್ಕಾರಕ್ಕೆ ಅಕ್ರಮ  ಸಕ್ರಮ ಯೋಜನೆಯನ್ನ  ಜಾರಿಮಾಡುವ ಮನಸ್ಸು  ಇದ್ದಿದ್ದರೆ ಅಧಿಕಾರಕ್ಕೆ  ಬಂದ ೧೮ ತಿಂಗಳು ಸುಮ್ಮನಿದ್ದು,  ಬಿಬಿ‌ಎಂಪಿ. ಚುನಾವಣ ನೀತಿ ಸಂಹಿತೆ  ಜಾರಿಗೆ ಬರುವ ಸಮಯದಲ್ಲೇ  ಯೋಜನೆಯ ಜಾರಿಗೆ ಮುಂದಾದದ್ದು  ಮತದಾರರನ್ನು ಒಲೈಸುವ ತಂತ್ರ ಎಂದು ಆರೋಪಿಸಿದರು.  
 
ಮುಂಬರುವ ಬಿಬಿ‌ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ  ಮಾಡಿಕೊಳ್ಳದೆ ಏಕಾಂಗಿಯಾಗಿ ೧೯೮ ವಾರ್ಡ್‌ಗಳಲ್ಲೂ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಿದೆ ಎಂದು ಸ್ವಷ್ಟಪಡಿಸಿದರು.  
 
ಅಕ್ರಮ: ಬಿಬಿ‌ಎಂಪಿ ತರಾತುರಿಯಲ್ಲಿ ೩೪೦೦ ಕೋಟಿ ರೂ ಮೊತ್ತದ ಗುತ್ತಿಗೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರುವುದು ಅಕ್ರಮ ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ದೂರು ನೀಡಲಾಗಿದೆ ಎಂದು ಅವರು ಹೇಳಿದರು.  
 
ಕಳಸ  ಬಂಡೂರಿ ನಾಲಯೋಜನೆ ಅನುಷ್ಠಾನ  ಸಂಬಂಧ ಚರ್ಚೆ ನಡೆಸಲು  ಸರ್ವ ಪಕ್ಷಗಳ  ನಿಯೋಗಕ್ಕೆ ಅವಕಾಶ ನೀಡದ ಪ್ರಧಾನಿ ವಿರುದ್ಧ ಟೀಕೆ ಮಾಡಿರುವುದು ಸರಿಯಲ್ಲ. ಪ್ರಧಾನಿಯವರ ಕಾರ್ಯ ಒತ್ತಡದ ಕಾರಣ ಸಮಯ ನಿಗದಿಯಾಗಿಲ್ಲ.  ಹಾಗಾಗಿ ಇದಕ್ಕೆ ನಾನಾ ಅರ್ಥಗಳನ್ನು ಕಲ್ಪಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು. 

Share: