ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಉತ್ತಮ ಪ್ರೋತ್ಸಾಹದ ಹೊರತಾಗಿಯೂ ಉತ್ತಮ ಕ್ರೀಡಾಪಟುಗಳು ಹೊರಬರುತ್ತಿಲ್ಲ - ಜೆಡಿ ನಾಯ್ಕ ಕಾಳಜಿ

ಭಟ್ಕಳ: ಉತ್ತಮ ಪ್ರೋತ್ಸಾಹದ ಹೊರತಾಗಿಯೂ ಉತ್ತಮ ಕ್ರೀಡಾಪಟುಗಳು ಹೊರಬರುತ್ತಿಲ್ಲ - ಜೆಡಿ ನಾಯ್ಕ ಕಾಳಜಿ

Tue, 24 Nov 2009 02:40:00  Office Staff   S.O. News Service
ಭಟ್ಕಳ, ನೆವೆಂಬರ್ 23: ನಮ್ಮಲ್ಲಿ ಶಿಕ್ಷಣಕ್ಕೆ ಕ್ರೀಡೆಗೆ ಸದಾ ಪ್ರೋತ್ಸಾಹವನ್ನು ನೀಡುತ್ತಾ ಬರಲಾಗಿದೆ. ಕೇಂದ್ರ ಸರಕಾರ ಕ್ರೀಡೆಗೆ ಉತ್ತಮ ಪ್ರೋತ್ಸಾಹವನ್ನು ನೀಡುತ್ತಿದ್ದರೂ ಕೂಡಾ ನಮ್ಮಲ್ಲಿ ಉತ್ತಮ ಕ್ರೀಡಾಪಟುಗಳು ಹೊರ ಹೊಮ್ಮುತ್ತಿಲ್ಲ ಎಂದು ಶಾಸಕ ಜೆ.ಡಿ. ನಾಯ್ಕ ಹೇಳಿದರು.
 
24-bkl1.jpg
24-bkl2.jpg
24-bkl3.jpg
 
ಅವರು ಇಲ್ಲಿನ ಆನಂದಾಶ್ರಮ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

ಭಟ್ಕಳದಲ್ಲಿ ಪ್ರಪ್ರಥಮ ಆಂಗ್ಲ ಮಾಧ್ಯಮ ಶಾಲೆಯಾಗಿ ಹೊರ ಹೊಮ್ಮಿದ ಕಾನ್ವೆಂಟ್ ಶಾಲೆ ಅನೇಕ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದೆ. ಇಂದು ನಾವು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ಮುಖ್ಯ. ಶಿಕ್ಷಣದ ಉನ್ನತೀಕರಣವಾಗಬೇಕು ಎಂದೂ ಹಾರೈಸಿದರು.

ಪಾಲಕರು-ಶಿಕ್ಷಕರು-ವಿದ್ಯಾರ್ಥಿಗಳ ಸಂಬಂಧ ಉತ್ತಮವಿರಬೇಕು ಎಂದ ಅವರು ಪಾಲಕರು, ವಿಶೇಷವಾಗಿ ತಾಯಂದಿರು ತಮ್ಮ ಮಕ್ಕಳ ಶಿಕ್ಷಣ ಮಟ್ಟದ ಕುರಿತು ಗಮನ ನೀಡಬೇಕು ಎಂದೂ ಕರೆ ನೀಡಿದರು.
24-bkl7.jpg
24-bkl6.jpg
24-bkl8.jpg
24-bkl9.jpg
24-bkl10.jpg
24-bkl11.jpg
 
ಕಳೆದ ಅನೇಕ ವರ್ಷಗಳಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆ ಮುಂದೆ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸುವಂತೆ ಅವರು ಒತ್ತಾಯಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸಿ. ತಾಂಡೇಲ್ ಅವರು ನಾವಿಂದು ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಮಕ್ಕಳಿಗೆ ಪರಿಸರ ಶಿಕ್ಷಣವೂ ಕೂಡಾ ಮಹತ್ವದ್ದಾಗಿದೆ ಎಂದರು.

ಕ್ರೀಡಾ ಕೂಟದಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯಕ್ಕೆ ಪೂರಕವಾಗುವುದು ಎಂದು ಅವರು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿ ರಾಷ್ಟ್ರೀಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಭಟ್ಟ ಅವರು ಭಟ್ಕಳದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಕಾನ್ವೆಂಟ್ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕಾನ್ವೆಂಟ್ ಶಿಕ್ಷಣವೆಂದರೆ ಕೇವಲ ಶ್ರೀಮಂತರ ಮಕ್ಕಳಿಗೆ ಎನ್ನುವ ಭಾವನೆ ಜನರಲ್ಲಿತ್ತು. ಆದರೆ ಭಟ್ಕಳದ ಕಾನ್ವೆಂಟ್ ಶಾಲೆಯಲ್ಲಿ ಓರ್ವ ಸಾಮಾನ್ಯ ವಿದ್ಯಾರ್ಥಿಯೂ ಕೂಡಾ ಶಿಕ್ಷಣ ಪಡೆಯುತ್ತಿರುವುದು ಜನರಲ್ಲಿಯ ಆ ಭಾವನೆಯನ್ನು ದೂರ ಮಾಡಿದೆ ಎಂದರು.

ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಆಗಾಗ ವಿಚಾರಿಸುತ್ತಿರುವುದರೊಂದಿಗೆ ಅವರ ಚಟುವಟಿಕೆಗಳನ್ನು ಕೂಡಾ ಗಮನಿಸುತ್ತಿರಬೇಕು ಎಂದೂ ಅವರು ಕರೆ ನೀಡಿದರು.

ಮುಖ್ಯ ಅತಿಥಿ ಫಾ. ಅಲ್ಪಾನ್ಸೋ ಮೊರಸ್ ಅವರು ಮಾತನಾಡಿ ನಾವು ಸತ್ಯವನ್ನು ಅನ್ವೇಷಣೆ ಮಾಡಬೇಕು. ಓರ್ವ ಬಾಲಕನಿಗೆ ವಿದ್ಯೆಯನ್ನು ನೀಡುವುದು ಸಾಮಾನ್ಯದ ಕೆಲಸವಲ್ಲ. ಕಠಿಣ ಪರಿಶ್ರಮದಿಂದ ಮಾತ್ರ ವಿದ್ಯೆಯನ್ನು ಕಲಿಯಲು ಸಾದ್ಯ ಎಂದರು.
 
ವೇದಿಕೆಯಲ್ಲಿ ಕಾನ್ವೆಂಟ್ ಸಂಸ್ಥೆಯ ಮುಖ್ಯಸ್ಥೆ ಸಿಸ್ಟರ್ ಲೋರಾ, ಶಾಲಾ ಮುಖ್ಯಾಧ್ಯಾಪಿಕೆ ಸಿಸ್ಟರ್ ಲೊಸೆಲ್ಲಾ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳೇ ಕಾರ್ಯಕ್ರಮ ನಿರ್ವಹಿಸಿ, ಶಾಲಾ ವರದಿಯನ್ನು ಮಂಡಿಸಿದರು. ಕೊನೆಯಲ್ಲಿ ವಂದಿಸಿದರು.

ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಜರುಗಿತು.


Share: