ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಜಾಗತಿಕ ಸುದ್ದಿ / ಲಾಹೋರ್: ಭದ್ರತಾ ಠಾಣೆಯ ಮೇಲೆ ಶಂಕಿತ ತಾಲಿಬಾನ್ ಆತ್ಮಹತ್ಯಾ ದಳದ ಧಾಳಿ - 41 ಜನರ ಹತ್ಯೆ

ಲಾಹೋರ್: ಭದ್ರತಾ ಠಾಣೆಯ ಮೇಲೆ ಶಂಕಿತ ತಾಲಿಬಾನ್ ಆತ್ಮಹತ್ಯಾ ದಳದ ಧಾಳಿ - 41 ಜನರ ಹತ್ಯೆ

Fri, 16 Oct 2009 01:22:00  Office Staff   S.O. News Service
ಲಾಹೋರ್, ಅ.೧೫: ಲಾಹೋರ್‌ನ ಮೂರು ಭದ್ರತಾ ಠಾಣೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಶಂಕಿತ ತಾಲಿಬಾನ್ ಭಯೋತ್ಪಾದಕರು, ವಾಯವ್ಯದ ಕೊಹಟ್ ನಗರದ ಪೊಲೀಸ್ ಠಾಣೆಯೊಂದನ್ನು ಆತ್ಮಹತ್ಯಾ ಬಾಂಬ್ ದಾಳಿಯ ಮೂಲಕ ಸ್ಫೋಟಿಸಿ ಕನಿಷ್ಠ ೪೧ ಮಂದಿಯನ್ನು ಹತ್ಯೆಗೈದಿದ್ದಾರೆ.

ಇಂದು ಮುಂಜಾನೆ ೯:೧೫ ಹಾಗೂ ೯:೪೦ರ ನಡುವೆ ಲಾಹೋರ್‌ನ ಎಫ್‌ಐ‌ಎ ಕಚೇರಿ ಹಾಗೂ ಎರಡು ಪೊಲೀಸ್ ತರಬೇತಿ ಶಾಲೆಗಳ ಮೇಲೆ ಮೂರು ಭಯೋತ್ಪಾದಕ ಗುಂಪುಗಳು ನಡೆಸಿದ ದಾಳಿಗಳಲ್ಲಿ ಕನಿಷ್ಠ ೨೦ ಮಂದಿ ಬಲಿಯಾಗಿದ್ದಾರೆ. ಅವರಲ್ಲಿ ೧೬ ಮಂದಿ ಭದ್ರತಾಯೋಧರಾಗಿದ್ದರೆ ೪ ಮಂದಿ ನಾಗರಿಕರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
16pak1.jpg
ಹತ್ತು ಮಂದಿ ದಾಳಿಕಾರರು ಭದ್ರತಾ ಯೋಧರ ಗುಂಡಿಗೆ ಬಲಿಯಾಗಿದ್ದಾರೆ ಅಥವಾ ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆ. ದಾಳಿಗಳಲ್ಲಿ ಸುಮಾರು ೪೦ ಮಂದಿ ಗಾಯಗೊಂಡಿದ್ದಾರೆ.

ಕೊಹಟ್‌ನಲ್ಲಿ ಆತ್ಮಹತ್ಯಾ ಬಾಂಬರೊಬ್ಬ ಸ್ಫೋಟಕ  ತುಂಬಿದ್ದ ವಾಹನವನ್ನು ಪೊಲೀಸ್ ಠಾಣೆಗೆ ನುಗ್ಗಿಸಿದಾಗ ೧೧ ಜನರು ಸಾವಿಗೀಡಾದರು.

ದುಷ್ಕರ್ಮಿಯು ಠಾಣೆಯ ಹೊರ ಗೋಡೆಗೆ ತನ್ನ ವಾಹನವನ್ನು ಅಪ್ಪಳಿಸಿದಾಗ ಭಾರೀ ಸ್ಫೋಟವುಂಟಾಯಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೃತರಲ್ಲಿ ಕೆಲವು ಪೊಲೀಸರು ಹಾಗೂ ಶಾಲಾ ಮಕ್ಕಳಾಗಿದ್ದಾರೆ. ಪೊಲೀಸ್ ಠಾಣೆ ತೀವ್ರ ಹಾನಿಗೊಳಗಾಗಿದೆಯೆಂದು ಪೊಲೀಸರು ಹೇಳಿದ್ದಾರೆ.

ಲಾಹೋರ್‌ನ ದೇವಸ್ಥಾನ ರಸ್ತೆಯಲ್ಲಿರುವ ಎಫ್‌ಐ‌ಎ ಕಚೇರಿಯಲ್ಲಿ ಉಗ್ರರು ಭದ್ರತಾಧಿಕಾರಿಗಳೊಂದಿಗೆ ಭಾರೀ ಗುಂಡಿನ ಚಕಮಕಿ ನಡೆಸಿದರು. ಬೆಡಿಯಾನ್ ರಸ್ತೆಯಲ್ಲಿನ ಪೊಲೀಸ್ ತರಬೇತಿ ಶಾಲೆ ಹಾಗೂ ಮುನಾವನ್ ಎಂಬಲ್ಲಿನ ಪೊಲೀಸ್  ತರಬೇತಿ ಶಾಲೆಯ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಸುಮಾರು ೫ ತಾಸುಗಳ ಹೋರಾಟದ ಬಳಿಕ ದಾಳಿಕೋರರನ್ನು ಹಿಮ್ಮೆಟ್ಟಿಸಲಾಯಿತೆಂದು ಲಾಹೋರ್ ನಗರದ ಪೊಲೀಸ್ ಅಧಿಕಾರಿ ಪರ್ವೇಝ್ ರಾಥೋರ್ ತಿಳಿಸಿದ್ದಾರೆ.

Share: