ಭಟ್ಕಳ, ನವೆಂಬರ್ 1:ನಾಡು ನುಡಿ ಕನ್ನಡ ಕಳೆದು ಹೋಗುತ್ತಿರುವ ಕಳವಳ ಒಂದೆಡೆ ಪಸರಿಸುತ್ತಿರುವಂತೆಯೇ, ಕನ್ನಡಿಗರ ಜವಾಬ್ದಾರಿಯನ್ನು ನೆನಪಿಸಿ ಕೊಡುವ ಕನ್ನಡಮ್ಮನ ಹಬ್ಬ ‘ಕರ್ನಾಟಕ ರಾಜ್ಯೋತ್ಸವ’ ಆಚರಣೆಯನ್ನು ಇಲ್ಲಿಯ ಶಾಲೆಯೊಂದು ಕೈ ಬಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಭಟ್ಕಳ ಬಂದರ ಪ್ರೌಢ ಶಾಲೆಯೇ ರಾಜ್ಯೋತ್ಸವ ಆಚರಣೆಯಿಂದ ನುಣುಚಿಕೊಂಡ ಆರೋಪವನ್ನು ಎದುರಿಸುತ್ತಿದ್ದು, ಶಾಲೆಯ ಮುಖ್ಯೋಪಾಧ್ಯಾಯರ ಅಸಡ್ಡೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ಕುರಿತು ಶಾಲೆಯ ನಡವಳಿಕೆಯ ಬಗ್ಗೆ ಕೆಲ ಕನ್ನಡಾಭಿಮಾನಿಗಳು ಮುಂಜಾವಿನೊಂದಿಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಘಟನೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಕನ್ನಡ ರಾಜ್ಯೋತ್ಸವ ಆಚರಣೆ ಪ್ರತಿಯೊಂದು ಶಾಲೆಯ ಜವಾಬ್ದಾರಿ. ಶಾಲೆಯಲ್ಲಿ ರಾಜ್ಯೋತ್ಸವ ಆಚರಣೆಯನ್ನು ಕೈ ಬಿಟ್ಟಿರುವ ಮಾಹಿತಿ ತಮಗೆ ಲಭಿಸಿದ್ದು, ಈ ಕುರಿತು ಸಂಪೂರ್ಣ ವಿವರಗಳನ್ನು ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕಲಿಸ ಬೇಕಾದವರೇ ಕನ್ನಡಕ್ಕೆ ಕೈ ಕೊಟ್ಟರೆ ಉಳಿದವರು ಅದ್ಹೇಗೆ ಗೌರವ ಕೊಟ್ಟಾರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಸುಳಿದಾಡುತ್ತಿರುವುದಂತೂ ಸುಳ್ಳಲ್ಲ.