ಭಟ್ಕಳ, ಫೆಬ್ರವರಿ ೨: ಇಲ್ಲಿನ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಶಿರೂರಿನ ಏಳು ಜನರ ತಂಡವು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವಬೆದರಿಕೆ ಹಾಕಿದೆ ಎಂದು ಆರೋಪಿಸಿ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಎಂ ಜಿ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನೀಡಿದ ದೂರಿನಲ್ಲಿ ಅರಣ್ಯ ಇಲಾಖೆಗೆ ಬೇಕಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸೋಮವಾರದಂದು ಇಲ್ಲಿನ ಸರ್ಪನಕಟ್ಟೆಯ ಟಾಟಾ ಶೋರೂಮ್ ಬಳಿ ಟಾಟಾ ಎಸಿ ಗೂಡ್ಸ ವಾಹನ(ಕೆಎ೨೦ ಎ ೮೨೨೫)ವನ್ನು ವಶಪಡಿಸಿಕೊಂಡಾಗ ಶಿರೂರಿನ ರಾಮನಾಥ ರಾಮಕೃಷ್ಣ ಭಟ್ ಹಾಗೂ ಆರು ಮಂದಿ ತನಗೆ ಹಾಗೂ ಜೊತೆಯಲ್ಲಿದ್ದ ಪಾರಸ್ಟರ್ ಪ್ರಕಾಶ ನಾಯ್ಕ, ಸಿಬ್ಬಂದಿಗಳಾದ ದೇವಪ್ಪ, ಕಾಡಪ್ಪ ಮಲ್ಲಪ್ಪ, ಮಾದೇವ, ಮಂಜುನಾಥ ಬಂಡಾರಿ, ಪಿ ಶೇಷುರವರ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವಾಹನವನ್ನು ನಮ್ಮಿಂದ ಬಲತ್ಕಾರದಿಂದ ತೆಗೆದುಕೊಂಡು ಜೀವದ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.