ಬೆಂಗಳೂರು, ಜನವರಿ 4:ದಿನೇ ದಿನೇ ಕುಸಿಯುತ್ತಿರುವ ಸರ್ಕಾರದ ವರ್ಚಸ್ಸನ್ನು ಹೆಚ್ಚಿಸುವ ದೃಷ್ಟಿಯಿಂದ ಎಲ್ಲ ಸಚಿವರ ರಾಜೀನಾಮೆ ಪಡೆದು ಸಂಪುಟವನ್ನು ಪುನರ್ರಚಿಸಬೇಕು, ನಿಗಮ ಮಂಡಳಿಗಳಲ್ಲಿ ಪಕ್ಷ ನಿಷ್ಟರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬಿಜೆಪಿ ಶಾಸಕರು ಇಂದಿಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿದ್ದಾರೆ.
ಬೆಂಗಳೂರಿನ ಗೋಲ್ಡನ್ಪಾಮ್ ರೆಸಾರ್ಟ್ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಬೆಳ್ಳುಬ್ಬಿ, ಕಳಕಪ್ಪ ಬಂಡಿ ಸೇರಿದಂತೆ ಹಲವು ಶಾಸಕರು, ಗರಂ ಆಗಿ ಮಾತನಾಡಿದ್ದು ಆ ಮೂಲಕ ಇದೇ ಮೊದಲ ಬಾರಿ ಶಾಸಕಾಂಗ ಸಭೆಯಲ್ಲಿ ಯಡಿಯೂರಪ್ಪ ಅಗ್ನಿಪರೀಕ್ಷೆಗೆ ಗುರಿಯಾಗಿದ್ದು ವಿಶೇಷ.
ಪಕ್ಷದಲ್ಲಿ ಮೇಲಿಂದ ಮೇಲೆ ಭುಗಿಲೇಳುತ್ತಿದ್ದ ಭಿನ್ನಮತವನ್ನು ನಿವಾರಿಸುವ ದೃಷ್ಟಿಯಿಂದಲೇ ಕರೆದಿದ್ದ ಶಾಸಕಾಂಗ ಸಭೆಯಲ್ಲಿ ಯಡಿಯೂರಪ್ಪ ಅವರ ನಿರೀಕ್ಷೆಯನ್ನು ಮೀರಿ ಮಾತನಾಡಿದ ಹಲವು ಶಾಸಕರು, ಮಂತ್ರಿ ಮಂಡಲದಲ್ಲಿರುವ ಎಲ್ಲರ ಬಳಿ ರಾಜೀನಾಮೆ ಪಡೆದು ಸಂಪುಟ ಪುನರ್ರಚನೆಗೆ ಚಾಲನೆ ನೀಡಬೇಕು ಎಂದರು.
ಈಗ ಸಚಿವ ಸಂಪುಟದಲ್ಲಿರುವ ಬಹುತೇಕರು ಹಿಂದೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರವಿದ್ದಾಗಲೂ ಅಧಿಕಾರ ಅನುಭವಿಸಿದವರು. ಅದೇ ರೀತಿ ಇನ್ನು ಕೆಲವರು ಕಳೆದ ಚುನಾವಣೆಯ ವೇಳೆಗೆ ಪಕ್ಷಕ್ಕೆ ಬಂದು ಅಧಿಕಾರ ಅನುಭವಿಸುತ್ತಿರುವವರು.
ಈ ಮಧ್ಯೆ ಬಿಜೆಪಿಗೆ ನಿಷ್ಟರಾಗಿದ್ದುಕೊಂಡು ಮೂರ್ನಾಲ್ಕು ಬಾರಿ ಶಾಸಕರಾಗಿ ಗೆದ್ದು ಬಂದವರು ಅಧಿಕಾರ ಸಿಗದೇ ಮೌನವಾಗಿರುವ ಸ್ಥಿತಿ ಸೃಷ್ಟಿಯಾಗಿದೆ. ಇದು ಸರಿಯಲ್ಲ.
ಹೀಗಾಗಿ ಹಾಲೀ ಸಚಿವ ಸಂಪುಟದಲ್ಲಿರುವ ಎಲ್ಲ ಸಚಿವರಿಂದ ನೀವು ರಾಜೀನಾಮೆ ಪಡೆಯಬೇಕು, ನಂತರ ಸರ್ಕಾರ ಹಾಗೂ ಪಕ್ಷದ ವರ್ಚಸ್ಸಿಗೆ ಪೂರಕವಾಗಿರುವವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು.
ಸಂಪುಟ ಪುನರ್ರಚಿಸುವಾಗ ಹಿರಿಯರಿಗೆ ಮತ್ತು ಪಕ್ಷ ನಿಷ್ಟರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ ಈ ಶಾಸಕರು, ಹಿಂದೆ ಆಗಿರುವ ನಿಗಮ-ಮಂಡಳಿಗಳ ನೇಮಕಾತಿಯನ್ನೂ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಸಂಪುಟವನ್ನು ಪುನರ್ರಚಿಸುವಾಗ ಎಲ್ಲ ಜಾತಿ, ವರ್ಗಗಳಿಗೆ ಪ್ರಾತಿನಿಧ್ಯ ಸಿಗುವಂತೆ ನೋಡಿಕೊಳ್ಳಬೇಕು, ಆಯಾ ಜಿಲ್ಲೆಯವರಿಗೇ ಉಸ್ತುವಾರಿ ಹೊಣೆಗಾರಿಕೆಯನ್ನು ವಹಿಸಿಕೊಡಬೇಕು ಎಂದೂ ನುಡಿದರು.
ಹೀಗೆ ನಿಗಮ ಮಂಡಳಿಗಳಿಗೆ ಮಾಡಿದ ನೇಮಕಾತಿಯನ್ನು ರದ್ದುಪಡಿಸಿ ಪಕ್ಷ ನಿಷ್ಟರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ ಅವರು, ನೆನ್ನೆ ಮೊನ್ನೆ ಬಂದವರಿಗೆ ನೀವು ಅಧಿಕಾರ ನೀಡಿದರೆ ನಿಷ್ಟರ ಗತಿಯೇನು ಎಂದು ಪ್ರಶ್ನಿಸಿದರು.
ಇನ್ನು ಶಾಸಕರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡುವ ವಿಷಯದಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಇದು ನಿಲ್ಲಬೇಕು, ಒಂದು ಕ್ಷೇತ್ರಕ್ಕೆ ಬೆಣ್ಣೆ, ಒಂದು ಕ್ಷೇತ್ರಕ್ಕೆ ಸುಣ್ಣ ಎಂಬಂತಾಗಬಾರದು ಎಂದೂ ಎಚ್ಚರಿಸಿದರು.
ನಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಅಧಿಕಾರಿಗಳನ್ನು ಹಾಕಿಕೊಡಬೇಕು ಎಂದು ನಾವು ಹೇಳುತ್ತೇವೋ? ಅವರನ್ನೇ ಹಾಕಿಕೊಡಬೇಕು ಎಂದು ಒತ್ತಾಯಿಸಿದರು.
ನಮ್ಮ ಕಷ್ಟಗಳನ್ನು ಇದೀಗ ಕೇಳಲು ಶುರು ಮಾಡಿದ್ದೀರಿ. ಇನ್ನು ನಾವು ಎಲ್ಲಿಗೂ ಹೋಗುವುದಿಲ್ಲ. ಆದರೆ ನಮ್ಮ ಕಷ್ಟ ಕೇಳುವ ಕೆಲಸ ನಿಂತರೆ ನಮ್ಮ ದಾರಿ ನಾವು ಹಿಡಿಯುವ ಪರಿಸ್ಥಿತಿ ಬರಬಹುದು ಎಂದು ಈ ಶಾಸಕರು ನೇರವಾಗಿ ನುಡಿದರು.
ನಾವು ಕೆಲಸ ಮಾಡುವಾಗ ನೂರು ತೊಂದರೆಗಳು ಇರುತ್ತವೆ. ಅದನ್ನು ಯಾರೂ ಕೇಳುವುದಿಲ್ಲ ಎಂದರೆ ನಾವು ಯಾರ ಬಳಿ ಕಷ್ಟ ಹೇಳಿಕೊಳ್ಳಬೇಕು? ಎಂದು ಪ್ರಶ್ನಿಸಿದರು.
ನಮ್ಮ ಕ್ಷೇತ್ರದ ವಿಷಯ ಬಂದಾಗ ಇನ್ಯಾರೋ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ನಾವು ನಮ್ಮ ಕ್ಷೇತ್ರಗಳಲ್ಲೇ ಅಸಹಾಯಕರಾಗುವ ಪರಿಸ್ಥಿತಿ ಬರುತ್ತದೆ ಎಂದರು.
ಈ ಮಧ್ಯೆ ಪರಿಶಿಷ್ಟರಿಗೆ ಒಳಮೀಸಲಾತಿ ಕಲ್ಪಿಸಿಕೊಡಬೇಕು ಎಂಬ ಬೇಡಿಕೆಯೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಬಿಜೆಪಿ ಶಾಸಕರು ಪ್ರಸ್ತಾಪ ಮಾಡಿದರೆಂದು ಮೂಲಗಳು ವಿವರ ನೀಡಿವೆ.
ಉನ್ನತ ಮೂಲಗಳ ಪ್ರಕಾರ; ಬಿಜೆಪಿ ಶಾಸಕಾಂಗ ಸಭೆಯಲ್ಲಿ ಪಕ್ಷದ ಶಾಸಕರು ನೇರವಾಗಿ ತಿರುಗಿಬಿದ್ದ ರೀತಿಯಿಂದ ಸುಸ್ತಾದ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ: ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸುವ ಭರವಸೆ ನೀಡಿದರು ಎನ್ನಲಾಗಿದೆ.