ಕಾರವಾರ: ಒಎಸ್ಐ ಓಸಿಯನ್ ಸೋಸೈಟಿ ಆಫ್, ಇಂಡಿಯಾ ಕೋಚಿನ್, ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಹಾಗೂ ಕರ್ನಾಟಕ ಸರಕಾರದ ಅರಣ್ಯ ಇಲಾಖೆ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವಸಾಗರ ದಿನಾಚರಣೆ ಆಚರಿಸಲಾಯಿತು.
ಕಾರವಾರ ನಗರದ ಅಲಿಗದ್ದಾ ಬೀಚಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ 55 ವಿದ್ಯಾರ್ಥಿಗಳು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಕೋಸ್ಟಲ್ ಸೆಕ್ಯೂರಿಟಿ, ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಒಟ್ಟು 100 ಜನರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಸಿ. ಅವರು ಸಾಗರಗಳ ಮಹತ್ವ ಹಾಗೂ ಸಾಗರ ಮಾಲಿನ್ಯ ತಡೆಗಟ್ಟುವ ಬಗೆಗೆ ಸವಿಸ್ತಾರ ಮಾಹಿತಿ ನೀಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಜಯೇಶ ಕೆ.ಸಿ. ಭಾಗವಹಿಸಿ ಪ್ಲಾಸ್ಟಿಕ್ನಿಂದ ಸಮುದ್ರದಲ್ಲಿ ಆಗುವ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು. ಕರಾವಳಿ ಕಾವಲು ಪಡೆಯ ಪೋಲಿಸ್ ಇನ್ಸಪೆಕ್ಟರ್ ನಿಶ್ಚಲ್ ಕುಮಾರ್ ಭಾಗವಹಿಸಿದ್ದರು.
ಈ ಕಾರ್ಯಕ್ರಮದ ಸಂಯೋಜಕರಾದ ಪ್ರೋಫೆಸರ್, ಡಾ.ಜಗನ್ನಾಥ ಎಲ್. ರಾಠೋಡ ಆಡಳಿತಾಧಿಕಾರಿಗಳು, ಕ.ವಿ.ವಿ. ಸ್ನಾತಕೋತ್ತರ ಕೇಂದ್ರ ಇವರ - ಕಾರ್ಯಕ್ರಮದ ಮಹತ್ವ ಸಾಗರ : ಮಾಲಿನ್ಯ ತಡೆಗಟ್ಟುವ ಕ್ರಮಗಳು ಹಾಗೂ - ಕಡಲತೀರವನ್ನು ಶುಚಿತ್ವವಾಗಿ ಇಡುವ ಕುರಿತು ಮಾಹಿತಿ ನೀಡಿದರು. ಪ್ರಮೋದ ನಾಯಕ ವಂದಿಸಿದರು. ಡಾ. ಶಿವಕುಮಾರ ಹರಗಿ, ಡಾ. ಹನುಮಂತ ಮುಸ್ತಾರಿ, ಡಾ. ಶ್ರೀದೇವಿ ಹಕ್ಕಿಮನಿ, ಡಾ. ಶಾಹಿನಾ ಶೇಖ್, ಡಾ. ಸುಜಲ ರೇವಣಕರ, ರಾಮು ರಾಠೋಡ, ಸೂರಜ ಪೂಜಾರ, ಶಾನವಾಜ ಶೇಖ ಹಾಗೂ ಉಳಿದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸ್ವಚ್ಛತೆಯಲ್ಲಿ 397 ಕೆ.ಜಿ. ತ್ಯಾಜ್ಯ ಸಂಗ್ರಹ :
ಸುಮಾರು 500 ಮೀಟರ ಅಲಿಗದ್ದಾ ಕಡಲತೀರದಲ್ಲಿ 397 ಕೆ.ಜಿ. ಯಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಯಿತು. 135 ಕೆ.ಜಿ. ಪ್ಲಾಸ್ಟಿಕ್ ಬ್ಯಾಗ್ಸ್, 39 ಕಿ.ಜಿ. 2/4 ಮೀನಿನ ಬಲೆಗಳು, 31 ಕೆ.ಜಿ. ಪ್ಲಾಸ್ಟಿಕ್ ಬಾಟಲ್, 25 ಕೆ.ಜಿ. ಪಾದರಕ್ಷೆಗಳು, 20 ಕೆ.ಜಿ ಗಾಜಿನ ಬಾಟಲಿಗಳು, 9 ಕೆ.ಜಿ. ಪ್ಲಾಸ್ಟಿಕ್ ಡಬ್ಬಗಳು, 9 ಕೆ.ಜಿ. ಥರ್ಮೊಕೊಲ್, 8 ಕೆ.ಜಿ ಬಟ್ಟೆಗಳು, ಹಾಗೂ 119 ಕೆ.ಜಿ. ಇತರೆ ತ್ಯಾಜ್ಯಗಳು, ಸ್ಯಾನಿಟರಿ, ಎಲೆಕ್ಟಿಕ್ ವಸ್ತುಗಳು, ವೈದ್ಯಕೀಯ ತ್ಯಾಜ್ಯಗಳು, ಲೋಹಗಳು, ಆಟಿಕೆಗಳು ಇತ್ಯಾದಿಗಳಿದ್ದವು. ಸಂಗ್ರಹಿಸಿದ ಕಸವನ್ನು ನಗರಸಭೆಗೆ ಹಸ್ತಾಂತರಿಸಲಾಯಿತು.